ಬೆಂಗಳೂರು:ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯ ಕುರಿತು ಬಿಜೆಪಿಯ ಅಧಿಕೃತ ಸಾಮಾಜಿಕ ಖಾತೆಯಲ್ಲಿ ಪ್ರಸಾರ ಮಾಡಲಾಗಿದ್ದ ಆಕ್ಷೇಪಾರ್ಹವಾದ ಅನಿಮೇಟೆಡ್ ವಿಡಿಯೋಗೆ ಆಕ್ಷೇಪಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧದ ಎಫ್‌ಐಆರ್ ತನಿಖೆಗೆ ಹೈಕೋರ್ಟ್ ತಡೆ ನೀಡಿದೆ.
ಪ್ರಕರಣ ಸಂಬಂಧ ನಗರದ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಪ್ರಶ್ನಿಸಿ ಬಿ.ವೈ. ವಿಜಯೇಂದ್ರ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಎಫ್‌ಐಆರ್‌ಗೆ ತಡೆ ನೀಡಿ ವಿಚಾರಣೆ ಮುಂದೂಡಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ''ಪ್ರಕರಣದಲ್ಲಿ ಆಡಳಿತದಲ್ಲಿದ್ದ ರಾಜಕೀಯ ಪಕ್ಷದವನ್ನು ಟೀಕಿಸಿದ್ದು, ಅದು ಅಪರಾಧವಾಗುವುದಿಲ್ಲ. ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಆರೋಪ ಹೊರಿಸಲಾಗಿದೆ. ಒಂದೇ ಟ್ವೀಟ್‌ಗೆ ಕಾಂಗ್ರೆಸ್ ಮುಖಂಡ ರಮೇಶ್ ಬಾಬು ಮತ್ತು ಚುನಾವಣಾ ಆಯೋಗ ಎಫ್‌ಐಆರ್ ದಾಖಲಿಸಿದ್ದು, ಇದು ಕಾನೂನುಬಾಹಿರ. ಹೀಗಾಗಿ, ಎಫ್‌ಐಆರ್ ರದ್ದುಗೊಳಿಸಬೇಕು'' ಎಂದು ಮನವಿ ಮಾಡಿದರು.