ಬೆಂಗಳೂರು:ನಗರದ ಬೆಂಗಳೂರು ವಿಶ್ವವಿದ್ಯಾಲಯಗಳಿಗೆ ನಾಮನಿರ್ದೇಶನಗೊಂಡಿರುವ 9 ಮಂದಿ ಸಿಂಡಿಕೇಟ್ ಸದಸ್ಯರು ಆ ಸ್ಥಾನದಲ್ಲಿ ಕಾರ್ಯನಿರ್ವಹಣೆ ಮಾಡದಂತೆ ಹಾಗೂ ಸಿಂಡಿಕೇಟ್ ಸಭೆಯಲ್ಲಿ ಭಾಗವಹಿಸದಂತೆ ಹೈಕೋರ್ಟ್ ಮತ್ತೊಮ್ಮೆ ಮೌಖಿಕ ಸೂಚನೆ ನೀಡಿದೆ. ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು ನಗರ ವಿಶ್ವವಿದ್ಯಾಲಯ ಮತ್ತು ಬೆಂಗಳೂರು ಉತ್ತರ ವಿಶ್ವವಿದ್ಯಾಲಯಗಳಿಗೆ 9 ಸಿಂಡಿಕೇಟ್ ಸದಸ್ಯರ ನಾಮನಿರ್ದೇಶನ ಮಾಡಿ ರಾಜ್ಯ ಉನ್ನತ ಶಿಕ್ಷಣ ಇಲಾಖೆ ಆಗಸ್ಟ್ 27ರಂದು ಆದೇಶ ಹೊರಡಿಸಿತ್ತು.
ಈ ಆದೇಶ ಪ್ರಶ್ನಿಸಿ ಶಿಕ್ಷಣ ತಜ್ಞರಾದ ಡಾ.ಪಿ.ಬಿ.ಜಯಕೃಷ್ಣ, ಕೆ.ರಾಮಮೂರ್ತಿ, ಆರ್‌ಎಸ್‌ಎನ್ ಪ್ರಸಾದ್ ಮತ್ತು ಡಾ.ಎಂ.ಚಿಕ್ಕಮುನಿಯಪ್ಪ ಹೈಕೋರ್ಟ್‌ಗೆ ತಕರಾರು ಅರ್ಜಿಗಳನ್ನು ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ಪೀಠ, ನಾಮನಿರ್ದೇಶಿತ ಸಿಂಡಿಕೇಟ್ ಸದಸ್ಯರು ತಮ್ಮ ಸ್ಥಾನದಲ್ಲಿ ಕಾರ್ಯನಿರ್ವಹಣೆ ಮಾಡದಂತೆ ಹಿಂದಿನ ವಿಚಾರಣೆ ವೇಳೆ ಸೂಚಿಸಲಾಗಿತ್ತು. ಆದರೆ, ಇತ್ತೀಚೆಗೆ ನಡೆದ ಬೆಂಗಳೂರು ಉತ್ತರ ವಿವಿಯ ಘಟಿಕೋತ್ಸವದಲ್ಲಿ ನಾಮನಿರ್ದೇಶಿತ ಸಿಂಡಿಕೇಟ್ ಸದಸ್ಯರು ಭಾಗವಹಿಸಿದ್ದಾರೆ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಪೀಠದ ಗಮನಕ್ಕೆ ತಂದರು. ನ್ಯಾಯಾಲಯದ ಸೂಚನೆಯಿದ್ದರೂ ಈ ರೀತಿ ನಡೆದುಕೊಳ್ಳುವುದು ಸರಿಯಲ್ಲವೆಂದು ಪೀಠ ನುಡಿಯಿತು.
ಬಳಿಕ ನ್ಯಾಯಪೀಠ, ಸಿಂಡಿಕೇಟ್ ಸದಸ್ಯರಿಗೆ ಆ ಸ್ಥಾನದಲ್ಲಿ ಕಾರ್ಯ ನಿರ್ವಹಿಸದಂತೆ ಸೂಚನೆ ನೀಡುವಂತೆ ಸರ್ಕಾರದ ಪರ ವಕೀಲರಿಗೆ ಮೌಖಿಕವಾಗಿ ಸೂಚಿಸಿತು. ಈ ವೇಳೆ ಸರ್ಕಾರದ ಪರ ವಕೀಲರು, ಅರ್ಜಿಗಳಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೋರಿದರಲ್ಲದೇ, ಪ್ರತಿವಾದಿಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಪರಿಣಿತರಾಗಿದ್ದು, ಅವರ ನಾಮನಿರ್ದೇಶನ ಪ್ರಕ್ರಿಯೆಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಕೋರಿದರು.