ಬೆಂಗಳೂರು: ಪದೇ ಪದೇ ಮದುವೆಯಾಗಿ ವಿಚ್ಛೇದನ ನೀಡುವುದನ್ನೇ ಅಭ್ಯಾಸ ಮಾಡಿಕೊಂಡಿದ್ದಲ್ಲದೇ ಇಬ್ಬರು ಪತ್ನಿಯರಿಗೆ ವಿಚ್ಛೇದನ ನೀಡಿದ ಅಂಶ ಮುಚ್ಚಿಟ್ಟು ಮೂರನೇ ಮದುವೆಯಾಗಿ ಆಕೆಗೂ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದ ಗಂಡನಿಗೆ ಹೈಕೋರ್ಟ್ 25 ಸಾವಿರ ರೂ. ದಂಡ ವಿಧಿಸಿದೆ. ಅಲ್ಲದೆ, ವಿನಾಕಾರಣ ಕೋರ್ಟ್ ಮೆಟ್ಟಿಲೇರುವಂತೆ ಮಾಡಿದ್ದಕ್ಕೆ ದಂಡದ ಮೊತ್ತವನ್ನು ಮೂರನೇ ಪತ್ನಿಗೆ ಪರಿಹಾರವಾಗಿ ನೀಡಲು ಸೂಚನೆ ನೀಡಿ ಕೋರ್ಟ್ ಆದೇಶಿಸಿದೆ.
ಮೂರನೇ ಪತ್ನಿಗೆ ವಿಚ್ಛೇದನ ಕೋರಿ ಶಿವಮೊಗ್ಗ ನಗರದ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನು ಶಿವರಾಮನ್ ಮತ್ತು ನ್ಯಾಯಮೂರ್ತಿ ಉಮೇಶ್ ಅಡಿಗ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೆ, ಅಸ್ಪಷ್ಟವಾದ ಆಧಾರಗಳ ಮೇಲೆ ಪವಿತ್ರವಾದ ವಿವಾಹ ಬಂಧವನ್ನು ಬೇರ್ಪಡಿಸಲಾಗದು ಎಂದು ತಿಳಿಸಿದೆ.
ಪ್ರಕರಣದಲ್ಲಿ ಅರ್ಜಿದಾರರು ಈಗಾಗಲೇ ಇಬ್ಬರು ಮಹಿಳೆಯರನ್ನು ವಿವಾಹವಾಗಿ ವಿಚ್ಛೇದನ ಪಡೆದುಕೊಂಡಿದ್ದಾರೆ. ಮೂರನೇ ಮದುವೆಯಾಗಿ ಮೂರರಿಂದ ನಾಲ್ಕು ತಿಂಗಳುಗಳ ಕಾಲ ಒಟ್ಟಿಗೆ ಜೀವನ ನಡೆಸಿದ್ದಾರೆ. ಆದರೆ, ಎಷ್ಟು ದಿನಗಳ ಕಾಲ ದಂಪತಿ ಒಟ್ಟಿಗೆ ನೆಲೆಸಿದ್ದರು ಎಂಬುದಕ್ಕೆ ಸಂಬಂಧಿಸಿದಂತೆ ತಪ್ಪು ಮಾಹಿತಿ ನೀಡಿದ್ದಾರೆ. ಅಲ್ಲದೆ, ಪತ್ನಿ ತನ್ನನ್ನು ಕ್ರೂರವಾಗಿ ನಡೆಸಿಕೊಂಡಿದ್ದಾರೆ ಎಂಬುದಾಗಿ ಆರೋಪಿಸಿದ್ದಾರೆ. ಅದಕ್ಕೆ ಯಾವುದೇ ಸಾಕ್ಷ್ಯಾಧಾರಗಳನ್ನು ಒದಗಿಸಿಲ್ಲ. ಹೀಗಾಗಿ ದಂಪತಿಯ ಪವಿತ್ರ ಸಂಬಂಧವನ್ನು ಅಸ್ಪಷ್ಟ ಮತ್ತು ಅಸಹಜವಾದ ಆಧಾರದಿಂದ ಬೇರ್ಪಡಿಸಲಾಗುವುದಿಲ್ಲ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಪ್ರಕರಣದ ಹಿನ್ನೆಲೆ:ಅರ್ಜಿದಾರ ಕುಮಾರ್ ನಾಯಕ್ ಮತ್ತು ಶೈಲಜಾ ನಾಯಕ್ (ಹೆಸರುಗಳನ್ನು ಬದಲಿಸಲಾಗಿದೆ) 2019ರ ಡಿಸೆಂಬರ್ 13ರಂದು ವಿವಾಹವಾಗಿದ್ದರು. 2020ರ ಫೆಬ್ರವರಿ 10ರಂದು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಿಸಿಕೊಂಡಿದ್ದರು. ದಂಪತಿ ಶಿವಮೊಗ್ಗದಲ್ಲಿ ನೆಲೆಸಿದ್ದರು.