ಬೆಂಗಳೂರು:ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ(ಬಿಬಿಎಂಪಿ) ಸಹಾಯಕ ಸಿವಿಲ್ ಎಂಜಿನಿಯರ್ ಹುದ್ದೆಗಳ ನೇಮಕಾತಿ ವಿಳಂಬ ಸಂಬಂಧಿಸಿದಂತೆ ಹೈಕೋರ್ಟ್, ಕರ್ನಾಟಕ ಲೋಕಸೇವಾ ಆಯೋಗಕ್ಕೆ (ಕೆಪಿಎಸ್‌ಸಿ) ನೋಟಿಸ್ ಜಾರಿ ಮಾಡಿದೆ. ನಗರದಲ್ಲಿ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುವ ಸಂಬಂಧ ಸರ್ಕಾರ ಹಾಗೂ ಬಿಬಿಎಂಪಿಗೆ ಅಗತ್ಯ ನಿರ್ದೇಶ ನೀಡಲು ಹೈಕೋರ್ಟ್ ದಾಖಲಿಸಿಕೊಂಡಿದ್ದ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಮಾಡಿತು.
ಅರ್ಜಿಯನ್ನು 2023ರ ಅ.9ರಂದು ವಿಚಾರಣೆ ನಡೆಸಿದಾಗ, ಅಕ್ರಮ ಕಟ್ಟಡಗಳನ್ನು ಗುರುತಿಸಿ ಹಾಗೂ ತೆರವು ಕಾರ್ಯಾಚರಣೆ ಕೈಗೊಳ್ಳಲು ಎಂಜಿನಿಯರ್ ಸೇರಿದಂತೆ ಇತರೆ ಸಿಬ್ಬಂದಿ ಅಗತ್ಯವಾಗಿದೆ. 100 ಸಹಾಯಕ ಸಿವಿಲ್ ಎಂಜಿನಿಯರ್ ಹುದ್ದೆ ಭರ್ತಿ ಮಾಡುವಂತೆ ಕೆಪಿಎಸ್‌ಸಿ ಕಾರ್ಯದರ್ಶಿಗೆ ಬಿಬಿಎಂಪಿ ಪತ್ರ ಬರೆದಿತ್ತು ಎಂಬ ವಿಚಾರವನ್ನು ಗಮನಿಸಿತ್ತು. ಅದರ ಆಧಾರದ ಮೇಲೆ ಎಂಜಿನಿಯರಿಂಗ್ ಹುದ್ದೆಗಳ ನೇಮಕ ಪ್ರಕ್ರಿಯೆಯನ್ನು ಆರು ತಿಂಗಳಲ್ಲಿ ಪೂರ್ಣಗೊಳಿಸುವಂತೆ ಬಿಬಿಬಿಎಂಪಿ ಹಾಗೂ ಕೆಪಿಎಸ್‌ಸಿಗೆ ನಿರ್ದೇಶಿಸಿತ್ತು.
ಇದನ್ನೂ ಓದಿ: ಬಿಇ ಆಗಿದೆಯಾ?: 327 ಸಹಾಯಕ ಇಂಜಿನಿಯರ್, ಸಹಾಯಕ ನಿರ್ದೇಶಕರ ಹುದ್ದೆಗೆ ಅಧಿಸೂಚನೆ - ಬೇಗನೇ ಅರ್ಜಿ ಹಾಕಿ
ಬುಧವಾರ ಅರ್ಜಿ ವಿಚಾರಣೆಗೆ ಬಂದ ಪ್ರಕರಣದಲ್ಲಿ ಅಮೈಕಾಸ್ ಕ್ಯೂರಿ ಆಗಿರುವ ಹಿರಿಯ ವಕೀಲ ಪ್ರಮೋದ್ ಎನ್.ಕಟಾವಿ, ಕಾಲಮಿತಿಯೊಳಗೆ ಎಂಜಿನಿಯರ್ ಹುದ್ದೆ ಭರ್ತಿ ಮಾಡುವಂತೆ ಹೈಕೋರ್ಟ್ ನಿರ್ದೇಶಿಸಿತ್ತು. ಆದರೆ, ಬಿಬಿಎಂಪಿ ನೇಮಕಾತಿ ಮಾಡಿದೆಯೋ ಅಥವಾ ಇಲ್ಲವೋ ಎಂಬ ಅಂಶದ ಕುರಿತು ಸರಿಯಾದ ಮಾಹಿತಿ ಲಭ್ಯವಿಲ್ಲ ಎಂದು ತಿಳಿಸಿದರು.