ಬೆಂಗಳೂರು: ಪೋಕ್ಸೋ ಕಾಯ್ದೆ ಆರೋಪಿ ಖುಲಾಸೆಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶ ರದ್ದುಪಡಿಸಿರುವ ಹೈಕೋರ್ಟ್, ಅಪರಾಧಿಗೆ 10 ವರ್ಷಗಳ ಕಠಿಣ ಶಿಕ್ಷೆ ಹಾಗೂ 25 ಸಾವಿರ ರೂಪಾಯಿ ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪೊಲೀಸರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಬಿ.ಪ್ರಭಾಕರ ಶಾಸ್ತ್ರಿ ಮತ್ತು ಉಮೇಶ್ ಎಂ.ಅಡಿಗ ಅವರನ್ನೊಳಗೊಂಡ ಪೀಠವು ಈ ಆದೇಶ ಮಾಡಿದೆ.
ಅಪ್ರಾಪ್ತೆಯೊಂದಿಗೆ ಒಪ್ಪಿತ ಲೈಂಗಿಕ ಕ್ರಿಯೆ ನಡೆದಿದೆ ಎಂಬುದಾಗಿ ಪರಿಗಣಿಸಿ ವಿಚಾರಣಾ ನ್ಯಾಯಾಲಯ ಆರೋಪಿಯನ್ನು ಖುಲಾಸೆಗೊಳಿಸಿರುವುದು ದೋಷಪೂರಿತವಾಗಿದೆ ಎಂದು ನ್ಯಾಯಪೀಠ ಹೇಳಿದೆ. ಅಲ್ಲದೇ, ಅಪರಾಧಿಗೆ 10 ವರ್ಷಗಳ ಕಾಲ ಕಠಿಣ ಶಿಕ್ಷೆ ವಿಧಿಸಿದ್ದು, 25 ಸಾವಿರ ರೂ.ಗಳ ದಂಡ ವಿಧಿಸಿದೆ. ಈ ದಂಡದ ಮೊತ್ತದಲ್ಲಿ 20 ಸಾವಿರ ರೂಪಾಯಿಗಳ ಸಂತ್ರಸ್ತೆಗೆ ಪಾವತಿ ಮಾಡಬೇಕು ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಪ್ರಕರಣದ ಹಿನ್ನೆಲೆ ಏನು?:2016ರ ಏಪ್ರಿಲ್ 3ರಂದು ಹೊನ್ನಾಳಿ ಠಾಣೆಯಲ್ಲಿ ಸಂತ್ರಸ್ತೆಯ ಪೋಷಕರು ದೂರೊಂದು ದಾಖಲಿಸಿದ್ದರು. 15 ವರ್ಷದ ಅಪ್ರಾಪ್ತೆ ಆಗಿರುವ ತಮ್ಮ ಮಗಳನ್ನು ಆರೋಪಿ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದಾನೆ. ಇದರಿಂದ ಸಂತ್ರಸ್ತೆಯು ಗರ್ಭಿಣಿಯಾಗಿದ್ದು, ವಿವಾಹಕ್ಕೆ ನಿರಾಕರಿಸುತ್ತಿದ್ದಾನೆ ಎಂದು ಪೋಷಕರು ತಮ್ಮ ದೂರು ನೀಡಿದ್ದರು.