ಬೆಂಗಳೂರು:ಕಳೆದ ಜನವರಿ ತಿಂಗಳಲ್ಲಿ ನಡೆದ ವೈದ್ಯಕೀಯ ಪದವಿ ಕೋರ್ಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ನೆರವಾಗುವುದಕ್ಕಾಗಿ ಐದು ಗ್ರೇಸ್ (ಹೆಚ್ಚುವರಿ) ಅಂಕಗಳನ್ನು ಮಂಜೂರು ಮಾಡಲು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ನಿರ್ದೇಶನ ನೀಡುವಂತೆ ಕೋರಿ ಹಲವು ಎಂಬಿಬಿಎಸ್ ಪದವಿ ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಅಭಿನ್ ಥಾಮಸ್ ಸಭಾಸ್ಟಿಯನ್ ಎಂಬ ವಿದ್ಯಾರ್ಥಿ ಸೇರಿದಂತೆ ಹಲವರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನೀಲ್‌ದತ್ತ ಯಾದವ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಅಲ್ಲದೇ, ರಾಷ್ಟ್ರೀಯ ವೈದ್ಯಕೀಯ ಮಂಡಳಿ ಕಾಯಿದೆಯಡಿ ರಚಿಸಲಾದ ವೈದ್ಯಕೀಯ ಶಿಕ್ಷಣ ಮಂಡಳಿ 2023ರ ಆಗಸ್ಟ್ ೧ರಂದು ಹೊರಡಿಸಿರುವ ಮಾರ್ಗಸೂಚಿಗಳ ಪ್ರಕಾರ ಗ್ರೇಸ್ ಅಂಕಗಳನ್ನು ನೀಡುವುದನ್ನು ರದ್ದುಗೊಳಿಸಲಾಗಿದೆ. 2019ರ ನಿಯಮಗಳ ಅಡಿ ಗ್ರೇಸ್ ಅಂಕಗಳನ್ನು ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ. ಆದರೆ, ಈಗಾಗಲೇ ರೂಪಿಸಿರುವ ನಿಯಮಗಳಿಗೆ ವಿರುದ್ಧವಾಗಿ ನ್ಯಾಯಾಲಯಗಳು ನಿರ್ದೇಶನಗಳನ್ನು ನೀಡುವ ಮೂಲಕ ಶೈಕ್ಷಣಿಕ ಸಂಸ್ಥೆಗಳ ನಿಯಮಾವಳಿಗಳನ್ನು ಬದಲಾಯಿಸಲು ಸಾಧ್ಯವಾಗುವುದಿಲ್ಲ ಎಂದು ಪೀಠ ತಿಳಿಸಿದೆ.
ಜೊತೆಗೆ, ಶಿಕ್ಷಣ ವ್ಯವಸ್ಥೆಯಲ್ಲಿ ಮೌಲ್ಯಮಾಪನದ ಮಾನದಂಡಗಳು ಮತ್ತು ವಿಧಾನಗಳನ್ನು ಬದಲಾಯಿಸುವುದು ಆಂತರಿಕ ವಿಚಾರವಾಗಿರಲಿದೆ. ಅಂತಹ ಅಂಶಗಳ ನಿರ್ವಹಣೆ ಶೈಕ್ಷಣಿಕ ಸಂಸ್ಥೆಗಳ ಸಂಪೂರ್ಣ ವಿವೇಚನೆಗೆ ಒಳಪಟ್ಟಿದ್ದಾಗಿರಲಿದೆ. ಪರೀಕ್ಷೆಯ ಮಾನದಂಡಗಳು ಮತ್ತು ಕೋರ್ಸ್‌ಗಳಲ್ಲಿನ ಬದಲಾಗುತ್ತಿರುವುದು ಕ್ರಿಯಾತ್ಮಕ ವ್ಯವಸ್ಥೆಯಾಗಿದ್ದು, ಈ ಅಧಿಕಾರವನ್ನು ಮೊಟಕುಗೊಳಿಸಲಾಗದು. ಪರೀಕ್ಷೆ ನಡೆಯುವ ದಿನಾಂಕದಂದು ಚಾಲ್ತಿಯಲ್ಲಿರುವ ಮೌಲ್ಯಮಾಪನ ಮಾನದಂಡಗಳು ಆ ಸಾಲಿಗೆ ಅನ್ವಯವಾಗಲಿದೆ ಎಂದು ಪೀಠ ಹೇಳಿದೆ.
ಗ್ರೇಸ್ ಅಂಕ ನೀಡಲಾಗುವುದಿಲ್ಲ ಎಂದ ಪೀಠ: ಅಲ್ಲದೇ, ಭಾರತೀಯ ವೈದ್ಯಕೀಯ ಮಂಡಳಿ ಕಾಯಿದೆ 1956ರ ಅಡಿ ರೂಪಿಸಿರುವ 2019ರಲ್ಲಿ ನಿಯಮಾವಳಿಗಳ ಪ್ರಕಾರ ಗ್ರೇಸ್ ಅಂಕಗಳನ್ನು ಒದಗಿಸಲು ಅವಕಾಶ ನೀಡಲಾಗಿತ್ತು. ಆದರೆ, ರಾಷ್ಟ್ರೀಯ ವೈದ್ಯಕೀಯ ಮಂಡಳಿ 2018ರ ಕಾಯಿದೆ ಸೆಕ್ಷನ್ 24(1)(ಇ)ನ ಅಧಿಕಾರವನ್ನು ಚಲಾಯಿಸಿ 2023ರಲ್ಲಿ ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಹೊಸ ಮಾನದಂಡಗಳನ್ನು ರಚನೆ ಮಾಡಲಾಗಿದೆ. ಪ್ರಸ್ತುತ ಹೊಸ ಮಾನದಂಡಗಳು ಚಾಲ್ತಿಯಲ್ಲಿದ್ದು, ಅರ್ಜಿದಾರರ ಮನವಿಯಂತೆ ಗ್ರೇಸ್ ಅಂಕಗಳನ್ನು ನೀಡಲಾಗುವುದಿಲ್ಲ. ಅಲ್ಲದೆ, ಅರ್ಜಿದಾರರ ವಾದವನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಪ್ರಕರಣದ ಹಿನ್ನೆಲೆ:ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಪದವಿ ಕೋರ್ಸ್‌ಗಳ ಉತ್ತರ ಪತ್ರಿಕೆಗಳ (ಥಿಯರಿ) ಮೌಲ್ಯಮಾಪನ ಮತ್ತು ಅಂಕಗಳ ಲೆಕ್ಕಾಚಾರದ ಕಾರ್ಯವಿಧಾನಕ್ಕೆ ಸಂಬಂಧಿಸಿದಂತೆ 2022ರ ಸೆಪ್ಟೆಂಬರ್ 5ರಂದು ಕೇಂದ್ರೀಯ ಮೌಲ್ಯಮಾಪನ ಕಾರ್ಯಕ್ರಮ (ಸಿಎಪಿ) ಸುಗ್ರೀವಾಜ್ಞೆ/ಸುತ್ತೋಲೆ ಹೊರಡಿಸಿತ್ತು.
ಈ ಸುತ್ತೋಲೆಯ ಪ್ರಕಾರ ವಿವಿಯ ಎಲ್ಲ ಪದವಿ ಆರೋಗ್ಯ ವಿಜ್ಞಾನ ಕೋರ್ಸ್‌ಗಳ ಉತ್ತರ ಪತ್ರಿಕೆಗಳು ಮೊದಲು ಅರ್ಹ ಪರೀಕ್ಷಕರಿಂದ ಸಾಮಾನ್ಯ ಮೌಲ್ಯಮಾಪನಕ್ಕೆ ಒಳಪಡಿಸಬೇಕು. ಬಳಿಕ ಡಿಜಿಟಲ್ ಮೌಲ್ಯಮಾಪನ ವ್ಯವಸ್ಥೆಯ ಮೂಲಕ ಆಯಾ ವಿಭಾಗಗಳ ಎರಡನೇ ಅರ್ಹ ಪರೀಕ್ಷಕರಿಂದ ಮೌಲ್ಯಮಾಪನ ಮಾಡಬೇಕು. ಎರಡೂ ಮೌಲ್ಯಮಾಪಕರಲ್ಲಿ ಒಬ್ಬರು ನೀಡಿದ ಒಟ್ಟು ಅಂಕಗಳಲ್ಲಿ ಅತ್ಯಧಿಕವಾಗಿರುವುದನ್ನು ಪರಿಗಣಿಸಿ, ಆ ಮೂಲಕ ಫಲಿತಾಂಶದ ಲೆಕ್ಕಾಚಾರವನ್ನು ಪರಿಗಣಿಸಿ ಪ್ರಕಟ ಮಾಡಬೇಕು ಎಂಬುದಾಗಿ ತಿಳಿಸಲಾಗಿತ್ತು.
ಅಲ್ಲದೆ, ಎರಡೂ ಮೌಲ್ಯಮಾಪನದಲ್ಲಿ ಫಲಿತಾಂಶ 10 ಅಂಕಗಳಿಗೂ ಹೆಚ್ಚು ವ್ಯತ್ಯಾಸ ಕಂಡುಬಂದಲ್ಲಿ ಮುಂದಿನ ಮೌಲ್ಯಮಾಪನಕ್ಕೆ ವಹಿಸಲಾಗುತ್ತಿತ್ತು. ಈ ಮೂಲಕ ನೀಡಿದ ಅಂಕಗಳು ಮತ್ತು ಫಲಿತಾಂಶವೇ ಅಂತಿಮವಾಗಿತ್ತು. ಜೊತೆಗೆ, ಮರು ಮೌಲ್ಯಮಾಪನಕ್ಕೆ ಅವಕಾಶವಿರುವುದಿಲ್ಲ ಎಂಬುದಾಗಿ ಸುತ್ತೋಲೆ ತಿಳಿಸಿತ್ತು. ಇದನ್ನು ಪ್ರಶ್ನಿಸಿ ವಿದ್ಯಾರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ:ಅತ್ಯಾಚಾರ ಆರೋಪ ಪ್ರಕರಣ: ಶಾಸಕ ಮುನಿರತ್ನಗೆ 14 ದಿನ ನ್ಯಾಯಾಂಗ ಬಂಧನ - Judicial Custody For Munirathna