ಕರ್ನಾಟಕ

karnataka

ಹಾಜರಾತಿ ಕೊರತೆ: ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಲು ಹೈಕೋರ್ಟ್ ನಿರಾಕರಣೆ - High Court

By ETV Bharat Karnataka Team

Published : Jul 27, 2024, 6:42 PM IST

ಹಾಜರಾತಿ ನಿಯಮ ಉಲ್ಲಂಘಿಸಿದ್ದರೂ ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡುವಂತೆ ಕೋರಿ ಕೆಲ ಕಾನೂನು ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿ ಹೈಕೋರ್ಟ್​ನಲ್ಲಿ ವಜಾಗೊಂಡಿದೆ.

high court
ಹೈಕೋರ್ಟ್ (ETV Bharat)

ಬೆಂಗಳೂರು: ವಿಶ್ವವಿದ್ಯಾಲಯ ವಿಧಿಸಿರುವ ಷರತ್ತುಗಳಂತೆ ಹಾಜರಾತಿ ನಿಯಮಗಳಲ್ಲಿ ಉಲ್ಲಂಘಿಸಿ, ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡುವಂತೆ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯಕ್ಕೆ ನಿರ್ದೇಶನ ನೀಡುವಂತೆ ಕೋರಿ ಮೂವರು ಕಾನೂನು ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿ ಆದೇಶಿಸಿದೆ.

ಬಿ.ಎನ್.ಧನುಷ್ ಹಾಗೂ ಇನ್ನಿತರ ಇಬ್ಬರು ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನಿಲ್ ದತ್ತ ಯಾದವ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ವಿಶ್ವವಿದ್ಯಾಲಯದ ನಿಯಮಗಳ ಪ್ರಕಾರ ಕನಿಷ್ಟ ಶೇಕಡಾ 70ರಷ್ಟು ಹಾಜರಾತಿ ಕಡ್ಡಾಯವಾಗಿದೆ. ಆದರೆ, ಅರ್ಜಿದಾರ ವಿದ್ಯಾರ್ಥಿಗಳು ಹಾಜರಾತಿ ನಿಗದಿತ ಪ್ರಮಾಣಕ್ಕಿಂತೂ ಕಡಿಮೆ ಇದೆ. ಹೀಗಾಗಿ, ಪರೀಕ್ಷೆಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಪೀಠ ತಿಳಿಸಿದೆ.

ವಿದ್ಯಾರ್ಥಿಗಳು ಒಂದು ಸೆಮಿಸ್ಟರ್‌ನಲ್ಲಿ ಒಂದು ವಿಷಯದಲ್ಲಿ ಅನುತ್ತೀರ್ಣರಾಗಿದ್ದರೂ ಮುಂದಿನ ಸೆಮಿಸ್ಟರ್ ಹೋಗುವುದಕ್ಕೆ ನಿಯಮಗಳಲ್ಲಿ ಅವಕಾಶವಿದೆ. ಆದರೆ, ಹಾಜರಾತಿ ಕಡಿಮೆ ಇದ್ದಲ್ಲಿ ಅದು ನಿಯಮಗಳಿಗೆ ವಿರುದ್ಧವಾಗಿದೆ. ಹೀಗಾಗಿ, ಹಾಜರಾತಿ ಕೊರತೆಯಿಂದ ಮುಂದಿನ ಸೆಮಿಸ್ಟರ್‌ಗೆ ಹೋಗಲು ಅನರ್ಹನಾಗಿರುತ್ತಾನೆ. ಆದ್ದರಿಂದ ಮುಂದಿನ ಸೆಮಿಸ್ಟರ್‌ಗೆ ಹೋಗಲು ಅವಕಾಶವಿಲ್ಲ. ಆದರೆ, 9ನೇ ಸೆಮಿಸ್ಟರ್‌ಗೆ ಅರ್ಜಿದಾರರು ಪುನಃ ಪರೀಕ್ಷೆಗಳನ್ನು ಪಡೆದುಕೊಳ್ಳುವುದಕ್ಕೆ ಯಾವುದೇ ಅಡ್ಡಿಯಾಗುವುದಿಲ್ಲ ಎಂದು ಪೀಠ ಹೇಳಿದೆ.

ಅರ್ಜಿದಾರ ವಿದ್ಯಾರ್ಥಿಗಳು 5 ವರ್ಷದ ಕಾನೂನು ಪದವಿ ಅಧ್ಯಯನ ಮಾಡುತ್ತಿದ್ದು, ಪ್ರಸ್ತುತ 5ನೇ ವರ್ಷದ 9ನೇ ಸೆಮಿಸ್ಟರ್‌ನಲ್ಲಿ ಅಧ್ಯಯನ ಮಾಡುತ್ತಿದ್ದರು. ಆದರೆ ಶೇಕಡಾ 70ಕ್ಕಿಂತ ಕಡಿಮೆ ಹಾಜರಿದ್ದ ಕಾರಣ ಅವರನ್ನು 9ನೇ ಸೆಮಿಸ್ಟರ್ ಪರೀಕ್ಷೆ ಹಾಗೂ 10ನೇ ಸೆಮಿಸ್ಟರ್‌ಗೆ ಕಾಲೇಜಿಗೆ ಹಾಜರಾಗುವುದಕ್ಕೆ ಅವಕಾಶ ನೀಡಿರಲಿಲ್ಲ. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಇದನ್ನೂ ಓದಿ:ವಿದ್ಯುತ್ ಶುಲ್ಕ ಪಾವತಿಗೆ ಯುಪಿಐ ಏಕೆ ಬಳಸುತ್ತಿಲ್ಲ: ಬೆಸ್ಕಾಂಗೆ ಹೈಕೋರ್ಟ್ ಪ್ರಶ್ನೆ - High Court On UPI Payment

ABOUT THE AUTHOR

...view details