ಕರ್ನಾಟಕ

karnataka

ETV Bharat / state

ಹಾವೇರಿ ರೈತ ಆತ್ಮಹತ್ಯೆ ಕುರಿತು ಸುಳ್ಳುಸುದ್ದಿ ಹಂಚಿಕೊಂಡ ಆರೋಪ: ಸಂಸದ ತೇಜಸ್ವಿ ಸೂರ್ಯ ವಿರುದ್ಧದ ಪ್ರಕರಣ ರದ್ದು

ಹಾವೇರಿ ರೈತ ಆತ್ಮಹತ್ಯೆ ಕುರಿತು ಸುಳ್ಳು ಹಂಚಿಕೊಂಡ ಆರೋಪದ ಮೇಲೆ ತೇಜಸ್ವಿ ಸೂರ್ಯ ವಿರುದ್ಧ ದಾಖಲಾಗಿದ್ದ ಎಫ್​ಐಆರ್ ​ಅನ್ನು ಹೈಕೋರ್ಟ್ ರದ್ದುಪಡಿಸಿದೆ.

ಸಂಸದ ತೇಜಸ್ವಿ ಸೂರ್ಯ ವಿರುದ್ಧದ ಪ್ರಕರಣ ರದ್ದುಪಡಿಸಿದ ಹೈಕೋರ್ಟ್
ಸಂಸದ ತೇಜಸ್ವಿ ಸೂರ್ಯ ವಿರುದ್ಧದ ಪ್ರಕರಣ ರದ್ದುಪಡಿಸಿದ ಹೈಕೋರ್ಟ್ (ETV Bharat)

By ETV Bharat Karnataka Team

Published : 5 hours ago

ಬೆಂಗಳೂರು:ವಕ್ಫ್ ಮಂಡಳಿ ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ಮನನೊಂದು ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದಾಗಿ ತಮ್ಮ ಎಕ್ಸ್ ಖಾತೆಯಲ್ಲಿ ಸುದ್ದಿಯೊಂದನ್ನು ಹಂಚಿಕೊಂಡಿದ್ದ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಹಾವೇರಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್ ಮತ್ತು ಅದರ ಕುರಿತು ಸಿವಿಲ್ ಮತ್ತು ಸಿಜೆಎಂ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣಾ ಪ್ರಕ್ರಿಯೆಯನ್ನು ಇಂದು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ.

ತಮ್ಮ ವಿರುದ್ಧದ ಪ್ರಕರಣವನ್ನು ರದ್ದುಪಡಿಸಬೇಕು ಎಂದು ಕೋರಿ ತೇಜಸ್ವಿ ಸೂರ್ಯ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿತು.

ಅರ್ಜಿಯ ಕುರಿತು ನಡೆದ ವಿಚಾರಣೆ ವೇಳೆ, ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಅರುಣ್ ಶ್ಯಾಮ್, "ಕರ್ನಾಟಕ ಕಂದಾಯ ಇಲಾಖೆ ಏಕಪಕ್ಷೀಯವಾಗಿ ಭೂ ದಾಖಲೆಗಳನ್ನು ತಿದ್ದಿ, ರೈತರ ಹೆಸರಿನಲ್ಲಿನ ಭೂ ಮಾಲೀಕತ್ವವನ್ನು ವಕ್ಫ್ ಹೆಸರಿಗೆ ಬದಲಾವಣೆ ಮಾಡಿದೆ. ಹಲವು ಜಿಲ್ಲೆಗಳಲ್ಲಿ ಹೀಗೆ ಮಾಡಿರುವುದರಿಂದ ರಾಜ್ಯವ್ಯಾಪಿ ರೈತರು ಭಾರೀ ವಿರೋಧ ವ್ಯಕ್ತಪಡಿಸುತ್ತಾ ಪ್ರತಿಭಟನೆ ನಡೆಸಿದ್ದಾರೆ. ಹಾಗಾಗಿ, ಸರ್ಕಾರ ಹೆಸರು ಬದಲಾವಣೆ ಅಳಿಸಿ ಹಾಕಿ, ರೈತರಿಗೆ ನೀಡಿದ್ದ ನೋಟಿಸ್‌ಗಳನ್ನು ವಾಪಸ್ ಪಡೆಯುವುದಾಗಿ ಪ್ರಕಟಿಸಿದೆ" ಎಂದರು.

"ಪ್ರಕರಣದಲ್ಲಿ ಅರ್ಜಿದಾರರು ಯಾವುದೇ ತಪ್ಪು ಮಾಡಿಲ್ಲ. ಮೃತ ರೈತನ ತಂದೆಯ ಹೇಳಿಕೆ ಆಧರಿಸಿ ವಕ್ಫ್ ವಿವಾದದ ಹಿನ್ನೆಲೆಯಲ್ಲಿ ಹಾವೇರಿಯ ರೈತ ರುದ್ರಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕರ್ನಾಟಕದ ರೈತರು ನಿಜಕ್ಕೂ ಆತಂಕ ಎದುರಿಸುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದರು. ಆದರೆ ಆ ಬಗ್ಗೆ ಪೊಲೀಸರ ಸ್ಪಷ್ಡನೆ ನಂತರ ಎಕ್ಸ್​ನಲ್ಲಿ ಪ್ರಕಟಿಸಿದ್ದ ಮಾಹಿತಿ ತೆಗೆದು ಹಾಕಲಾಗಿದೆ. ಹಾಗಾಗಿ, ಪ್ರಕರಣಕ್ಕೆ ತಡೆ ನೀಡಬೇಕು" ಎಂದು ಕೋರಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಎಸ್‌ಪಿಪಿ ಬಿ.ಎನ್.ಜಗದೀಶ್, "ಅರ್ಜಿದಾರರ ಟ್ವೀಟ್ ಭಾವನೆಗೆ ಧಕ್ಕೆ ತರುವಂತಿತ್ತು ಮತ್ತು ದ್ವೇಷ ಬಿತ್ತುವಂತಿತ್ತು. ಮೇಲ್ನೋಟಕ್ಕೆ ಅದು ಎರಡು ಗುಂಪುಗಳ ನಡುವೆ ವೈಷಮ್ಯಕ್ಕೆ ದಾರಿ ಮಾಡಿಕೊಡುವಂತಿತ್ತು. ತಡೆಯಾಜ್ಞೆ ನೀಡಬಾರದು, ಕೇಸ್ ಬಾಕಿ ಇದ್ದರೆ ಆಕಾಶವೇನೂ ಕಳಚಿ ಬೀಳುವುದಿಲ್ಲ" ಎಂದು ಪೀಠಕ್ಕೆ ವಿವರಿಸಿದರು.

ಪ್ರಕರಣದ ಹಿನ್ನೆಲೆ:ನವೆಂಬರ್ 7ರಂದು ವಕ್ಫ್ ವಿಚಾರ ಹಿನ್ನೆಲೆಯಲ್ಲಿ ಹಾವೇರಿಯ ರೈತ ರುದ್ರಪ್ಪ ಚನ್ನಪ್ಪ ಬಾಳಿಕಾಯಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ವರದಿಯಾಗಿತ್ತು. ಆ ವರದಿಯನ್ನು ಆಧರಿಸಿ ತೇಜಸ್ವಿ ಸೂರ್ಯ, ವಕ್ಫ್ ವಿವಾದದಿಂದಾಗಿ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಎಕ್ಸ್‌ನಲ್ಲಿ ಪ್ರಕಟಿಸಿದ್ದರು. ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ರುದ್ರಪ್ಪ ಆತ್ಮಹತ್ಯೆ ಮಾಡಿಕೊಂಡಿರುವುದು 2022ರ ಜ.6ರಂದು, ಅದು ಬೆಳೆಹಾನಿ ಮತ್ತು ಸಾಲದ ಬಾಧೆಯಿಂದ, ಅವರ ಆತ್ಮಹತ್ಯೆಗೂ ವಕ್ಫ್ ವಿವಾದಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.

ಆ ನಂತರ, ತೇಜಸ್ವಿ ಸೂರ್ಯ ಎಕ್ಸ್​​ನಲ್ಲಿ ಪ್ರಕಟಿಸಿದ್ದ ಮಾಹಿತಿ ತೆರವು ಮಾಡಿದ್ದರು. ಪೊಲೀಸರು ನ.7ರಂದು ದ್ವೇಷ ಬಿತ್ತುವ ಹೇಳಿಕೆ ನೀಡಿದ್ದಾರೆಂದು ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 353(2) ಅನ್ವಯ ಸ್ವಯಂಪ್ರೇರಿತ ದೂರು ದಾಖಲಿಸಿದ್ದರು. ಅದನ್ನು ಪ್ರಶ್ನಿಸಿ ಸಂಸದ ಹೈಕೋರ್ಟ್ ಮೊರೆ ಹೋಗಿದ್ದರು.

ಇದನ್ನೂ ಓದಿ:ಸುಳ್ಳು ಸುದ್ದಿ ಹರಡಿದ ಆರೋಪ; ತೇಜಸ್ವಿ ಸೂರ್ಯ ವಿರುದ್ಧ ಪ್ರಕರಣ; ಸರ್ಕಾರದ ಗಮನ ಸೆಳೆದಿದ್ದೇ ತಪ್ಪಾ ಎಂದು ಸಂಸದರ ಪ್ರಶ್ನೆ

ABOUT THE AUTHOR

...view details