ಬೆಂಗಳೂರು : ಸಹಕಾರಿ ಬ್ಯಾಂಕುಗಳ ಸಿಬ್ಬಂದಿಯಿಂದ ಅವರು ಬ್ಯಾಂಕ್‌ಗೆ ಪಾವತಿಸಬೇಕಿದ್ದ ಬಾಕಿ ಮೊತ್ತವನ್ನು ಕಡಿತಗೊಳಿಸುವುದಕ್ಕೆ ನಿರ್ಬಂಧ ವಿಧಿಸಿ ಭಾರತೀಯ ಮಹಾಲೆಕ್ಕಪಾಲರು (ಸಿಎಜಿ) ಹೊರಡಿಸಿದ್ದ ಸುತ್ತೋಲೆಯನ್ನು ಹೈಕೋರ್ಟ್ ರದ್ದುಪಡಿಸಿದೆ. ಮಹಾಲೆಕ್ಕಪಾಲರ ಸುತ್ತೋಲೆ ಸಂಬಂಧ ಅಕೌಂಟೆಂಟ್ ಜನರಲ್ಸ್ ಆಫೀಸ್ ಎಂಪ್ಲಾಯಿಸ್ ಕೋ ಆಪರೇಟಿವ್ ಬಾಂಕ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ಏಕಸದಸ್ಯಪೀಠ ಈ ಆದೇಶ ಮಾಡಿದೆ.
ಈ ಆದೇಶದಿಂದ ಸಹಕಾರಿ ಬ್ಯಾಂಕುಗಳ ಸಿಬ್ಬಂದಿಯ ಒಪ್ಪಿಗೆ ಮೇರೆಗೆ ಅವರು ಬ್ಯಾಂಕ್‌ಗೆ ಪಾವತಿಸಬೇಕಿರುವ ಬಾಕಿ ಮೊತ್ತವನ್ನು ವೇತನದಲ್ಲಿ ಕಡಿತ ಮಾಡಿಕೊಳ್ಳಲು ಸಹಕಾರಿ ಸಂಘಗಳು ಮತ್ತು ಬ್ಯಾಂಕುಗಳಿಗೆ ಇದ್ದ ಅಡ್ಡಿ ತೆರವಾದಂತಾಗಿದೆ. ಅಲ್ಲದೇ, ಸಂಘಗಳು ಮತ್ತು ಬ್ಯಾಂಕುಗಳು ಇನ್ನು ಮುಂದೆ ಸಿಬ್ಬಂದಿಯಿಂದ ಬಾಕಿ ಮೊತ್ತ ವಸೂಲು ಮಾಡಲು ಅನುಕೂಲವಾಗಲಿದೆ. ಕ್ಲಾಸ್ -5 ರಡಿ ಸಿಎಜಿ ಸಿಬ್ಬಂದಿಯ ವೇತನದಿಂದ ಕಡಿತಗೊಳಿಸಲು ನಿರ್ಬಂಧ ವಿಧಿಸಿ 2020ರ ಜನವರಿ 29 ,30 ಹಾಗೂ ಫೆ.6 ರಂದು ಹೊರಡಿಸಿದ್ದ ಸುತ್ತೋಲೆಗಳನ್ನು ರದ್ದುಗೊಳಿಸಿತು.
ಒಮ್ಮೆ ಸಹಕಾರಿ ಸಂಘದ ಸದಸ್ಯರಾದರೆ, ಆತ ಸೊಸೈಟಿಯೊಂದಿಗೆ ಒಪ್ಪಂದ ಮಾಡಿಕೊಂಡಂತೆ. ಅಂತಹ ಒಪ್ಪಂದ ಸಿಬ್ಬಂದಿಯಿಂದ ಬಾಕಿಯನ್ನು ವಸೂಲು ಮಾಡಲು ಅವರ ವೇತನದಿಂದ ಶೇ.50ರಷ್ಟು ಮೀರದಂತೆ ಕಡಿತಗೊಳಿಸಲು ಅವಕಾಶವಿದೆ. ಅದಕ್ಕೆ ಕರ್ನಾಟಕ ಸಹಕಾರ ಸಂಘಗಳ ಕಾಯಿದೆ 1959ರ ಸೆಕ್ಷನ್ 34 ಅವಕಾಶ ಕಲ್ಪಿಸುತ್ತದೆ. ಹಾಗಾಗಿ ಸಿಎಜಿ ಕ್ಲಾಸ್-5ರಡಿ ಹೊರಡಿಸಿರುವ ಸುತ್ತೋಲೆ ಕಾನೂನು ಬಾಹಿರವಾಗಿದ್ದು, ಅದನ್ನು ರದ್ದುಗೊಳಿಸಲಾಗುತ್ತಿದೆ ಎಂದು ಪೀಠ ತಿಳಿಸಿದೆ.