ಬೆಂಗಳೂರು: ರಾಜ್ಯದಲ್ಲಿ ಸರ್ಕಾರ ಕೆಡವಲು 1,000 ಕೋಟಿ ರೂ.ಗಳ ವೆಚ್ಚದಲ್ಲಿ ಯೋಜನೆ ಸಿದ್ಧವಾಗುತ್ತಿದೆ ಎಂಬುದಾಗಿ ಹೇಳಿಕೆ ನೀಡುವ ಮೂಲಕ ಗಲಭೆಗೆ ಪ್ರಚೋದನೆ ನೀಡಿದ್ದಾರೆ ಎಂಬ ಆರೋಪದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿ ಆದೇಶ ಹೊರಡಿಸಿದೆ.
ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಕೋರಿ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಅಲ್ಲದೆ, ಅರ್ಜಿದಾರರ ಈ ಹೇಳಿಕೆ ಗಲಭೆಗೆ ಕಾರಣವಾಗುವ ದುರುದ್ದೇಶಪೂರಿತ ಪ್ರಚೋದನೆಯ ಅಂಶಗಳನ್ನು ಹೊಂದಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ನ್ಯಾಯಪೀಠ ವಿಫಲವಾಗಿದೆ. ಪ್ರಕರಣವನ್ನು ದಾಖಲಿಸಬೇಕು ಎಂಬ ಕಾರಣದಿಂದ ದಾಖಲಾಗಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಆರೋಪವನ್ನು ಪುಷ್ಠೀಕರಿಸುವ ಯಾವುದೇ ಅಂಶಗಳನ್ನು ಹೊಂದಿರದ ಅಪರಾಧಗಳ ಬಗ್ಗೆ ಹೆಚ್ಚಿನ ತನಿಖೆಗೆ ಅನುಮತಿ ನೀಡುವುದು ಅಜಾಗರೂಕ ಪ್ರಕರಣ ದಾಖಲಿಸಲು ಅನುಮತಿ ನೀಡಿದಂತಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ. ಅಲ್ಲದೆ, ಮುಂದಿನ ಪ್ರಕ್ರಿಯೆಗೆ ಅನುಮತಿ ನೀಡುವುದು ಕಾನೂನಿನ ಪ್ರಕ್ರಿಯೆಯ ದುರುಪಯೋಗ ಎಂದು ಮತ್ತು ನ್ಯಾಯದಾನ ತಪ್ಪಿದಂತಾಗಲಿದೆ ಎಂದು ಪೀಠ ತಿಳಿಸಿದೆ.