ಬೆಂಗಳೂರು:ಬೆಳಗಾವಿ ವಿಧಾನಮಂಡಲ ಅಧಿವೇಶನದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ವಿರುದ್ಧ ಅವಾಚ್ಯ ಪದ ಬಳಕೆ ಮಾಡಿರುವ ಆರೋಪದಲ್ಲಿ ಮಾಜಿ ಸಚಿವ ಮತ್ತು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ವಿರುದ್ಧ ಜನವರಿ 30ರವರೆಗೂ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ.
ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದುಕೋರಿ ಸಿ.ಟಿ.ರವಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಹೈಕೋರ್ಟ್ ಪೀಠ ಹೇಳಿದ್ದೇನು?:''ಅರ್ಜಿದಾರರು ವಿಧಾನಪರಿಷತ್ನಲ್ಲಿ ಹೇಳಿಕೆ ನೀಡಿರುವುದಕ್ಕೆ ಸಂಬಂಧಿಸಿದ್ದಾಗಿದ್ದು, ಈ ಸಂಬಂಧ 2024ರ ಡಿಸೆಂಬರ್ 19ರಂದು ದೂರು ದಾಖಲಾಗಿದೆ. ದೂರು ದಾಖಲಾಗುವುದಕ್ಕೂ ಮುನ್ನ ವಿಧಾನಪರಿಷತ್ ಸಭಾಧ್ಯಕ್ಷರು ಆ ಕುರಿತ ವಿಚಾರಣಾ ಪ್ರಕ್ರಿಯೆ ಮುಕ್ತಾಯಗೊಳಿಸಿದ್ದಾರೆ ಎಂದು ಹೇಳಲಾಗಿದೆ. ಜೊತೆಗೆ, ಅರ್ಜಿದಾರರ ಪರ ವಕೀಲರು ಸೀತಾ ಸೊರೆನ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಏಳು ಮಂದಿ ನ್ಯಾಯಮೂರ್ತಿಗಳ ನೀಡಿರುವ ತೀರ್ಪು ಉಲ್ಲೇಖಿಸಿ, ವಿಧಾನಮಂಡಲದಲ್ಲಿ ನಡೆಯುವ ಶಾಸಕರ ನಡುವೆ ನಡೆಯುವ ಚರ್ಚೆಗಳು ಅವರಿಗೆ ಲಭ್ಯವಾಗಿರುವ ಹಕ್ಕಾಗಿದ್ದು, ಈ ಪ್ರಕ್ರಿಯೆಯಲ್ಲಿ ವಿನಾಯ್ತಿ ಹೊಂದಿರುತ್ತಾರೆ ಎಂದು ತಿಳಿಸಿದ್ದಾರೆ'' ಎಂದು ಪೀಠವು ಹೇಳಿತು.
''ಇದಕ್ಕೆ ಆಕ್ಷೇಪಿಸಿದ ಸರ್ಕಾರದ ಪರ ಎಸ್ಪಿಪಿ, ಶಾಸನ ಸಭೆಯಲ್ಲಿ ಈ ರೀತಿಯ ಅಪರಾಧ ಕೃತ್ಯಗಳು ನಡೆದ ಸಂದರ್ಭದಲ್ಲಿ ಈ ಹಕ್ಕುಗಳು ಲಭ್ಯವಾಗುವುದಿಲ್ಲ. ಕೃತ್ಯಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಹೀಗಾಗಿ, ಪ್ರಕರಣದ ಕುರಿತ ವಿಷಯ ವಿಚಾರಣೆಗೆ ನ್ಯಾಯವ್ಯಾಪ್ತಿಗೆ ಸಂಬಂಧಿಸಿದ್ದಾಗಿದ್ದು, ಪ್ರಕರಣವನ್ನು ಸ್ಪೀಕರ್, ಮುಕ್ತಾಯಗೊಳಿಸಬಹುದೇ ಇಲ್ಲವೇ ತನಿಖಾ ಸಂಸ್ಥೆಗಳು ವಿಚಾರಣೆ ನಡೆಸಬಹುದೇ ಎಂಬುದಕ್ಕೆ ಸಂಬಂಧ ಸುಧೀರ್ಘ ವಿಚಾರಣೆ ನಡೆದು ಅದಕ್ಕೆ ಉತ್ತರಿಸಬೇಕಾಗಿದೆ'' ಎಂದು ತಿಳಿಸಿದ ಪೀಠ, ವಿಚಾರಣೆಯನ್ನು ಜನವರಿ 30ಕ್ಕೆ ಮುಂದೂಡಿತು. ಅಲ್ಲದೆ, ಅಲ್ಲಿಯವರೆಗೂ ಅರ್ಜಿದಾರರ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳದಂತೆ ನಿರ್ದೇಶನ ನೀಡಿ ಆದೇಶಿಸಿತು.
ವಾದ, ಪ್ರತಿವಾದ ಹೀಗಿತ್ತು:ವಿಚಾರಣೆ ವೇಳೆ ಅರ್ಜಿದಾರರ ಪರ ಹಾಜರಿದ್ದ ವಕೀಲರು, ''ಘಟನೆ ಶಾಸನ ಸಭೆಯಲ್ಲಿ ನಡೆದಿದ್ದಾಗಿದ್ದು, ಕಾರ್ಯಾಂಗ (ಪೊಲೀಸರು) ಶಾಸಕಾಂಗದ ಕಾರ್ಯಗಳಿಗೆ ಪ್ರವೆಶಿಸಬಹುದೇ ಎಂಬ ಅಂಶ ಪರಿಶೀಲಿಸಬೇಕಾಗಿದೆ'' ಎಂದು ತಿಳಿಸಿದರು. ಇದಕ್ಕೆ ಪೀಠ, ''ಘಟನೆ ನಡೆಸಿರುವುದು ವಿಧಾನಪರಿಷತ್ನಲ್ಲಿಯೇ'' ಎಂದು ಪ್ರಶ್ನಿಸಿತು. ಇದಕ್ಕೆ ವಕೀಲರು ''ಹೌದು'' ಎಂದು ತಿಳಿಸಿದರು.
ಸರ್ಕಾರಿ ವಕೀಲರನ್ನು ಉದ್ದೇಶಿಸಿದ ಪೀಠ, ''ಪ್ರಕರಣ ವಿಧಾನಪರಿಷತ್ಗೆ ಸಂಬಂಧಿಸಿದ ವಿಚಾರವಾಗಿದೆ. ತನಿಖೆಯನ್ನು ಸಿಐಡಿಗೆ ವಹಿಸಿರುವುದು ಕಾನೂನಿಗೆ ವಿರುದ್ಧವಾಗಿದೆ. ಈ ಬಗ್ಗೆ ಸಭಾಪತಿಯೊಂದಿಗೆ ಚರ್ಚೆಸಲಾಗಿದೆಯೇ?'' ಎಂದು ಪ್ರಶ್ನಿಸಿತು. ಇದಕ್ಕೆ ಸರ್ಕಾರಿ ವಕೀಲರು, ''ಘಟನೆ ನಡೆದ ಸಂದರ್ಭದಲ್ಲಿ ಅಧಿವೇಶನ ನಡೆಯುತ್ತಿರಲಿಲ್ಲ'' ಎಂದು ಪೀಠಕ್ಕೆ ಮಾಹಿತಿ ನೀಡಿದರು.