ಕರ್ನಾಟಕ

karnataka

ETV Bharat / state

ಎಫ್ಎಸ್ಎಲ್ ವರದಿಗೆ ವಿರುದ್ಧವಾಗಿ ದೋಷಾರೋಪಣೆ: ಪೊಲೀಸ್ ಅಧಿಕಾರಿಗಳಿಗೆ ಹೈಕೋರ್ಟ್ ತರಾಟೆ - Police Inquiry

ಗಾಂಜಾ ಸೇವನೆ ಪ್ರಕರಣದಲ್ಲಿ ಎಫ್​ಎಸ್​ಎಲ್ ವರದಿ ವಿರುದ್ಧವಾಗಿ ದೋಷಾರೋಪ ಪಟ್ಟಿಯಲ್ಲಿ ಸಲ್ಲಿಸಿದ ಪೊಲೀಸ್ ಅಧಿಕಾರಿಗಳನ್ನು ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.

ಹೈಕೋರ್ಟ್
ಹೈಕೋರ್ಟ್ (IANS)

By ETV Bharat Karnataka Team

Published : Sep 16, 2024, 12:27 PM IST

ಬೆಂಗಳೂರು:ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್ಎಲ್) ವರದಿಯಲ್ಲಿ ಗಾಂಜಾ ಸೇವನೆಯಾಗಿಲ್ಲ ಎಂದು ಸ್ಪಷ್ಟವಾಗಿದ್ದರೂ ಅದಕ್ಕೆ ವಿರುದ್ಧವಾಗಿ ದೋಷಾರೋಪ ಪಟ್ಟಿ ಸಲ್ಲಿಸುವ ಮೂಲಕ ಯುವಕರಿಬ್ಬರನ್ನು ಕಾನೂನು ಸಂಕಷ್ಟಕ್ಕೆ ದೂಡಿದ್ದ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಅಲ್ಲದೆ, ಇಬ್ಬರೂ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಗೃಹ ಇಲಾಖೆಗೆ ನಿರ್ದೇಶನ ನೀಡಿದೆ.

ಗಾಂಜಾ ಸೇವನೆ ಆರೋಪದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದು ಕೋರಿ ಹನುಮಂತ ಮತ್ತು ಮಂಜುನಾಥ್‌ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ. ಜೊತೆಗೆ, 2019ರಲ್ಲಿ ಅರ್ಜಿದಾರ ವಿದ್ಯಾರ್ಥಿಗಳನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವರ್ತೂರು ಪೊಲೀಸ್‌ ಠಾಣೆಯ ಅಂದಿನ ಇನ್‌ಸ್ಪೆಕ್ಟರ್‌ ಮತ್ತು ಸಬ್‌ ಇನ್‌ಸ್ಪೆಕ್ಟರ್‌ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಹೈಕೋರ್ಟ್‌ ಆದೇಶಿಸಿದೆ.

ಅರ್ಜಿದಾರರ ವಿರುದ್ಧದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಎರಡನೇ ಎಸಿಎಂಎಂ ನ್ಯಾಯಾಲಯದಲ್ಲಿ ಬಾಕಿಯಿದ್ದ ವಿಚಾರಣಾ ಪ್ರಕ್ರಿಯೆಯನ್ನೂ ನ್ಯಾಯಾಲಯ ರದ್ದುಪಡಿಸಿ ಆದೇಶಿಸಿದೆ. ಅರ್ಜಿದಾರರ ರಕ್ತದ ಮಾದರಿಯನ್ನು ಪರೀಕ್ಷೆಗಾಗಿ ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿತ್ತು. ರಕ್ತದಲ್ಲಿ ಗಾಂಜಾ ಅಂಶಗಳು ಪತ್ತೆಯಾಗಿಲ್ಲ ಎಂದು ಪ್ರಯೋಗಾಲಯದ ವರದಿ ಸ್ಪಷ್ಟವಾಗಿ ಹೇಳಿದೆ. ಹೀಗಿದ್ದರೂ, ಅರ್ಜಿದಾರರು ಗಾಂಜಾ ಸೇವಿಸಿರುವುದು ಎಫ್‌ಎಸ್‌ಎಲ್‌ ವರದಿಯಿಂದ ದೃಢಪಟ್ಟಿದೆ ಎಂದು ಪ್ರಕರಣದ ತನಿಖಾಧಿಕಾರಿಯಾಗಿದ್ದ 2019ರಲ್ಲಿ ಪ್ರೊಬೆಷನರಿ ಸೇವೆಯಲ್ಲಿದ್ದ ವರ್ತೂರು ಠಾಣೆ ಸಬ್‌ ಇನ್‌ಸ್ಪೆಕ್ಟರ್‌ ರಾಜಕುಮಾರ್‌ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಆ ವರದಿಯನ್ನು ಅಂದಿನ ಇನ್‌ಸ್ಪೆಕ್ಟರ್‌ ಒಪ್ಪಿದ್ದಾರೆ. ಇದು ಕಾನೂನು ಬಾಹಿರ ಕ್ರಮ ಎಂದು ಹೈಕೋರ್ಟ್‌ ಆದೇಶದಲ್ಲಿ ಹೇಳಿದೆ.

ಅರ್ಜಿದಾರರಿಂದ 15 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಲಾಗಿದೆ. ಆದರೆ, ವಶ ಪಡಿಸಿಕೊಂಡಿರುವ ಗಾಂಜಾ ಎಲ್ಲಿದೆ, ಏನಾಯಿತು ಎನ್ನುವುದು ನಿಗೂಢವಾಗಿದೆ. ಒಮ್ಮೆ ಮಾದಕ ವಸ್ತುವನ್ನು ವಶಪಡಿಸಿಕೊಂಡರೆ, ಅದರ ಪಂಚನಾಮೆ, ದಾಸ್ತಾನು ಮಾಡಬೇಕು. ಅದರ ಮಾದರಿಯನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಬೇಕು. ಪ್ರಕರಣದಲ್ಲಿ 15 ಗ್ರಾಂ ಪಂಚನಾಮೆ ಮಾಡಲಾಗಿದೆ ಎಂಬುದು ನಂಬುವಂತಹದ್ದಲ್ಲ. ಅರ್ಜಿದಾರರು ಗಾಂಜಾ ಸೇವನೆ ಮಾಡಿದ್ದರು ಎನ್ನುವುದೂ ಸಹ ಸಮರ್ಥನೀಯವಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಸುತ್ತೋಲೆ ಹೊರಡಿಸಲು ಆದೇಶ: ಮಾದಕ ವಸ್ತುಗಳನ್ನು ಹೊಂದಿದ್ದವರು ಸಿಕ್ಕಿಬಿದ್ದಲ್ಲಿ ಅವರನ್ನು ಕೂಡಲೇ ಮಾದಕ ದ್ರವ್ಯ ಮತ್ತು ಅಮಲು ಪದಾರ್ಥಗಳು (ಎನ್‌ಡಿಪಿಎಸ್‌) ಕಾಯ್ದೆಯ ಸೆಕ್ಷನ್‌ 42ರಲ್ಲಿ ವ್ಯಾಖ್ಯಾನಿಸಲಾಗಿರುವ ಅಧಿಕಾರಿಗಳಾದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಬಕಾರಿ, ನಾರ್ಕೋಟಿಕ್‌, ಕಸ್ಟಮ್ಸ್‌, ಕಂದಾಯ ವಿಚಕ್ಷಣಾ, ಕೇಂದ್ರ ಸರ್ಕಾರದ ಅಧೀನ ಸಂಸದೀಯ ಪಡೆಯ ಮತ್ತು ಸಶಸ್ತ್ರ ಪಡೆ, ಪೊಲೀಸರು, ಡ್ರಗ್‌ ಕಂಟ್ರೋಲ್‌ ಇನ್ನಿತರ ಇಲಾಖೆಗಳ ಗೆಜೆಟೆಡ್‌ ಅಧಿಕಾರಿಗಳು ಅಥವಾ ಮ್ಯಾಜಿಸ್ಟ್ರೇಟ್‌ ಮುಂದೆ ಹಾಜರುಪಡಿಸಬೇಕು. ಈ ನಿಯಮವನ್ನು ಸೆಕ್ಷನ್‌ 50 ಪ್ರತಿಪಾದಿಸುತ್ತದೆ. ಅಧಿಕಾರಿಗಳು ಈ ನಿಯಮ ಪಾಲಿಸದ ಹಲವು ಪ್ರಕರಣಗಳು ಕೋರ್ಟ್‌ ಮುಂದೆ ಬರುತ್ತಿವೆ. ಆದ್ದರಿಂದ, ಎನ್‌ಡಿಪಿಎಸ್‌ ಸೆಕ್ಷನ್‌ 50 ಮತ್ತು 52 ನಿಯಮ ಪಾಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಅಥವಾ ಗೃಹ ಇಲಾಖೆ ಸುತ್ತೋಲೆ ಹೊರಡಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: ಗಾಂಜಾ ಸೇವನೆ ಮಾಡುತ್ತಿದ್ದ ಆರೋಪದಲ್ಲಿ 2019ರ ಆಗಸ್ಟ್ 31ರಂದು ಅರ್ಜಿದಾರರನ್ನು ವರ್ತೂರು ಪೊಲೀಸ್‌ ಠಾಣೆಯಲ್ಲಿ ಪ್ರೊಬೆಷನರಿ ಸಬ್‌ ಇನ್‌ಸ್ಪೆಕ್ಟರ್‌ ಆಗಿದ್ದ ರಾಜಕುಮಾರ್‌ ಬಂಧಿಸಿದ್ದರು. ಅರ್ಜಿದಾರರು ಗಾಂಜಾ ಸೇವಿಸಿಲ್ಲ ಎನ್ನುವುದು ಎಫ್‌ಎಸ್‌ಎಲ್ ವರದಿಯಲ್ಲಿ ಸ್ಪಷ್ಟವಾಗಿತ್ತು. ತನಿಖೆ ಪೂರ್ಣಗೊಳಿಸಿದ್ದ ಪೊಲೀಸರು, ಅರ್ಜಿದಾರರ ವಿರುದ್ಧ ಗಾಂಜಾ ಸೇವನೆ ಆರೋಪದ ಮೇಲೆ ಎನ್‌ಡಿಪಿಎಸ್ ಕಾಯ್ದೆಯ ಸೆಕ್ಷನ್‌ 27 ಅಡಿಯಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇದರಿಂದ, ಪ್ರಕರಣ ರದ್ದು ಕೋರಿ ಅರ್ಜಿದಾರರು ಹೈಕೋರ್ಟ್‌ಗೆ ಮೆಟ್ಟಿಲೇರಿದ್ದರು.

ಇದನ್ನೂ ಓದಿ:ಬಾತ್ಮೀದಾರನ ಸುಳ್ಳು ಮಾಹಿತಿ ನಂಬಿ ಅಮಾಯಕರ ವಿರುದ್ಧ ಪ್ರಕರಣ: ಪಿಎಸ್​ಐ ಸೇರಿ ನಾಲ್ವರು ಸಿಬ್ಬಂದಿ ಅಮಾನತು - Police Suspended

ABOUT THE AUTHOR

...view details