ಬೆಂಗಳೂರು:ತಂದೆ ತನ್ನ ಮಗನಿಗೆ ಆಸ್ತಿಯ ಗಿಫ್ಟ್ ಡೀಡ್ (ಉಡುಗೊರೆಯಾಗಿ) ಮಾಡಿಕೊಡುವಾಗ ಅದರಲ್ಲಿ ತನ್ನನ್ನು ನೋಡಿಕೊಳ್ಳುವ ಕುರಿತಂತೆ ಷರತ್ತು ಉಲ್ಲೇಖಿಸಿಲ್ಲ ಎಂಬ ಕಾರಣಕ್ಕೆ ಆ ಪತ್ರವನ್ನು ಉಪ ವಿಭಾಗಾಧಿಕಾರಿ ರದ್ದುಗೊಳಿಸಲು ಅವಕಾಶವಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.
ಪ್ರಕರಣ ಸಂಬಂಧ ರಾಮನಗರ ಜಿಲ್ಲೆಯ ಚನ್ನಪಟ್ಟಣ ಮೂಲದ ವಿವೇಕ್ ಜೈನ್ ಎಂಬುವರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಈ ಆದೇಶ ಮಾಡಿದೆ. ಅಲ್ಲದೇ, ಹಿರಿಯ ನಾಗರಿಕರಾದ ತಂದೆ ತನ್ನ ಪುತ್ರನಿಗೆ ಆಸ್ತಿಯ ಉಡುಗೊರೆ ಪತ್ರ ಮಾಡಿಕೊಡುವಾಗ ಅದರಲ್ಲಿ ತನ್ನನ್ನು ನೋಡಿಕೊಳ್ಳುವ ಕುರಿತು ಯಾವುದೇ ಷರತ್ತು ಉಲ್ಲೇಖಿಸಿಲ್ಲ ಎಂಬ ಕಾರಣಕ್ಕೆ ಆ ಗಿಫ್ಟ್ ಡೀಡ್ ಅನ್ನು ಉಪ ವಿಭಾಗಾಧಿಕಾರಿಯು ರದ್ದುಗೊಳಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಉಪ ವಿಭಾಗಾಧಿಕಾರಿಯ ಆದೇಶ ರದ್ದು ಮಾಡುತ್ತಿರುವುದಾಗಿ ಪೀಠ ಹೇಳಿದೆ.
ಪ್ರಕರಣದ ಹಿನ್ನೆಲೆ:ರಾಮನಗರ ಜಿಲ್ಲೆಯ ಚನ್ನಪಟ್ಟಣದ ಹರ್ಷ ಎಂಬುವರಿಗೆ ಅವರ ತಂದೆ ಶ್ರೀನಿವಾಸ್ ತನ್ನ ಆಸ್ತಿಯನ್ನು ಗಿಫ್ಟ್ ಡೀಡ್ ಮಾಡಿಕೊಟ್ಟಿದ್ದರು. ಈ ಆಸ್ತಿಯನ್ನು ಹರ್ಷ ಅವರು ವಿವೇಕ್ ಜೈನ್ ಎಂಬುವರಿಗೆ ಮಾರಾಟ ಮಾಡಿದ್ದರು. ಇದರಿಂದ ಅಸಮಾಧಾನಗೊಂಡ ಹರ್ಷ ಅವರ ತಂದೆ, ತನ್ನ ಪುತ್ರನಿಗೆ ನೀಡಿದ್ದ ಆಸ್ತಿಯ ಗಿಫ್ಟ್ ಡೀಡ್ ರದ್ದು ಮಾಡಬೇಕು ಎಂದು ಕೋರಿ ರಾಮನಗರ ಜಿಲ್ಲೆಯ ಕಮಿಷನರ್ ಸೀನಿಯರ್ ಸಿಟಿಜನ್ ಟ್ರಿಬ್ಯೂನಲ್ಗೆ ಮನವಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ್ದ ಉಪ ವಿಭಾಗಾಧಿಕಾರಿ, ಗಿಫ್ಟ್ ಡೀಡ್‌ನ್ನು ರದ್ದುಗೊಳಿಸಿ 2021ರ ಜುಲೈ 7ರಂದು ಆದೇಶಿಸಿದ್ದರು. ಈ ಆದೇಶ ರದ್ದುಗೊಳಿಸುವಂತೆ ಕೋರಿ ಅರ್ಜಿದಾರರ ವಿವೇಕ್ ಜೈನ್ ಹೈಕೋರ್ಟ್ ಮೆಟ್ಟಿಲೇರಿದ್ದರು.