ಬೆಂಗಳೂರು: ಯಾವುದೇ ಯೋಜನೆಗೆ ಟೆಂಡರ್ ಕರೆದಲ್ಲಿ ಅದರಲ್ಲಿನ ದೋಷಗಳನ್ನು ನ್ಯಾಯಾಲಯ ಪರಿಶೀಲನಾ ಸ್ಥಾನದಲ್ಲಿ ಕುಳಿತು ಪ್ರತಿಯೊಂದು ಹಂತದಲ್ಲೂ ಹಸ್ತಕ್ಷೇಪ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.
ರಾಸಾಯನಿಕ ಮತ್ತು ಸುಗಂಧ ದ್ರವ್ಯ ಪೂರೈಕೆಗೆ ಕೆಎಸ್‌ಡಿಎಲ್ ಕರೆದಿದ್ದ ಟೆಂಡರ್ ಪ್ರಶ್ನಿಸಿ ಬೆಂಗಳೂರು ಮೂಲದ ಎಸ್‌ಪಿ ಎಂಟರ್ಪ್ರೈಸಸ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕ ಸದಸ್ಯ ಪೀಠ ಈ ಆದೇಶ ನೀಡಿದ್ದು, ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.
ಪ್ರಸ್ತುತ ಪ್ರಕರಣದಲ್ಲಿ ಅರ್ಜಿದಾರರು ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು, ಆದರೆ ತಾಂತ್ರಿಕ ಬಿಡ್ ಹಂತದಲ್ಲೇ ಅವರ ಅರ್ಜಿ ತಿರಸ್ಕೃತಗೊಂಡಿದೆ. ಆನಂತರ ಯಶಸ್ವಿ ಬಿಡ್ಡರ್‌ಗೆ ಕಾರ್ಯಾದೇಶ ನೀಡಲಾಗಿದೆ. ಹಾಗಾಗಿ ಈ ಹಂತದಲ್ಲಿ ಟೆಂಡರ್ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶ ಮಾಡಲಾಗದು. ಅರ್ಜಿದಾರರು ಬೇಕಿದ್ದರೆ ಮೇಲ್ಮನವಿ ಪ್ರಾಧಿಕಾರದ ಮುಂದೆ ಮೇಲ್ಮನವಿ ಸಲ್ಲಿಸಬಹುದು ಎಂದು ಪೀಠ ತಿಳಿಸಿದೆ.
ಅಲ್ಲದೆ, ಮೊದಲಿಗೆ ಅರ್ಜಿದಾರರು ಇಎಂಡಿಯನ್ನು ಪಾವತಿಸಿಲ್ಲ, ಜತೆಗೆ ಅದು ಮಧ್ಯಮ ವರ್ಗದ ಉದ್ದಿಮೆ ಎಂದು ಹೇಳಿಕೊಂಡಿದೆ. ಆದರೆ ಟೆಂಡರ್ ಅಧಿಸೂಚನೆಯಲ್ಲಿ ಒಂದು ವೇಳೆ ಉದ್ದಿಮೆ ಸಣ್ಣ ಪ್ರಮಾಣದ ವರ್ಗದಿಂದ ಮಧ್ಯಮ ವರ್ಗಕ್ಕೆ ಪರಿವರ್ತನೆಯಾದರೆ ಅದಕ್ಕೆ ತೆರಿಗೆಯೇತರ ಪ್ರಯೋಜನಗಳು ಲಭ್ಯವಿರುತ್ತವೆ. ಇಎಂಡಿ ತೆರಿಗೆಯೇತರ ಪ್ರಯೋಜನಕ್ಕೆ ಒಳಪಡುತ್ತದೆಯೇ ಇಲ್ಲವೇ ಎಂಬುದನ್ನು ಗಮನಿಸಬೇಕಾಗಿದೆ. ಆದರೆ ಈ ಸಂಬಂಧ ಗುವಾಹಟಿ ಹೈಕೋರ್ಟ್ ತೆರಿಗೆಯೇತರ ಪ್ರಯೋಜನ ಎಂದರೆ ಇಎಂಡಿ ಪಾವತಿಯಿಂದ ವಿನಾಯ್ತಿಯಲ್ಲ ಎಂದು ಹೇಳಿದೆ. ಹಾಗಾಗಿ ಅರ್ಜಿದಾರರ ವಾದ ಪುರಸ್ಕರಿಸಲಾಗದು ಎಂದು ಪೀಠ ತಿಳಿಸಿದೆ.
ಅರ್ಜಿದಾರರು ನ್ಯಾಯಾಲಯ ಟೆಂಡರ್ ಪ್ರಕ್ರಿಯೆ ಮೇಲೆ ನಿಗಾ ವಹಿಸುವಂತೆ ಕೋರಿದ್ದಾರೆ, ಆದರೆ ನ್ಯಾಯಾಲಯ ಟೆಂಡರ್ ಪರಿಶೀಲನಾ ಸಮಿತಿಯ ಸ್ಥಾನದಲ್ಲಿ ಕುಳಿತು ಪ್ರತಿಯೊಂದು ಹಂತದಲ್ಲೂ ಮೇಲ್ವಿಚಾರಣೆ ಅಥವಾ ನಿಗಾ ವಹಿಸಲು ಸಾಧ್ಯವಿಲ್ಲ ಎಂದು ಹೇಳಿರುವ ನ್ಯಾಯಾಲಯ ಅರ್ಜಿದಾರರ ಎತ್ತಿದ್ದ ಅಂಶಗಳನ್ನು ಪುರಸ್ಕರಿಸಲು ನಿರಾಕರಿಸಿದೆ.
ಪ್ರಕರಣದ ಹಿನ್ನೆಲೆ ಏನು?:ಅರ್ಜಿದಾರರ ಕಂಪನಿ 2021-22ರಲ್ಲಿ ಮಧ್ಯಮ ವರ್ಗದ ಉದ್ಯಮವಾಗಿತ್ತು, ಆದರೆ ವಹಿವಾಟು ಹೆಚ್ಚಳದಿಂದ ಅದು ಮೂರು ವರ್ಷಗಳ ಅವಧಿಗೆ ಮಧ್ಯಮ ವರ್ಗದ ಕಂಪನಿಗೆ ಲಭ್ಯವಿರುವ ಇಎಂಡಿ ವಿನಾಯ್ತಿ ಪ್ರಯೋಜನವಿದೆ ಎಂದು ಹೇಳಿತ್ತು. ಆದರೆ ಕೆಎಸ್‌ಡಿಎಲ್, ಹಣಕಾಸು ಬಿಡ್ ನಂತರ ಅರ್ಜಿದಾರರು ಇಎಂಡಿ ಪಾವತಿಸಿಲ್ಲ. ಹಾಗಾಗಿ ನ್ಯಾಯಾಲಯ ಟೆಂಡರ್ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಕೇಳಿತ್ತು.
ಇದನ್ನೂ ಓದಿ:ಲೋಕಾಯುಕ್ತಕ್ಕೆ ಸರ್ಕಾರಿ ನೌಕರರ ವಿಚಾರಣೆಗೆ ಹೊಣೆ ವಹಿಸುವಂತೆ ನಿರ್ದೇಶನ ನೀಡುವ ಅಧಿಕಾರವಿಲ್ಲ: ಹೈಕೋರ್ಟ್ - High Court