ಕರ್ನಾಟಕ

karnataka

ETV Bharat / state

ಕ್ರಿಮಿನಲ್ ಪ್ರಕರಣದಡಿ ಬಂಧಿತನಾದ ಸರ್ಕಾರಿ ನೌಕರ ಸೇವೆಯಿಂದಲೂ ಅಮಾನತುಗೊಂಡಂತೆ: ಹೈಕೋರ್ಟ್ - HIGH COURT

ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದ ಕಾಯ್ದೆಗಳಡಿ ಬಂಧಿತನಾದ ಸರ್ಕಾರಿ ನೌಕರ 48 ಗಂಟೆಗಳಿಗೂ ಹೆಚ್ಚು ಕಾಲ ಬಂಧನದಲ್ಲಿದ್ದರೆ, ಸೇವೆಯಿಂದಲೂ ತಾನಾಗಿಯೇ ಅಮಾನತುಗೊಳ್ಳುತ್ತಾರೆ ಎಂದು ಹೈಕೋರ್ಟ್​ ತಿಳಿಸಿದೆ.

high court
ಹೈಕೋರ್ಟ್ (ETV Bharat)

By ETV Bharat Karnataka Team

Published : Dec 12, 2024, 7:02 AM IST

ಬೆಂಗಳೂರು:ಸರ್ಕಾರಿ ನೌಕರರೊಬ್ಬರುಕೊಫೇಪೋಸಾ, ಎನ್‌ಐಎ ಅಥವಾ ಇನ್ಯಾವುದೇ ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದ ಕಾಯ್ದೆಗಳಡಿ 48 ಗಂಟೆಗಳಿಗೂ ಹೆಚ್ಚು ಅವಧಿಯವರೆಗೆ ಬಂಧನಕ್ಕೊಳಗಾಗಿ, ಬಳಿಕ ಜಾಮೀನು ಸಿಕ್ಕರೆ ತಮ್ಮ ಸೇವೆ ಮುಂದುವರೆಸಲಾಗದು ಎಂದು ಹೈಕೋರ್ಟ್ ಹೇಳಿದೆ.

ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ನೀಡಿದ್ದ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಕುಂದಾಣ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಡಿ.ಎಂ.ಪದ್ಮನಾಭ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಅಭಿಪ್ರಾಯಪಟ್ಟಿದೆ.

48 ಗಂಟೆಗಳಿಗೂ ಹೆಚ್ಚು ಕಾಲ ವಿದೇಶಿ ವಿನಿಮಯ ಸಂರಕ್ಷಣೆ ಮತ್ತು ಕಳ್ಳಸಾಗಣೆ ಚಟುವಟಿಕೆಗಳ ತಡೆ ಕಾಯ್ದೆ 1974 (ಕೊಫೇಪೋಸಾ) ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ ಕಾಯ್ದೆ 2008 (ಎನ್‌ಐಎ) ಅಥವಾ ಇನ್ನಾವುದೇ ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದ ಕಾಯ್ದೆಗಳಡಿ ಬಂಧನಕ್ಕೊಳಗಾದಲ್ಲಿ ಅವರು ಸೇವೆಯಿಂದ ಅಮಾನತುಗೊಂಡಂತಾಗಿದೆ. ಹೀಗಾಗಿ, ಬಳಿಕ ಜಾಮೀನಿನ ಮೇಲೆ ಹೊರಬಂದರೂ ಕೂಡ ಸಕ್ಷಮ ಪ್ರಾಧಿಕಾರವು ತನ್ನ ಈ ಹಿಂದಿನ ಆದೇಶ(ಅಮಾನತು) ರದ್ದುಗೊಳಿಸಿ, ಮುಂದಿನ ಔಪಚಾರಿಕ ಆದೇಶ ನೀಡುವವರೆಗೂ ಅಮಾನತು ಮುಂದುವರೆಯಲಿದೆ ಎಂದು ತಿಳಿಸಿದೆ.

ಕರ್ನಾಟಕ ನಾಗರಿಕ ಸೇವಾ ನಿಯಮಗಳು 1957ರ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮ 10(2) (ಎ) ನಿಯಮಗಳ ಪ್ರಕಾರ 48 ಗಂಟೆಗಳಿಗೂ ಹೆಚ್ಚು ಕಾಲ ಬಂಧನದಲ್ಲಿದ್ದರೆ ಆತ ಸೇವೆಯಿಂದ ತಾನಾಗಿಯೇ ಅಮಾನತುಗೊಳ್ಳುತ್ತಾನೆ. ಬಂಧನಕ್ಕೆ ಒಳಗಾಗಿದ್ದ ಸರ್ಕಾರಿ ನೌಕರನೊಬ್ಬ ಕೋರ್ಟ್‌ನಿಂದ ಜಾಮೀನು ಪಡೆದು ಹೊರಗೆ ಬಂದ ಮೇಲೆ ನೇರ ಕಚೇರಿಗೆ ಹೋಗಬಹುದೇ, ಇಲ್ಲವೇ ಎಂಬುದನ್ನು 2015ರ ಸರ್ಕಾರಿ ಸುತ್ತೋಲೆಯ ಪ್ರಕಾರ ಸಕ್ಷಮ ಪ್ರಾಧಿಕಾರವೇ ನಿರ್ಧರಿಸಬೇಕು. ಅಂತಹ ಸೇವಕನ ಅಮಾನತು ಆದೇಶವನ್ನು ರದ್ದುಪಡಿಸಬೇಕೊ, ಬೇಡವೊ ಎಂಬ ಬಗ್ಗೆ ಪ್ರಾಧಿಕಾರವೇ ಅಂತಿಮ ನಿರ್ಣಯ ಕೈಗೊಳ್ಳಬೇಕು. ಜಾಮೀನು ಪಡೆದು ಹೊರಗೆ ಬಂದಿದ್ದೇನೆ ಎಂಬ ಏಕೈಕ ಕಾರಣದಿಂದ ಅಮಾನತು ಆದೇಶ ಕೊನೆಗೊಂಡಂತಾಗುತ್ತದೆ ಎಂದು ಭಾವಿಸತಕ್ಕದ್ದಲ್ಲ ಎಂದು ಪೀಠ ಹೇಳಿದೆ.

ಪ್ರಕರಣದ ಹಿನ್ನೆಲೆ:ದೇವನಹಳ್ಳಿ ತಾಲೂಕಿನ ಇಲತೊರೆ ಗ್ರಾಮದಲ್ಲಿ ಅಭಿವೃದ್ಧಿಪಡಿಸಲಾದ ಬಡಾವಣೆಯಲ್ಲಿ ಒಳಚರಡಿ ಮೂಲಕ ಎಲೆಕ್ಟ್ರಿಕಲ್ ಕೇಬಲ್ ಅಳವಡಿಕೆಗೆ ಡಿ.ಎಂ.ಪದ್ಮನಾಭ 5 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇರಿಸಿದ್ದರು. ಮುಂಗಡವಾಗಿ 3 ಲಕ್ಷ ರೂ. ಪಡೆದಿದ್ದಲ್ಲದೇ, ಇನ್ನೂ 2 ಲಕ್ಷ ರೂ. ಕೊಟ್ಟರೆ ಮಾತ್ರ ಪರವಾನಗಿ ನೀಡುವುದಾಗಿ ತಿಳಿಸಿದ್ದರು ಎಂಬ ಆರೋಪವಿತ್ತು. ಈ ಸಂಬಂಧ ಅವರನ್ನು ಬಂಧಿಸಲಾಗಿತ್ತು. ಬಳಿಕ ಜಾಮೀನು ಪಡೆದು ಹೊರ ಬಂದಿದ್ದ ಅವರು ಅಮಾನತು ಆದೇಶ ರದ್ದುಗೊಳಿಸುವಂತೆ ಕೋರಿ ಕೆಎಟಿಗೆ ಅರ್ಜಿ ಸಲ್ಲಿಸಿದ್ದರು. 2024ರ ನವೆಂಬರ್ 25ರಂದು ಕೆಎಟಿ ಇವರ ಮನವಿ ತಿರಸ್ಕರಿಸಿತ್ತು.

ಇದನ್ನೂ ಓದಿ:ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ: ಮಲಯಾಳಂ ಸಿನಿಮಾ ನಿರ್ದೇಶಕನ ವಿರುದ್ಧದ ತನಿಖೆಗೆ ತಡೆ

ABOUT THE AUTHOR

...view details