ಬೆಂಗಳೂರು: ನ್ಯಾಯಾಲಯ ನಿರ್ಬಂಧಿಸದ ಹೊರತು, ತಾಯಿಯ ವಶದಲ್ಲಿದ್ದ ಅಪ್ರಾಪ್ತ ಮಗುವನ್ನು ತಂದೆ ಕರೆದುಕೊಂಡು ಹೋದರೆ ಅಪಹರಣ ಆರೋಪದಲ್ಲಿ ಪ್ರಕರಣ ದಾಖಲಿಸಲಾಗದು ಎಂದು ಹೈಕೋರ್ಟ್ ತಿಳಿಸಿದೆ.
ಮಗುವನ್ನು ಅಪಹರಣ ಮಾಡಿದ ಆರೋಪದಲ್ಲಿ ಪತ್ನಿ ದಾಖಲಿಸಿದ್ದ ಪ್ರಕರಣ ರದ್ದು ಕೋರಿ ಪತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವೆಂಕಟೇಶ್ ನಾಯಕ್ ಟಿ. ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೆ, ಐಪಿಸಿ ಸೆಕ್ಷನ್ 636 (ಅಪಹರಣಕ್ಕಾಗಿ ಶಿಕ್ಷೆ) ಅಡಿಯಲ್ಲಿ ದಾಖಲಾಗಿದ್ದ ಎಫ್‌ಐಆರ್ ರದ್ದುಪಡಿಸಿ ಆದೇಶಿಸಿದೆ.
ಅಲ್ಲದೆ, ತಂದೆಯೂ ಸಹ ಮಗುವಿನ ಪಾಲಕರಾಗಿರಲಿದ್ದಾರೆ ಎಂದಿರುವ ನ್ಯಾಯಪೀಠ, ನ್ಯಾಯಾಲಯದ ನಿರ್ಬಂಧವಿಲ್ಲದಿದ್ದಲ್ಲಿ ಮಗುವನ್ನು ತಂದೆಯಾದವರು ತಾಯಿಯ ವಶದಿಂದ ಕರೆದುಕೊಂಡು ಹೋದಲ್ಲಿ ಪ್ರಕರಣ ದಾಖಲಿಸುವುದಕ್ಕೆ ಅವಕಾಶವಿಲ್ಲ ಎಂದು ತಿಳಿಸಿದೆ.
ಜೊತೆಗೆ, ಗಾರ್ಡಿಯನ್ಸ್ ಮತ್ತು ವಾರ್ಡ್ಸ್ ಕಾಯ್ದೆ 1980ರ ಸೆಕ್ಷನ್ 6ರ ಅಡಿಯಲ್ಲಿ ತಾಯಿಯ ಬಳಿಕ ತಂದೆಯೇ ಮಕ್ಕಳ ನೈಸರ್ಗಿಕ ರಕ್ಷಕರಾಗಿರುತ್ತಾರೆ. ಎಲ್ಲಿಯವರೆಗೂ ತಂದೆಯ ಪೋಷಕತ್ವದ ಹಕ್ಕುಗಳನ್ನು ಕಸಿದುಕೊಳ್ಳುವುದಿಲ್ಲವೋ, ಅಲ್ಲಿಯವರೆಗೂ ಮಗು ತಂದೆಯೊಂದಿಗೆ ಹೋಗಲು ನಿರ್ಬಂಧವಿರುವುದಿಲ್ಲ. ಹೀಗಾಗಿ, ಐಪಿಸಿ ಸೆಕ್ಷನ್ 361ರಲ್ಲಿ ತಿಳಿಸಿರುವಂತೆ ಅಪರಾಧವಾಗುವುದಿಲ್ಲ. ಅವರ ವಿರುದ್ಧ ಪ್ರಕರಣ ದಾಖಲಿಸಲಾಗದು ಎಂದು ಪೀಠ ಹೇಳಿದೆ.
ಪ್ರಕರಣದ ಹಿನ್ನೆಲೆ:ಅರ್ಜಿದಾರ (ಮಗುವಿನ ತಂದೆ) ಪತ್ನಿಯಿಂದ ದೂರವಿದ್ದು, ಹೆಂಡತಿಯ ಮನೆಯಲ್ಲಿ ನಡೆದ ಮಗುವಿನ ಎರಡನೇ ವರ್ಷದ ಹುಟ್ಟುಹಬ್ಬಕ್ಕೆ ಹಾಜರಾಗಿದ್ದರು. ಬಳಿಕ ಅಪ್ರಾಪ್ತ ಮಗುವನ್ನು ತಂದೆ ಕರೆದುಕೊಂಡು ಹೋಗಿ ಜನ್ಮದಿನಾಚರಣೆ ಆಚರಿಸಿದ್ದರು. ಈ ಹಿನ್ನೆಲೆಯಲ್ಲಿ ಪತ್ನಿ ಅಪಹರಣ ಆರೋಪದಲ್ಲಿ ದೂರು ದಾಖಲಿಸಿದ್ದರು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ''ತಂದೆಯೂ ಸಹ ಅಪ್ರಾಪ್ತ ಮಗುವಿನ ನೈಸರ್ಗಿಕ ಪಾಲಕರಾಗಿರುತ್ತಾರೆ. ಹೀಗಾಗಿ, ಅವರ ವಿರುದ್ಧ ಮಗುವಿನ ಅಪಹರಣ ಮಾಡುವುದಕ್ಕೆ ಅವಕಾಶವಿರುವುದಿಲ್ಲ'' ಎಂದು ನ್ಯಾಯಪೀಠಕ್ಕೆ ತಿಳಿಸಿದ್ದರು.
ಇದನ್ನೂ ಓದಿ:ಕೊಡವರಿಗೆ ಜಮ್ಮಾ ಬಾಣೆ ಭೂಮಿ ಮಾಲೀಕತ್ವ; ಕರ್ನಾಟಕ ಭೂ ಕಂದಾಯ ತಿದ್ದುಪಡಿ ಎತ್ತಿಹಿಡಿದ ಹೈಕೋರ್ಟ್ - High Court