ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ಕೆಲವು ಜಮೀನುಗಳ ಪರಾಭಾರೆ ನಿಷೇಧ) ಪಿಟಿಸಿಎಲ್ ಕಾಯಿದೆ ಅಡಿಯಲ್ಲಿ ಮಂಜೂರಾದ ಜಮೀನನ್ನು ಮಾರಾಟದ ಬಳಿಕ ಹಕ್ಕುಗಳ ಪುನರ್ಸ್ಥಾಪನೆಗೆ ಉಪವಿಭಾಗಾಧಿಕಾರಿಗಳ (AC) ಮುಂದೆ ಸಲ್ಲಿಸಿದ್ದ ಅರ್ಜಿಗೆ ಆಕ್ಷೇಪಿಸದೆ, ಜಿಲ್ಲಾಧಿಕಾರಿಗಳ (DC) ಮುಂದೆ ಮೇಲ್ಮನವಿ ಸಲ್ಲಿಸಿದಲ್ಲಿ ಪರಿಗಣಿಸಲಾಗದು ಎಂದು ಹೈಕೋರ್ಟ್ ತಿಳಿಸಿದೆ.
ಪರಿಶಿಷ್ಟ ಜಾತಿಗೆ ಸೇರಿದ ದಕ್ಯನಾಯ್ಕ್ ಅವರ ಕಾನೂನು ವಾರಸುದಾರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನೀಲ್ ದತ್ತ ಯಾದವ್ ಮತ್ತು ನ್ಯಾಯಮೂರ್ತಿ ಶಿವಶಂಕರ್ ಅಮರಣ್ಣನವರ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಅಲ್ಲದೆ, ಜಮೀನು ಖರೀದಿ ಮಾಡಿದ ಜವರಪ್ಪ ಎಂಬುವರು ಉಪವಿಭಾಗಾಧಿಕಾರಿಗಳು ನೊಟೀಸ್ ನೀಡಿದ ತಕ್ಷಣ ಅವರು ಅದಕ್ಕೆ ಪ್ರತಿಕ್ರಿಯಿಸಬೇಕಾಗಿತ್ತು. ಆದರೆ, ಅವರು ಉತ್ತರಿಸದ ಹಿನ್ನೆಲೆ ಏಕ ಪಕ್ಷೀಯವಾಗಿ ಆದೇಶ ನೀಡಿದ್ದಾರೆ. ಅಲ್ಲದೆ, ಉಪವಿಭಾಗಾಧಿಕಾರಿಗಳ ಮುಂದೆ ಆಕ್ಷೇಪಿಸದೆ ಜಿಲ್ಲಾಧಿಕಾರಿಗಳ ಮುಂದೆ ಅರ್ಜಿಯನ್ನು ಸಲ್ಲಿಸಲಾಗಿದೆ. ಪ್ರಸ್ತಾಪಿತ ಜಮೀನು ತಮ್ಮ ವಶದಲ್ಲಿದ್ದು, ಅದರ ಹಕ್ಕುಗಳನ್ನು ಮುಂದುವರೆಸಲು ಕೋರಿದ್ದಾರೆ. ಆದರೆ, ಜಿ.ಎಂ ವೆಂಕಟರೆಡ್ಡಿ ವಿರುದ್ಧದ ಕೋಲಾರ ಜಿಲ್ಲಾಧಿಕಾರ ಪ್ರಕರಣದಲ್ಲಿ ತಮ್ಮ ಹಕ್ಕುಗಳನ್ನು ಪುನರ್ಸ್ಥಾಪಿಸಲು ಪ್ರಾಥಮಿಕ ಹಂತದ ವಿಚಾರಣೆಗೆ (ಎಸಿ ನ್ಯಾಯಾಲಯದಲ್ಲಿ) ಆಕ್ಷೇಪಿಸಬೇಕು ಎಂಬುದಾಗಿ ಹೈಕೋರ್ಟ್ನ ಮತ್ತೊಂದು ಪೀಠ ಆದೇಶಿಸಿದೆ.
ಪ್ರಸ್ತುತದ ಪ್ರಕರಣದಲ್ಲಿ ಅರ್ಜಿದಾರರು ಜಮೀನನ್ನು 1963ರಲ್ಲಿ ಮಾರಾಟ ಮಾಡಿದ್ದಾರೆ. ಅದಾದ ಬಳಿಕ 1967ರಲ್ಲಿ ಉಪವಿಭಾಗಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಈ ಪ್ರಕ್ರಿಯೆ ಮಾರಾಟ ಮಾಡಿದ 5 ವರ್ಷಗಳ ನಂತರ ಪ್ರಾರಂಭವಾಗಿದೆ. ಆದ್ದರಿಂದ ನಕ್ಕಂಟಿ ರಾಮಲಕ್ಷ್ಮಿ ಪ್ರಕರಣ (ಮಾರಾಟ ಮಾಡಿದ 25 ವರ್ಷಗಳ ಬಳಿಕ ಪ್ರಶ್ನಿಸುವಂತಿಲ್ಲ)ದ ಆದೇಶ ಈ ಪ್ರಕರಣಕ್ಕೆ ಅನ್ವಯವಾಗುವುದಿಲ್ಲ. ಹೀಗಾಗಿ, ಅರ್ಜಿಯನ್ನು ಪುರಸ್ಕರಿಸುತ್ತಿರುವುದಾಗಿ ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಪ್ರಕರಣದ ಹಿನ್ನೆಲೆ : ಭದ್ರಾವತಿ ತಾಲೂಕಿನ ಮೊಸರಹಳ್ಳಿ ಗ್ರಾಮದ ಸರ್ವೇ ಸಂಖ್ಯೆ 20/6ರಲ್ಲಿ 3 ಎಕರೆ ಜಮೀನು ದಕ್ಯನಾಯಕ್ ಎಂಬುವರಿಗೆ 1967 ರಲ್ಲಿ ದರ್ಕಸ್ಥ್ ನಿಯಮಗಳ ಮೂಲಕ ಮಂಜೂರು ಮಾಡಿ 15 ವರ್ಷಗಳ ಕಾಲ ಪರಾಭಾರೆ ಮಾಡಬಾರದು ಎಂಬ ಷರತ್ತನ್ನು ವಿಧಿಸಲಾಗಿತ್ತು.
ಈ ಮೂರು ಎಕರೆ ಜಮೀನನ್ನು ಕೃಷ್ಣ ಬಾಯಿ ಎಂಬುವರಿಗೆ ಮಾರಾಟ ಮಾಡಿದ್ದರು. ಅದರಲ್ಲಿ ಕೃಷ್ಣ ಬಾಯಿ ಎಂಬುವರು 1 ಎಕರೆ ಜಮೀನನ್ನು ಜವರಪ್ಪ ಎಂಬುವರಿಗೆ 1967 ರಲ್ಲಿ ಮಾರಾಟ ಮಾಡಿದ್ದರು.