ಬೆಂಗಳೂರು: ಅಮೆರಿಕದ ಲೇಖಕ ವಾಷಿಂಗ್ಟನ್ ಇರ್ವಿನ್ ಅವರ ಪುಸ್ತಕ ರಿಪ್ ವ್ಯಾನ್ ವಿಂಕಲ್ಸ್ (ಗಾಢ ನಿದ್ರೆಗೆ ಜಾರುವ ಕುರಿತಾದದ್ದು) ಬಗ್ಗೆ ಉಲ್ಲೇಖಿಸಿರುವ ಹೈಕೋರ್ಟ್, ಸುಮಾರು ಒಂಬತ್ತು ವರ್ಷಗಳ ಕಾಲ ವಿಳಂಬವಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದಲ್ಲದೇ, ನ್ಯಾಯಾಲಯವನ್ನು ತಪ್ಪು ದಾರಿಗೆಳೆಯುವ ಹೇಳಿಕೆಗಳನ್ನು ನೀಡಿದ ಮಾಜಿ ಕಾಂಗ್ರೆಸ್ ಶಾಸಕ ಅನಿಲ್ ಹೆಚ್.ಲಾಡ್ ಅವರಂಥವರಿಗೆ ನ್ಯಾಯಾಲಯದ ಬಾಗಿಲುಗಳು ಮುಚ್ಚಿರುತ್ತವೆ ಎಂದು ತಿಳಿಸಿತು.
ಸಾಲ ವಸೂಲಾತಿ ನ್ಯಾಯಮಂಡಳಿ (ಡಿಆರ್‌ಟಿ) 2015ರಲ್ಲಿ ಹೊರಡಿಸಿದ್ದ ಆದೇಶದ ಕಾನೂನು ಬದ್ಧತೆಯನ್ನು ಪ್ರಶ್ನಿಸಿ ಅನಿಲ್ ಲಾಡ್ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ನಡೆಸಿತು. ಪ್ರಕರಣದಲ್ಲಿ 2014-15ರಲ್ಲಿ ಡಿಆರ್‌ಟಿ ಮುಂದೆ ಲಾಡ್ ಅವರು ಹರಾಜನ್ನು ಪ್ರಶ್ನಿಸಿಲ್ಲ. ಅಲ್ಲದೆ, ಬ್ಯಾಂಕ್ ಅವರಿಗೆ ಎರಡು ಬಾರಿ ಇಮೇಲ್ ಮೂಲಕ ಮಾರಾಟ ಪ್ರಮಾಣ ಪತ್ರವನ್ನು ಕಳುಹಿಸಿರುವ ಅಂಶ ದಾಖಲೆಗಳಿಂದ ತಿಳಿದು ಬಂದಿದೆ. ಆದರೆ, ಈ ಬಗ್ಗೆ ತಮ್ಮ ಗಮನಕ್ಕೆ ಬಂದಿಲ್ಲ ಎಂದು ಹೇಳುವ ಮೂಲಕ ನ್ಯಾಯಾಲಯವನ್ನು ತಪ್ಪು ದಾರಿಗೆಳೆಯಲು ಮುಂದಾಗಿದ್ದಾರೆ ಎಂದು ಪೀಠ ಹೇಳಿದೆ.
ಪ್ರಕರಣದ ಹಿನ್ನೆಲೆ:2008ರಲ್ಲಿ ತಮ್ಮ ಕಂಪನಿಗಳಲ್ಲೊಂದಾದ ವಿ.ಎಸ್.ಲಾಡ್ ಆ್ಯಂಡ್ ಸನ್ಸ್‌ಗೆ ನೀಡಿದ 12.67 ಕೋಟಿ ರೂ.ಗಳ ಸಾಲ ಸೌಲಭ್ಯಕ್ಕೆ ಖಾತರಿದಾರರಾಗಿ ಜಮೀನನ್ನು ಬ್ಯಾಂಕ್‌ಗೆ ಗ್ಯಾರಂಟಿ ನೀಡಿದ್ದರು. ಬ್ಯಾಂಕ್‌ಗೆ ಹಣ ಪಾವತಿ ಮಾಡದ ಹಿನ್ನೆಲೆಯಲ್ಲಿ ಖಾತರಿ ಜಮೀನನ್ನು ಬ್ಯಾಂಕ್ ಹರಾಜು ಮೂಲಕ ಮಾರಾಟ ಮಾಡಿತ್ತು. ಹರಾಜಿನಲ್ಲಿ ಲಾಡ್ ಅವರ ಅಡಮಾನ ಆಸ್ತಿ ಖರೀದಿಸಿದ ಸಂಸ್ಥೆಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್ 2014ರಲ್ಲಿ ಮಾರಾಟ ಪ್ರಮಾಣ ಪತ್ರ ವಿತರಿಸಿತ್ತು. ಈ ಕ್ರಮವನ್ನು ಡಿಆರ್‌ಟಿ ಎತ್ತಿ ಹಿಡಿದಿದೆ. ಇದನ್ನು ಪ್ರಶ್ನಿಸಿ ಲಾಡ್ ಹೈಕೋರ್ಟ್ ಮೆಟ್ಟಿಲೇರಿದ್ದರು.