ಕರ್ನಾಟಕ

karnataka

ETV Bharat / state

ಠಾಣೆಗಳಲ್ಲಿ ಸಿವಿಲ್ ವ್ಯಾಜ್ಯಗಳ ಇತ್ಯರ್ಥ ವಿಚಾರ; ಹೈಕೋರ್ಟ್ ಗರಂ - High Court Object - HIGH COURT OBJECT

ಸಿವಿಲ್ ವ್ಯಾಜ್ಯಗಳನ್ನು ಪೊಲೀಸ್​ ಠಾಣೆಗಳಲ್ಲಿ ಇತ್ಯರ್ಥ ಮಾಡುತ್ತಿರುವುದಕ್ಕೆ ಗರಂ ಆದ ಹೈಕೋರ್ಟ್, ಸಿವಿಲ್ ವ್ಯಾಜ್ಯವನ್ನು ಕ್ರಿಮಿನಲ್ ಪ್ರಕರಣವಾಗಿ ಮಾರ್ಪಡಿಸಲು ಹೇಗೆ ಸಾಧ್ಯ? ಎಂದು ನ್ಯಾಯಪೀಠ ಮೌಖಿಕವಾಗಿ ಪ್ರಶ್ನಿಸಿದೆ.

HIGH COURT OBJECT
ಹೈಕೋರ್ಟ್ (ETV Bharat)

By ETV Bharat Karnataka Team

Published : May 15, 2024, 10:28 PM IST

ಬೆಂಗಳೂರು :ಪೊಲೀಸ್ ಠಾಣೆಗಳು ವ್ಯಾಪಾರಿ ಕೇಂದ್ರಗಳಾಗಿ ಬದಲಾಗುತ್ತಿವೆ ಎಂದು ತಿಳಿಸಿರುವ ಹೈಕೋರ್ಟ್, ಸಿವಿಲ್ ಪ್ರಕರಣಗಳನ್ನು ಠಾಣಾ ಮಟ್ಟದಲ್ಲಿಯೇ ಇತ್ಯರ್ಥ ಪಡಿಸುವ ಪೊಲೀಸರ ಕಾರ್ಯವೈಖರಿ ಪುನರಾವರ್ತನೆ ಆಗುತ್ತಿರುವುದಕ್ಕೆ ಹೈಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ನಿವೇಶನವೊಂದರ ಖರೀದಿಗೆ ಸಂಬಂಧಿಸಿದ ವಿಚಾರದಲ್ಲಿ ಮಾರಾಟದಾರರಿಗೆ ಹಣ ಪಾವತಿಸಲು ಖರೀದಿದಾರರಿಗೆ ಒತ್ತಾಯಿಸಿದ ಹಾಗೂ ಬೆದರಿಕೆ ಹಾಕಿದ ಆರೋಪ ಸಂಬಂಧ ಬೆಂಗಳೂರಿನ ಚಂದ್ರಲೇಔಟ್ ಠಾಣೆಯ ಪೊಲೀಸರ ವಿರುದ್ಧ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರಿದ್ದ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ.

ಅಲ್ಲದೇ, ಪ್ರಕರಣ ಸಂಬಂಧ ಅರ್ಜಿದಾರರ ವಿರುದ್ಧ ಚಂದ್ರಲೇಔಟ್ ಠಾಣಾ ಪೊಲೀಸರು ದಾಖಲಿಸಿರುವ ಎಫ್‌ಐಆರ್ ಹಾಗೂ ಅದಕ್ಕೆ ಸಂಬಂಧಿಸಿದ ಮುಂದಿನ ಎಲ್ಲಾ ಕಾನೂನು ಪ್ರಕ್ರಿಯೆಗಳಿಗೆ ತಡೆಯಾಜ್ಞೆ ನೀಡಿ ನ್ಯಾಯಪೀಠ ಮಧ್ಯಂತರ ಆದೇಶ ಮಾಡಿದೆ. ಪೊಲೀಸ್ ಠಾಣೆಯನ್ನು ವ್ಯಾಪಾರ ಕೇಂದ್ರ ಮಾಡಿಕೊಳ್ಳಲಾಗಿದೆಯೇ? ಠಾಣೆಯಲ್ಲಿ ಸಿವಿಲ್ ವ್ಯಾಜ್ಯ ತೀರ್ಮಾನಿಸಲು ಪೊಲೀಸರಿಗೆ ಅಧಿಕಾರ ನೀಡಿದವರು ಯಾರು? ಠಾಣೆಯಲ್ಲಿ ಕೂತು ವಸೂಲಿ ಮಾಡುವುದು ಪೊಲೀಸರ ಕೆಲಸವೇ? ಸಿವಿಲ್ ವ್ಯಾಜ್ಯವನ್ನು ಕ್ರಿಮಿನಲ್ ಪ್ರಕರಣವಾಗಿ ಮಾರ್ಪಡಿಸಲು ಹೇಗೆ ಸಾಧ್ಯ? ಎಂದು ನ್ಯಾಯಪೀಠ ಮೌಖಿಕವಾಗಿ ಪ್ರಶ್ನಿಸಿದೆ.

ಅಲ್ಲದೇ, ಈ ಪ್ರಕರಣದಲ್ಲಿ ಪೊಲೀಸ್ ತನಿಖಾಧಿಕಾರಿ ಹಲವಾರು ರೀತಿಯಲ್ಲಿ ಕಾನೂನು ಉಲಂಘಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಇದರಿಂದ ಅವರ ವಿರುದ್ಧ ಬೆಂಗಳೂರು ಪಶ್ವಿಮ ವಿಭಾಗದ ಉಪಪೊಲೀಸ್ ಆಯುಕ್ತರು (ಡಿಸಿಪಿ) ಕ್ರಮ ಕೈಗೊಂಡು ಒಂದು ತಿಂಗಳಲ್ಲಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು. ತನಿಖಾಧಿಕಾರಿ ಕಾನೂನು ದುರ್ಬಳಕೆ ಮಾಡಿರುವ ಬಗ್ಗೆ ತಮ್ಮ ಬಳಿ ಇರುವ ಎಲ್ಲಾ ದಾಖಲೆಗಳನ್ನು ಡಿಸಿಪಿಗೆ ಅವರಿಗೆ ಅರ್ಜಿದಾರರು ಸಲ್ಲಿಸಬೇಕು ಎಂದು ಪೀಠ ಸೂಚನೆ ನೀಡಿದೆ.

ಪ್ರಕರಣದ ಹಿನ್ನೆಲೆ :ಜಮೀನೊಂದರ ಖರೀದಿಗೆ ಸಂಬಂಧಿಸಿದಂತೆ ಪ್ರಕರಣದ ದೂರುದಾರರಾದ ಹನುಮಂತರಾಜು ಮತ್ತು ರುಕ್ಮುಣಿ ಎಂಬುವವರಿಗೆ 3.53 ಕೋಟಿ ರೂ. ಪಾವತಿಸಿದ್ದು, 1.76 ಕೋಟಿ ರೂ. ಬಾಕಿ ಉಳಿದಿತ್ತು. ಬಾಕಿ ಹಣ ಪಾವತಿಸದ್ದಕ್ಕೆ ದೂರುದಾರರು ಗೋವಿಂದರಾಜು ನಗರ ಪೊಲೀಸ್ ಠಾಣೆಗೆ ತಮ್ಮ ವಿರುದ್ಧ ಏ.1ರಂದು ದೂರು ದಾಖಲಿಸಿದ್ದರು.

ಇದರಿಂದ ತಾವು ಪೊಲೀಸ್ ಠಾಣೆಗೆ ಭೇಟಿ ನೀಡಿ, ಸ್ಮಶಾನವಿರುವ ಸಂಗತಿ ಮುಚ್ಚಿಟ್ಟು ತಮಗೆ ದೂರುದಾರರು ಜಮೀನು ಮಾರಾಟ ಮಾಡಿ ವಂಚಿಸಿದ್ದಾರೆ. ಇದರಿಂದಲೇ ತಾವು ಹಣ ಪಾವತಿಸಿಲ್ಲ ಎಂದು ಪೊಲೀಸರ ಗಮನಕ್ಕೆ ತಂದಿದ್ದೆ ಎಂಬುದಾಗಿ ಅರ್ಜಿದಾರರು ಅರ್ಜಿಯಲ್ಲಿ ವಿವರಿಸಿದ್ದರು. ಅಲ್ಲದೆ, ತಮ್ಮ ಹೇಳಿಕೆ ಪರಿಗಣಿಸಿ ಗೋವಿಂದರಾಜನಗರ ಠಾಣಾ ಪೊಲೀಸರು ಎನ್ಸಿಆರ್ ದಾಖಲಿಸಿಕೊಂಡು ತಮ್ಮನ್ನು ಬಿಡುಗೊಡೆಗೊಳಿಸಿದರು.

ಇದಾದ ಬಳಿಕ ಚಂದ್ರಲೇಔಟ್ ಠಾಣಾ ಪೊಲೀಸರು ಏ.29ರಂದು ಬೆಳಗ್ಗೆ 8.45ಕ್ಕೆ ತಮ್ಮನ್ನು ಠಾಣೆಗೆ ಕರೆದೊಯ್ದು, ಎಫ್‌ಐಆರ್ ದಾಖಲಿಸಿದ್ದರು. ಜತೆಗೆ, ತಮ್ಮ ಮೇಲೆ ಒತ್ತಡ ಹೇರಿ ದೂರುದಾರರಿಗೆ 50 ಲಕ್ಷ ರೂ. ಪಾವತಿಸುವಂತೆ ಮಾಡಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಿದ್ದಾರೆ. ಜತೆಗೆ, ತಮ್ಮ ವಿರುದ್ಧ ಚಂದ್ರಲೇಔಟ್ ಠಾಣಾ ಪೊಲೀಸರು ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸಬೇಕು ಎಂದು ಕೋರಿದ್ದಾರೆ.

ಇದನ್ನೂ ಓದಿ:ಇಬ್ಬರು ವಿದ್ಯಾರ್ಥಿನಿಯರಿಗೆ ಆರ್ಥಿಕ ನೆರವು ನೀಡಲು ಕಾರ್ಮಿಕ ಇಲಾಖೆಗೆ ಹೈಕೋರ್ಟ್​ ಆದೇಶ - High Court

ABOUT THE AUTHOR

...view details