ಕರ್ನಾಟಕ

karnataka

ETV Bharat / state

ಡಾಂಬರು ಮಿಶ್ರಣ ಕೇಂದ್ರದಿಂದ ಮಾಲಿನ್ಯ; ಸರ್ಕಾರಕ್ಕೆ ಹೈಕೋರ್ಟ್​ ನೋಟಿಸ್

ಕೋಲಾರ ತಾಲೂಕಿನ ಗ್ರಾಮವೊಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾಂಬರು ಮಿಶ್ರಣ ಘಟಕದಿಂದ ಮಾಲಿನ್ಯವಾಗುತ್ತಿರುವ ಆರೋಪದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್​ ರಾಜ್ಯ ಸರ್ಕಾರ ಮತ್ತು ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ನೋಟಿಸ್​ ನೀಡಿದೆ.

ಹೈಕೋರ್ಟ್
ಹೈಕೋರ್ಟ್

By ETV Bharat Karnataka Team

Published : Mar 14, 2024, 9:51 AM IST

ಬೆಂಗಳೂರು:ಕೋಲಾರ ತಾಲೂಕಿನ ಮೇಡಿಹಾಳಗ್ರಾಮದ ಬಳಿ ಸ್ಥಾಪಿಸಿರುವ ಡಾಂಬರು ಮಿಶ್ರಣ ಘಟಕದಿಂದ ಮಾಲಿನ್ಯವಾಗುತ್ತಿದೆ ಎಂದು ಸಲ್ಲಿಸಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರ ಮತ್ತು ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಹೈಕೋರ್ಟ್ ನೋಟಿಸ್​ ಜಾರಿ ಮಾಡಿದೆ.

ಧನಮಂತನಹಳ್ಳಿ ಗ್ರಾಮದ ಕೆ.ಮಂಜುನಾಥ್​​​ ಎಂಬುವರು ಸೇರಿದಂತೆ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್​ ಅವರಿದ್ದ ವಿಭಾಗೀಯ ಪೀಠದ ನೋಟಿಸ್​ ಜಾರಿ ಮಾಡಿ ವಿಚಾರಣೆಯನ್ನು ಎ.1ಕ್ಕೆ ಮುಂದೂಡಿದೆ.

ಅಲ್ಲದೆ, ಮಾಲಿನ್ಯದ ಸಂಬಂಧ ಕೆಎಸ್‌ಪಿಸಿಬಿ ಈಗಾಗಲೇ ಹಾಟ್​​ ಮಿಕ್ಸ್ ಪ್ಲಾಂಟ್‌ಗೆ ನೋಟಿಸ್​​ ನೀಡಿರುವ ಹಿನ್ನೆಲೆಯಲ್ಲಿ ಮಂಡಳಿ ಮುಂದಿನ ಕಾನೂನು ಕ್ರಮ ಜರುಗಿಸಬೇಕಾಗಿದೆ ಎಂದು ನ್ಯಾಯಾಲಯ ಮೌಖಿಕವಾಗಿ ಮಾಲಿನ್ಯ ನಿಯಂತ್ರಣ ಮಂಡಳಿ ವಕೀಲರಿಗೆ ಸೂಚಿಸಿತು.

ಅರ್ಜಿದಾರರ ಪರ ವಾದ ಮಂಡಿಸಿದ ನರೇಶ್​​​ ಸಂತೋಷ್​​​, ಕೋಲಾರ ತಾಲೂಕಿನ ಮೇಡಿಹಾಳ ಗ್ರಾಮದ ಸರ್ವೆ ನಂಬರ್​​​ 59ರಲ್ಲಿ ಮೆಸರ್ಸ್​ ಪ್ರಶಾಂತ್​​ ಕ್ರಷರ್​ ಪ್ರೈವೇಟ್ ಲಿಮಿಟೆಡ್ ಸ್ಥಾಪಿಸಿರುವ ಹಾಟ್​ ಮಿಕ್ಸ್ ಘಟಕದಿಂದ ಭಾರಿ ಮಾಲಿನ್ಯವಾಗುತ್ತಿದೆ. ಗ್ರಾಮದ ಕೃಷಿಕರ ಮೇಲೆ ಮತ್ತು ಸನಿಹದಲ್ಲೇ ಇರುವ ಶಾಲಾ ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಕೃಷಿ ಬೆಳೆಗಳು ಹಾಳಾಗುತ್ತಿವೆ. ಈ ಬಗ್ಗೆ ಶಾಲೆಯ ಮುಖ್ಯೋಪಾಧ್ಯಾಯರು ಪತ್ರ ಬರೆದಿದ್ದಾರೆ. ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಘಟಕಕ್ಕೆ ನೋಟಿಸ್ ಜಾರಿ ಮಾಡಿದ್ದು, ಕ್ರಮಕ್ಕೆ ಮುಂದಾಗಿಲ್ಲ.

ಅಲ್ಲದೆ, ಶಾಲಾ ಮಕ್ಕಳು ಮಾಲಿನ್ಯದಿಂದ ದಿನವೂ ಸಮಸ್ಯೆ ಎದುರಿಸುವಂತಾಗಿದೆ. ರೇಷ್ಮೆ ಇಲಾಖೆ ಕೂಡ ಸರ್ಕಾರಕ್ಕೆ ಪತ್ರ ಬರೆದು ಹಾಟ್​ ಮಿಕ್ಸ್​​ ಘಟಕ ಸ್ಥಗಿತಗೊಳಿಸಬೇಕೆಂದು ಕೋರಿದೆ. ಆದರೂ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಕೂಡಲೇ ಘಟಕವನ್ನು ಮುಚ್ಚಿಸುವಂತೆ ಮಾಲಿನ್ಯ ಮಂಡಳಿಗೆ ಸೂಚನೆ ನೀಡಬೇಕು ಎಂದು ಕೋರಿದರು.

ಇದನ್ನೂ ಓದಿ:ಹೈಕೋರ್ಟ್ ಆದೇಶ ಉಲ್ಲಂಘಿಸಿ ರಸ್ತೆ ನಿರ್ಮಾಣ: ಬಿಬಿಎಂಪಿ ಮುಖ್ಯ ಆಯುಕ್ತರಿಗೆ ನೋಟಿಸ್

ABOUT THE AUTHOR

...view details