ಬೆಂಗಳೂರು:ವಾಹನದ ಮೇಲಿನ ನಿಗಾ ವ್ಯವಸ್ಥೆ (ಟ್ರ್ಯಾಕಿಂಗ್ ಸಿಸ್ಟಂ) ಹಾಗೂ ಅಪಾಯ ಸೂಚನಾ ಒತ್ತುಗುಂಡಿ (ಪ್ಯಾನಿಕ್ ಬಟನ್) ಅಳವಡಿಸದಿದ್ದರೆ, ಫಿಟ್ನೆಸ್ ಸರ್ಟಿಫಿಕೆಟ್ ನವೀಕರಣಕ್ಕೆ ಅವಕಾಶವಿಲ್ಲ ಎಂಬುದಾಗಿ 2023ರ ನವೆಂಬರ್ 23ರಂದು ರಾಜ್ಯ ಸಾರಿಗೆ ಇಲಾಖೆ ಹೊರಡಿಸಿರುವ ಆದೇಶ ಪ್ರಶ್ನಿಸಿರುವ ಸಂಬಂಧ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಬೆಂಗಳೂರು ಪ್ರವಾಸಿ ಟ್ಯಾಕ್ಸಿ ಮಾಲೀಕರ ಸಂಸ್ಥೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಮಾಡಿದೆ. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ''2018ರಲ್ಲಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ ಬಳಿಕ ರಾಜ್ಯ ಸರ್ಕಾರ 2023ರಲ್ಲಿ ಅಧಿಸೂಚನೆ ಹೊರಡಿಸಿದೆ. ಫಿಟ್ನೆಸ್ ಸರ್ಟಿಫಿಕೆಟ್ ಮಾಡಿಸದಿದ್ದರೆ ವಾಹನ ಓಡಿಸಲು ಆಗುವುದಿಲ್ಲ. ಟ್ಯಾಕ್ಸಿ ಸಂಸ್ಥೆ ಅಡಿ 20 ಸಾವಿರಕ್ಕೂ ಅಧಿಕ ವಾಹನಗಳಿವೆ. ಸರ್ಕಾರದ ಸೂಚನೆಯಂತೆ ನವೆಂಬರ್ 30ಕ್ಕೆ ಗಡುವು ಮುಗಿಯಲಿದೆ. ಇದರಿಂದ ಟ್ಯಾಕ್ಸಿ ಮಾಲೀಕರು, ಡ್ರೈವರ್ಗಳಿಗೆ ಕಷ್ಟವಾಗಲಿದೆ. ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ವಿನಾಯಿತಿ ನೀಡಲಾಗಿದೆ ಎಂದು ಸ್ವತಃ ಸಾರಿಗೆ ಸಚಿವರೇ ಹೇಳಿದ್ದಾರೆ. ಆದರೆ ಖಾಸಗಿಯವರಿಗೆ ವಿನಾಯಿತಿ ನೀಡಿಲ್ಲ. ಇದು ತಾರತಮ್ಯದ ನೀತಿ'' ಎಂದು ಪೀಠಕ್ಕೆ ವಿವರಿಸಿದರು.
ಇದಕ್ಕೆ ಆಕ್ಷೇಪಿಸಿದ ಸರ್ಕಾರಿ ವಕೀಲರು, ''ದೆಹಲಿಯಲ್ಲಿ ನಡೆದಿದ್ದ ನಿರ್ಭಯಾ ಪ್ರಕರಣದ (ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿಯ ಮೇಲೆ ಖಾಸಗಿ ಬಸ್‌ನಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣ) ಹಿನ್ನೆಲೆಯಲ್ಲಿ ಈ ಅಧಿಸೂಚನೆ ಹೊರಡಿಸಲಾಗಿದೆ. ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಎರಡು ವಾರ ಸಮಯ ನೀಡಬೇಕು'' ಎಂದು ಕೋರಿದರು.
ವಾದ ಆಲಿಸಿದ ಪೀಠ, ''ಸರ್ಕಾರದ ಅಧಿಸೂಚನೆಗೆ ಏಕಾಏಕಿ ತಡೆ ನೀಡಲು ಆಗುವುದಿಲ್ಲ. ಸರ್ಕಾರಕ್ಕೆ ನೋಟಿಸ್ ತಲುಪಲಿ, ಆಕ್ಷೇಪಣೆ ಸಲ್ಲಿಸಬೇಕು. ಅದರ ಬಳಿಕವಷ್ಟೇ ಮಧ್ಯಂತರ ಮನವಿ ಪರಿಗಣಿಸಲಾಗುವುದು'' ಎಂದು ತಿಳಿಸಿ ವಿಚಾರಣೆ ಮುಂದೂಡಿತು.
ಅರ್ಜಿಯಲ್ಲೇನಿದೆ?:ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಇಲಾಖೆಯು 2018ರ ಅಕ್ಟೋಬರ್ 25ರಂದು ಮೋಟಾರು ವಾಹನಗಳ (ವೆಹಿಕಲ್ ಲೊಕೇಷನ್ ಟ್ರ್ಯಾಕಿಂಗ್ ಡಿವೈಸ್ ಮತ್ತು ಎಮರ್ಜೆನ್ಸಿ ಬಟನ್) ನಿಯಮ 2018 ಅನ್ನು ರೂಪಿಸಿತ್ತು. ಇವುಗಳನ್ನು 2024ರ ನವೆಂಬರ್ 30ರ ಒಳಗೆ ಜಾರಿಗೊಳಿಸುವಂತೆ ಕೇಂದ್ರ ಸರ್ಕಾರವು 2023ರ ನವೆಂಬರ್ 23ರಂದು ರಾಜ್ಯ ಸರ್ಕಾರಗಳಿಗೆ ಆದೇಶಿಸಿತ್ತು.
ರಾಜ್ಯ ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿಯ ನಿರ್ದೇಶನದ ಹಿನ್ನೆಲೆಯಲ್ಲಿ ರಾಜ್ಯ ಸಾರಿಗೆ ಆಯುಕ್ತರು 2023ರ ನವೆಂಬರ್ 27ರಂದು ಲೋಕೇಶನ್ ಟ್ರ್ಯಾಕಿಂಗ್ ಡಿವೈಸ್ ಮತ್ತು ಎಮರ್ಜೆನ್ಸಿ ಟ್ರ್ಯಾಕಿಂಗ್ ಬಟನ್ ಅಳವಡಿಸಿದ್ದರೆ ಮಾತ್ರ ಫಿಟ್ನೆಸ್ ಸರ್ಟಿಫಿಕೆಟ್ ನೀಡುವಂತೆ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶಿಸಿದ್ದರು. ಕೇಂದ್ರ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿಯು ಲೋಕೇಶನ್ ಟ್ರ್ಯಾಕಿಂಗ್ ಡಿವೈಸ್ ಮತ್ತು ಎಮರ್ಜೆನ್ಸಿ ಟ್ರ್ಯಾಕಿಂಗ್ ಬಟನ್ ಅಳವಡಿಕೆ ಗಡುವನ್ನು 2024ರ ಸೆಪ್ಟೆಂಬರ್ 10ಕ್ಕೆ ವಿಸ್ತರಿಸಿತ್ತು. ಇದರ ಬೆನ್ನಿಗೇ ಸಾರಿಗೆ ಆಯುಕ್ತರು ಗಡುವು ವಿಸ್ತರಣೆಯನ್ನು ಸುತ್ತೋಲೆಯ ಮೂಲಕ ತಿಳಿಸಿದ್ದರು.
ಇದೆಲ್ಲಾ ಬೆಳವಣಿಗೆಗಳ ನಡುವೆ 2024ರ ಮಾರ್ಚ್ 14ರಂದು ಸಾರಿಗೆ ಆಯುಕ್ತರು ಲೋಕೇಶನ್ ಟ್ರ್ಯಾಕಿಂಗ್ ಡಿವೈಸ್ ಮತ್ತು ಎಮರ್ಜೆನ್ಸಿ ಟ್ರ್ಯಾಕಿಂಗ್ ಬಟನ್ ಪೂರೈಸುವ 12 ಡೀಲರ್‌ಗಳ ಪಟ್ಟಿಯನ್ನು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಕಳುಹಿಸಿದ್ದರು. ಈ ಡೀಲರ್‌ಗಳ ಮೂಲಕ ಪಡೆದ ಸಾಧನಗಳನ್ನು ಅಳವಡಿಸಿರುವವರಿಗೆ ಮಾತ್ರ ಫಿಟ್ನೆಸ್ ಸರ್ಟಿಫಿಕೆಟ್ ನವೀಕರಣ ಪರಿಗಣಿಸಬೇಕು ಎಂದು ಆದೇಶಿಸಿದ್ದರು. ಈ ನಡುವೆ, ಕೆಎಸ್‌ಆರ್‌ಟಿಸಿ ವಾಹನಗಳಿಗೆ ಮಾತ್ರ ಲೋಕೇಶನ್ ಟ್ರ್ಯಾಕಿಂಗ್ ಡಿವೈಸ್ ಮತ್ತು ಎಮರ್ಜೆನ್ಸಿ ಟ್ರ್ಯಾಕಿಂಗ್ ಬಟನ್ ಅಳವಡಿಕೆ ಗಡುವನ್ನು ಎರಡು ತಿಂಗಳು ವಿಸ್ತರಿಸಿ 2024ರ ಅಕ್ಟೋಬರ್ 21ರಂದು ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಆದೇಶಿಸಿದ್ದರು.
ಇದನ್ನು ಪ್ರಶ್ನಿಸಿರುವ ಅರ್ಜಿದಾರರು, ''ಪ್ರತಿವಾದಿ ಸಾರಿಗೆ ಇಲಾಖೆಯ ನಡೆ ಮೋಟಾರು ವಾಹನಗಳ ಕಾಯಿದೆ 1988 ಮತ್ತು ಕೇಂದ್ರೀಯ ಮೋಟಾರು ವಾಹನಗಳ ನಿಯಮ 1989ಕ್ಕೆ ವಿರುದ್ಧವಾಗಿದೆ. 2018ರ ಅಕ್ಟೋಬರ್ 25ರಂದು ಕೇಂದ್ರ ಸಾರಿಗೆ ಇಲಾಖೆಯ ಆದೇಶ ಪಾಲಿಸದೇ, ರಾಜ್ಯ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಮತ್ತು ಆಯುಕ್ತರು ಫಿಟ್ನೆಸ್ ಸರ್ಟಿಫಿಕೆಟ್ ನವೀಕರಣಕ್ಕೆ ಸಂಬಂಧಿಸಿದಂತೆ ನೀಡಿರುವ ನಿರ್ದೇಶನವು ಕಾನೂನು ಬಾಹಿರವಾಗಿದೆ. ಈ ಆದೇಶ ರದ್ದುಪಡಿಸಬೇಕು'' ಎಂದು ಕೋರಿದ್ದಾರೆ.
ಇದನ್ನೂ ಓದಿ:ಹೆರಿಗೆ, ಮಕ್ಕಳ ಆರೈಕೆ ಮಾಡಲು ನರ್ಸ್ಗೆ ಹೆಚ್ಚುವರಿ ರಜೆ: ಸಿಎಟಿ ಆದೇಶ ಎತ್ತಿ ಹಿಡಿದ ಹೈಕೋರ್ಟ್