ಕರ್ನಾಟಕ

karnataka

ETV Bharat / state

ಪೌರಕಾರ್ಮಿಕರ ಬಾಕಿ ಪಿಎಫ್​ ವಂತಿಕೆ: 8 ವಾರಗಳಲ್ಲಿ ಪಾವತಿಸಲು ಬಿಬಿಎಂಪಿಗೆ ಹೈಕೋರ್ಟ್ ಸೂಚನೆ

ಪೌರಕಾರ್ಮಿಕರ ಬಾಕಿ ಪಿಎಫ್​ ವಂತಿಕೆಯನ್ನು ಪಾವತಿಸುವಂತೆ ಬಿಬಿಎಂಪಿಗೆ ಹೈಕೋರ್ಟ್ ಸೂಚಿಸಿದೆ.​

high court
ಬಿಬಿಎಂಪಿಗೆ ಹೈಕೋರ್ಟ್ ಸೂಚನೆ

By ETV Bharat Karnataka Team

Published : Feb 15, 2024, 10:39 PM IST

ಬೆಂಗಳೂರು: ತಮ್ಮ ಆರೋಗ್ಯವನ್ನು ಗಣನೆಗೆ ತೆಗೆದುಕೊಳ್ಳದೆ ಇತರರ ರಕ್ಷಣೆಗೆ ನಿರಂತರವಾಗಿ ಶ್ರಮಿಸುತ್ತಿರುವ ಪೌರ ಕಾರ್ಮಿಕರಿಗೆ ನೀಡಬೇಕಾಗಿರುವ ಭವಿಷ್ಯನಿಧಿ(ಪಿಎಫ್​) ವಂತಿಕೆಯ ಬಾಕಿ ಮೊತ್ತ 90,18,89,719 ರೂ.ಯನ್ನು ವಾರ್ಷಿಕ ಶೇ.12 ಬಡ್ಡಿಯೊಂದಿಗೆ ಪಾವತಿಸುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ(ಬಿಬಿಎಂಪಿ) ಹೈಕೋರ್ಟ್ ನಿರ್ದೇಶನ ನೀಡಿದೆ.

ಪೌರ ಕಾರ್ಮಿಕರಿಗೆ ಬಾಕಿ ಉಳಿಸಿಕೊಂಡಿದ್ದ ಪಿಎಫ್​ ಮೊತ್ತವನ್ನು ಪಾವತಿಸುವಂತೆ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರು ಆದೇಶ ಜಾರಿ ಮಾಡುವಂತೆ ಬಿಬಿಎಂಪಿ ಪೌರಕಾಮಿಕರ ಸಂಘ ಅರ್ಜಿ ಸಲ್ಲಿಸಿತ್ತು. ಇದರ ಜತೆಗೆ, ಪ್ರಾದೇಶಿಕ ಭವಿಷ್ಯನಿಧಿ ಆಯುಕ್ತರ ಆದೇಶ ಪ್ರಶ್ನಿಸಿ ಬಿಬಿಎಂಪಿ(ಮುಖ್ಯ ಲೆಕ್ಕ ಅಧಿಕಾರಿ) ಪ್ರತ್ಯೇಕವಾಗಿ ಅರ್ಜಿಗಳ ಸಲ್ಲಿಸಿದ್ದರು. ಈ ಅರ್ಜಿಗಳನ್ನು ನ್ಯಾಯಮೂರ್ತಿ ಕೆ.ಎಸ್.ಹೇಮಲೇಖ ಅವರಿದ್ದ ನ್ಯಾಯಪೀಠ ವಿಚಾರಣೆ ನಡೆಸಿತು.

ಆದೇಶದ ಪ್ರತಿ ಲಭ್ಯವಾದ ಎಂಟು ವಾರಗಳಲ್ಲಿ ಬಾಕಿಯಿರುವ ಮೊತ್ತವನ್ನು ಇಫಿಎಫ್​ ಖಾತೆಗಳಿಗೆ ಜಮಾ ಮಾಡುವಂತೆ ನಿರ್ದೇಶನ ನೀಡಿದೆ. ಕಾರ್ಮಿಕರು (ಪೌರಕಾರ್ಮಿಕರು) ಸಮಾಜಕ್ಕೆ ಉತ್ತಮ ಸೇವೆ ಮಾಡುತ್ತಿದ್ದಾರೆ. ಎಲ್ಲಾ ಕಾರ್ಮಿಕರು ಸರಿಯಾದ ವೇತನವನ್ನು ಸಕಾಲಕ್ಕೆ ಪಡೆಯುವುದನ್ನು ಒಳಗೊಂಡಂತೆ ತಮ್ಮ ಬಾಕಿ ಮೊತ್ತಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಕಾರ್ಮಿಕ ಸಂಘಟನೆಯು ಹಲವಾರು ವರ್ಷಗಳಿಂದ ಹೋರಾಟ ಮಾಡಿದೆ.

ಹೆಚ್ಚಿನ ಪೌರಕಾರ್ಮಿಕರು ದಲಿತ ಸಮುದಾಯವರಾಗಿದ್ದು, ಅದರಲ್ಲೂ ಪ್ರಧಾನವಾಗಿ ಮಹಿಳೆಯರೇ ಹೆಚ್ಚು ಇದ್ದಾರೆ. ಸಾಪ್ತಾಹಿಕ ಅಥವಾ ರಾಷ್ಟ್ರೀಯ ರಜಾದಿನಗಳು ಅಥವಾ ಯಾವುದೇ ವಿರಾಮಗಳಿಲ್ಲದೆಯೇ ಅವರು ವೈಜ್ಞಾನಿಕ ತಂತ್ರಜ್ಞಾನವಿಲ್ಲದ ಅಮಾನವೀಯ ಮತ್ತು ಹಿಂದಿನಕಾಲದಲ್ಲಿದ್ದ ಮಾದರಿಯಲ್ಲಿಯೇ ಕಸ ಸಂಗ್ರಹಣೆ ಮತ್ತು ರಸ್ತೆ ಗುಡಿಸುವಲ್ಲಿ ವರ್ಷವಿಡೀ ಕೆಲಸ ಮಾಡುತ್ತಾರೆ.

ಅಲ್ಲದೆ, ತಮ್ಮ ಸ್ವಂತ ಆರೋಗ್ಯವನ್ನು ಲೆಕ್ಕಿಸದೇ ನಿರಂತರವಾಗಿ ಸಾರ್ವಜನಿಕರ ಆರೋಗ್ಯವನ್ನು ರಕ್ಷಿಸಿದ್ದಾರೆ. ಪ್ರತೀ ದಿನವೂ ಅದನ್ನು ಮುಂದುವರೆಸಿದ್ದಾರೆ. ಇದರಿಂದ ಅವರು ಜೀವಮಾನವನ್ನು ಕಡಿಮೆಗೊಳಿಸುವ ಗಂಭೀರ ಉಸಿರಾಟದ ಕಾಯಿಲೆಗಳು, ಹೃದಯ ಸಂಬಂಧಿ ತೊಂದರೆಗಳು, ಬೆನ್ನು ಮತ್ತು ಮೊಣಕಾಲಿನ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ಪೀಠ ತಿಳಿಸಿದೆ.

ಪ್ರಕರಣದಲ್ಲಿ ಪ್ರತಿವಾದಿ ಬಿಬಿಎಂಪಿಯ ಕೃತ್ಯಗಳು ಅತ್ಯಂತ ಬಡ ಮತ್ತು ಹಿಂದುಳಿದ ಹಿನ್ನೆಲೆಯಿಂದ ಬಂದ ಕಾರ್ಮಿಕರಿಗೆ ಆರ್ಥಿಕ ಮತ್ತು ಮಾನಸಿಕ ನೋವನ್ನು ಉಂಟುಮಾಡಿದೆ. 2017ರ ಅಕ್ಟೋಬರ್​ 26ರಿಂದ ಆದೇಶವನ್ನು ಪಾಲಿಸಲು ಮತ್ತು ಅನುಷ್ಠಾನಗೊಳಿಸಲು ವಿಫಲವಾಗಿದೆ. ಇದು ಅತ್ಯಂತ ಕಾನೂನುಬಾಹಿರ ಕ್ರಮವಾಗಿದೆ. ಇದು ಸಾರ್ವಜನಿಕ ನೀತಿಯ ಉಲ್ಲಂಘನೆ ಮಾಡಿದಂತಾಗಿದೆ. ಅಲ್ಲದೆ, ಪೌರಕಾರ್ಮಿಕರ ಮೂಲಭೂತ ಮತ್ತು ಶಾಸನಬದ್ಧ ಜೀವನಕ್ಕೆ ವಿರುದ್ಧವಾಗಿದೆ ಎಂದು ಪೀಠ ಹೇಳಿದೆ.

ಪ್ರಕರಣದ ಹಿನ್ನೆಲೆ:ಬಿಬಿಎಂಪಿ ಪೌರಕಾರ್ಮಿಕರ ಸಂಘವು ಬಿಬಿಎಂಪಿಯಲ್ಲಿ ಉದ್ಯೋಗದಲ್ಲಿರುವ ಪೌರಕಾರ್ಮಿಕರಿಗೆ ಜನವರಿ 2011 ಮತ್ತು ಜುಲೈ 2017ರ ನಡುವಿನ ಅವಧಿಗೆ ಬಾಕಿ ಉಳಿಸಿಕೊಂಡಿದ್ದ ಪಿಎಫ್ ವಂತಿಕೆ ಪಾವತಿಸುವಂತೆ ಕೋರಿ ಪ್ರಾದೇಶಿಸಿ ಭವಿಷ್ಯನಿಧಿ ಆಯುಕ್ತರಿಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ್ದ ಪ್ರಾಧಿಕಾರವು ಪೌರಕಾರ್ಮಿಕರಿಗೆ ಪಾವತಿ ಮಾಡಬೇಕಾಗಿದ್ದ ಬಿಬಿಎಂಪಿ ಬಾಕಿ ಉಳಿಸಿಕೊಂಡಿದ್ದ 90,18,89,719 ರೂ.ಗಳನ್ನು ಇಪಿಎಫ್ ಖಾತೆಗಳಿಗೆ ಜಮೆ ಮಾಡುವಂತೆ ಆದೇಶಿಸಿತ್ತು. ಆದರೆ, ಬಿಬಿಎಂಪಿ ಬಾಕಿ ಮೊತ್ತವನ್ನು ಪಾವತಿ ಮಾಡಿರಲಿಲ್ಲ. ಇದನ್ನು ಪ್ರಶ್ನಿಸಿ ಅರ್ಜಿದಾರರ ಸಂಘ ಮತ್ತು ಪ್ರಾದೇಶಿಕ ಭವಿಷ್ಯನಿಧಿ ಆಯುಕ್ತರ ಆದೇಶವನ್ನು ಜಾರಿ ಮಾಡುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿತ್ತು.

ಇದನ್ನೂ ಓದಿ:ಒಪಿಎಸ್ ಮರುಜಾರಿ ಸೇರಿ ಹಲವು ಬೇಡಿಕೆ: ಸಿದ್ದರಾಮಯ್ಯ ಬಜೆಟ್​ನಲ್ಲಿ ಈಡೇರುತ್ತಾ ಸರ್ಕಾರಿ ನೌಕರರ ನಿರೀಕ್ಷೆ?

ABOUT THE AUTHOR

...view details