ಕರ್ನಾಟಕ

karnataka

ಪುರುಷರ ವಿರುದ್ಧ ದೌರ್ಜನ್ಯ ಪ್ರಕರಣ ದಾಖಲಿಸಿದ್ದ ಮಹಿಳೆ: ಈ ಬಗ್ಗೆ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಲು ಸೂಚನೆ - High Court

By ETV Bharat Karnataka Team

Published : Sep 11, 2024, 8:54 PM IST

ಹಲವು ಪುರುಷರ ವಿರುದ್ಧ ಈಗಾಗಲೇ ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಪಿತೂರಿ ಮತ್ತು ಐಪಿಸಿ ಸೆಕ್ಷನ್‌ 498ಎ ಅಡಿ 9 ಪ್ರಕರಣಗಳನ್ನು ದಾಖಲಿಸಿರುವ ಮಹಿಳೆ ಬಗ್ಗೆ ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡುವಂತೆ ಹೈಕೋರ್ಟ್ ಡಿಜಿಪಿ, ಐಜಿಪಿಗೆ ನಿರ್ದೇಶನ ನೀಡಿದೆ.

ಹೈಕೋರ್ಟ್
ಹೈಕೋರ್ಟ್ (ETV Bharat)

ಬೆಂಗಳೂರು: ಹಲವು ಪುರುಷರ ವಿರುದ್ಧ ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯ ಆರೋಪದಲ್ಲಿ 9 ದೂರುಗಳನ್ನು ದಾಖಲಿಸಿರುವ ಮಹಿಳೆ ಕುರಿತಂತೆ ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡುವಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು(ಡಿಜಿಪಿ) ಮತ್ತು ಪೊಲೀಸ್ ಮಹಾನಿರೀಕ್ಷಕರು(ಐಜಿಪಿ)ಗೆ ಹೈಕೋರ್ಟ್ ನಿರ್ದೇಶನ ನೀಡಿದೆ.

ದೂರುದಾರ ಮಹಿಳೆಯಿಂದ ನೊಂದ ಹತ್ತನೇ ಪತಿ ಹಾಸನ ಜಿಲ್ಲೆಯ ಸಕಲೇಶಪುರದ ಬಾಳಗದ್ದೆಯ ಪಿ.ಕೆ.ವಿವೇಕ ಮತ್ತವರ ಕುಟುಂಬದ ಸದಸ್ಯರ ವಿರುದ್ಧ ತನ್ನ ಪತ್ನಿ ದಾಖಲಿಸಿದ್ದ ಕ್ರಿಮಿನಲ್‌ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.

ಎಲ್ಲ ಠಾಣೆಗಳಿಗೆ ಮಾಹಿತಿ ನೀಡುವಂತೆ ಪೀಠದ ಸೂಚನೆ:ಹಲವು ಪುರುಷರ ವಿರುದ್ಧ ಈಗಾಗಲೇ ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಪಿತೂರಿ ಮತ್ತು ಐಪಿಸಿ ಸೆಕ್ಷನ್‌ 498ಎ(ಕೌಟುಂಬಿಕ ದೌರ್ಜನ್ಯಕ್ಕೆ ಶಿಕ್ಷೆ)ಅಡಿ 9 ಪ್ರಕರಣಗಳನ್ನು ದಾಖಲಿಸಿರುವ ಮಹಿಳೆ, ಮತ್ತೆ 11ನೇ ಕೇಸ್​​ ದಾಖಲಿಸುವುದನ್ನು ತಡೆಯಬೇಕಾದರೆ ಆಕೆಯ ಬಗ್ಗೆ ಎಲ್ಲ ಪೊಲೀಸ್‌ ಠಾಣೆಗಳಿಗೆ ಮಾಹಿತಿ ನೀಡಬೇಕು ಎಂದು ನ್ಯಾಯಪೀಠ ತಿಳಿಸಿದೆ.

ಅರ್ಜಿದಾರರ ವಾದ ಆಲಿಸಿದ ಬಳಿಕ ನ್ಯಾಯಾಲಯ, ಪ್ರತಿವಾದಿ ಮಹಿಳೆಗೆ ನ್ಯಾಯಾಲಯದ ಮುಂದೆ ಹಾಜರಾಗಿ ತಮ್ಮ ಅಹವಾಲು ಸಲ್ಲಿಸಲು ಅವಕಾಶ ನೀಡಲಾಗಿತ್ತು. ಆದರೆ ಆಕೆ ಹಾಜರಾಗದ ಹಿನ್ನೆಲೆಯಲ್ಲಿ ನ್ಯಾಯಾಲಯ, ಅರ್ಜಿದಾರರ ವಿರುದ್ಧ ಕುಶಾಲನಗರ ಪೊಲೀಸ್‌ ಠಾಣೆಯಲ್ಲಿ 2022ರಲ್ಲಿ ದಾಖಲಿಸಿದ್ದ ಪ್ರಕರಣವನ್ನು ರದ್ದುಗೊಳಿಸಿದೆ.

ಅಲ್ಲದೇ, ದೂರುದಾರ ಮಹಿಳೆಯ ವಿವರಗಳು ಈಗಾಗಲೇ ಹಲವು ಪೊಲೀಸ್‌ ಠಾಣೆಗಳಲ್ಲಿ ಲಭ್ಯವಿದೆ. ಹಾಗಾಗಿ ಆ ಮಹಿಳೆ ಮತ್ತೆ ಯಾವುದಾದರೂ ಪುರುಷರ ವಿರುದ್ಧ ಪ್ರಕರಣ ದಾಖಲಿಸಲು ಬಂದರೆ, ಅಂತಹ ಸಮಯದಲ್ಲಿ ಪೊಲೀಸರು ಸುಮ್ಮನೆ ಕೇಸು ದಾಖಲಿಸದೇ ಆಕೆಯ ದೂರಿನ ವಿಚಾರದ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿದ ನಂತರವೇ ಮುಂದಿನ ಕ್ರಮ ಜರುಗಿಸಬೇಕು ಎಂದು ಪೀಠ ಸೂಚಿಸಿದೆ.

ಈ ರೀತಿ ಮಹಿಳೆ ಅನಗತ್ಯವಾಗಿ ಪುರುಷರ ವಿರುದ್ಧ ದೂರು ನೀಡುವುದನ್ನು ನಿಲ್ಲಿಸಬೇಕಿದೆ. ಏಕೆಂದರೆ ಈಗಾಗಲೇ ಕಳೆದೊಂದು ದಶಕದಲ್ಲಿ 10 ಕೇಸು ದಾಖಲಿಸಿದ್ದಾರೆ, 11ನೇ ಪ್ರಕರಣ ದಾಖಲಾಗುವುದನ್ನು ತಡೆಯಬೇಕಿದೆ ಎಂದು ಹೇಳಿರುವ ನ್ಯಾಯಾಲಯ ಎಲ್ಲಾ 9 ಪ್ರಕರಣಗಳ ವಿವರಗಳನ್ನು ಆದೇಶದಲ್ಲಿ ದಾಖಲಿಸಿದೆ.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಮೂರ್ತಿ ಡಿ.ನಾಯಕ್‌, ಮಹಿಳೆ ಈ ರೀತಿ ಅನಗತ್ಯ ಮತ್ತು ಕ್ಷುಲ್ಲಕ ದೂರುಗಳನ್ನು ನೀಡುವುದನ್ನೇ ಅಭ್ಯಾಸ ಮಾಡಿಕೊಂಡಿದ್ದಾರೆ ಎಂದು ಹಿಂದಿನ 9 ಕೇಸ್​ಗಳ ವಿವರಗಳನ್ನು ಒದಗಿಸಿ ಅರ್ಜಿದಾರರ ವಿರುದ್ಧ ಪ್ರಕರಣ ರದ್ದುಗೊಳಿಸಬೇಕೆಂದು ಕೋರಿದರು.

ಹಲವು ಪುರುಷರು ಮತ್ತು ಅವರ ಕುಟುಂಬದವರ ವಿರುದ್ಧ ಕ್ರಿಮಿನಲ್‌ ಪ್ರಕರಣಗಳನ್ನು ಮಹಿಳೆ ದಾಖಲಿಸಿದ್ದಾರೆ. ಆಕೆಯ ಉದ್ದೇಶ ಆ ವ್ಯಕ್ತಿಗಳಿಗೆ ಕಿರುಕುಳ ನೀಡುವುದು. ಆದರೆ, ಎಲ್ಲಾ ಪ್ರಕರಣಗಳಲ್ಲಿ ಆರೋಪಿಗಳು ಬಂಧನಕ್ಕೆ ಒಳಗಾಗಿ ನಂತರ ಜಾಮೀನಿನ ಮೇಲೆ ಹೊರಬಂದು ವಿಚಾರಣೆ ಎದುರಿಸಿ ಖುಲಾಸೆಯಾಗಿದ್ದಾರೆ ಎಂಬ ಅಂಶವನ್ನು ನ್ಯಾಯಾಲಯ ದಾಖಲಿಸಿದೆ.

ಆ ಮಹಿಳೆಯ ಬಲೆಗೆ 10ಕ್ಕೂ ಅಧಿಕ ಪುರುಷರು ಬಿದ್ದಿದ್ದಾರೆ. ಕೆಲವರ ಮದುವೆ ಆಗಿದೆ, ಕೆಲವರು ಮದುವೆ ಆಗಿಲ್ಲ, ಆದರೂ ಕೇಸು ಎದುರಿಸುವಂತಾಗಿದೆ. ಹನಿ ಟ್ರ್ಯಾಪ್‌ ಸ್ವಭಾವದ ಆಕೆ ಕಾರ್ಯವಿಧಾನ ಇದೇ ಆಗಿದೆ. ಪ್ರತಿ ಪ್ರಕರಣದಲ್ಲೂ ಆಕೆಯ ನಡೆ ನರಿಯಂತೆ ಸಂಶಯಾಸ್ಪದವಾಗಿದೆ. ಕಳೆದೊಂದು ದಶಕದಲ್ಲಿ ಹತ್ತು ಮಂದಿ ವಿರುದ್ಧ ಮದುವೆ ಮಾಡಿಕೊಂಡು ಮೋಸ, ಲೈಂಗಿಕ ದೌರ್ಜನ್ಯ ಹೀಗೆ ಹಲವು ಬಗೆಯ ದೂರುಗಳನ್ನು ದಾಖಲಿಸಿದ್ದಾರೆ. ಆ ದೂರುಗಳಲ್ಲಿ ಕಿಂಚಿತ್ತೂ ಸತ್ಯಾಂಶವಿಲ್ಲ, ಹಾಗಾಗಿ ಪೊಲೀಸರು ನಕಲಿ ಕೇಸುಗಳ ಬಗ್ಗೆ ತನಿಖೆ ನಡೆಸಬೇಕಾಗುತ್ತದೆ. ಇದರಿಂದ ಪೊಲೀಸರ ಹಾಗೂ ನ್ಯಾಯಾಲಯಗಳ ಅಮೂಲ್ಯ ಸಮಯವೂ ವ್ಯರ್ಥವಾಗುತ್ತಿದೆ ಎಂದು ಪೀಠ ತಿಳಿಸಿದೆ.

ಇಂತಹ ಪ್ರಕರಣಗಳನ್ನು ಮುಂದುವರೆಯಲು ಬಿಟ್ಟಲ್ಲಿ ಸುಳ್ಳು ಪ್ರಕರಣಗಳನ್ನು ಪ್ರೋತ್ಸಾಹಿಸಿದಂತಾಗುತ್ತದೆ. ಹಾಗಾಗಿ ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಗೊಳಿಸಲಾಗುತ್ತಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ವಿವರಿಸಿದೆ.

ಇದನ್ನೂ ಓದಿ:ಮುಡಾ ಹಗರಣ: ನಾಳೆ ಸಿಎಂ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ರದ್ದು ಕೋರಿದ್ದ ಅರ್ಜಿಯ ಅಂತಿಮ ವಿಚಾರಣೆ - CM SIDDARAMAIAH PLEA HEARING

ABOUT THE AUTHOR

...view details