ಬೆಂಗಳೂರು:ಸುಮಾರು ಇಪ್ಪತೆರಡು ಎಕರೆ ಕಾಫಿ ಎಸ್ಟೇಟ್ ಅನ್ನು ಉಡುಗೊರೆಯಾಗಿ ನೀಡಿದ್ದ 85 ವರ್ಷದ ತಾಯಿಯ ಜೀವನ ನಿರ್ವಹಣೆ ಮಾಡುವುದಕ್ಕಾಗಿ ಆಕೆಯ ಮಗ ಮತ್ತು ಮೊಮ್ಮಗಳಿಗೆ ವಾರ್ಷಿಕ ತಲಾ 7 ಲಕ್ಷ ರೂ ಜೀವನಾಂಶ ಪಾವತಿ ಮಾಡುವಂತೆ ಹೈಕೋರ್ಟ್ ಆದೇಶಿಸಿದೆ.
ದಾನಪತ್ರ ಮರು ಸ್ಥಾಪನೆ ಮಾಡಿ ಆದೇಶಿಸಿದ್ದ ಜಿಲ್ಲಾಧಿಕಾರಿಗಳ ಆದೇಶವನ್ನು ಪ್ರಶ್ನಿಸಿ 85 ವರ್ಷದ ವೃದ್ಧೆ ಸಲ್ಲಿಸಿದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕ ಸದಸ್ಯ ಪೀಠ ಈ ಆದೇಶ ನೀಡಿದೆ. ಅಲ್ಲದೇ ವಯಸ್ಸಾದ ಮಹಿಳೆಗೆ ಸೌಕರ್ಯಗಳನ್ನು ಮತ್ತು ದೈಹಿಕ ಅಗತ್ಯಗಳನ್ನು ನೋಡಿಕೊಳ್ಳುವಂತೆ ಮಗ ಮತ್ತು ಮೊಮ್ಮಕ್ಕಳಿಗೆ ನಿರ್ದೇಶನ ನೀಡಿದೆ.
ಅಲ್ಲದೇ, ಅರ್ಜಿದಾರರು 85 ವರ್ಷ ವಯಸ್ಸಿನವರಾಗಿದ್ದು, ಜಿಲ್ಲಾಧಿಕಾರಿಗಳ ಆದೇಶವನ್ನು ರದ್ದುಪಡಿಸಿದ್ದಲ್ಲಿ 22 ಎಕರೆ ಜಮೀನನ್ನು ನೋಡಿಕೊಳ್ಳಬೇಕಾಗುತ್ತದೆ. ಆದರೆ, ಅವರ ಜೀವನ ನಿರ್ವಹಣೆ ಮಾಡುವ ಅಗತ್ಯವಿದೆ. ಆದ್ದರಿಂದ ಮಗ ಮತ್ತು ಮೊಮ್ಮಗಳು ತಲಾ 7 ಲಕ್ಷ ರೂ.ಗಳಂತೆ 14 ಲಕ್ಷ ರೂ.ಗಳನ್ನ ವಾರ್ಷಿಕವಾಗಿ ಪಾವತಿ ಮಾಡಬೇಕು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಪ್ರಕರಣದ ಹಿನ್ನೆಲೆ ಏನು ?:ಅಪ್ಪರಂಡ ಶಾಂತಿ ಬೋಪಣ್ಣ ಅವರು ವೀರಾಜಪೇಟೆ ತಾಲೂಕು ಸಿದ್ದಾಪುರ ಗ್ರಾಮದಲ್ಲಿ 48 ಎಕರೆ ಕಾಫೀ ಎಸ್ಟೇಟ್ ಹೊಂದಿದ್ದರು. ಅವರ ಹಿರಿಯ ಮಗ ಎಬಿ ಬಿದ್ದಪ್ಪ ದಾವೆ ಹೂಡಿ 24 ಎಕರೆ ತಮ್ಮ ಹೆಸರಿಗೆ ಬರಬೇಕು ಎಂದು ಕೋರಿದ್ದರು. ಬಳಿಕ ಮೂರನೇ ಮಗ ಎಬಿ ಗಣಪತಿ ಮತ್ತು ಮೊಮ್ಮೊಗಳಾದ ಪೂಜಾ ಎಂಬುವರು 22 ಎಕರೆ ಜಮೀನನ್ನು ತಮ್ಮ ಹೆಸರಿಗೆ ದಾನವನ್ನಾಗಿ ಪಡೆದುಕೊಂಡಿದ್ದರು.