ಬೆಂಗಳೂರು:ನಿಷೇಧದ ಹೊರತಾಗಿಯೂ ಉದ್ಯೋಗ ನಿಮಿತ್ತ ಯೆಮನ್ ದೇಶಕ್ಕೆ ಪ್ರಯಾಣ ಬೆಳೆಸಿದ್ದ ಶುಶ್ರೂಷಕಿಯ ಪಾಸ್‌ಪೋರ್ಟ್ ಮುಟ್ಟುಗೋಲು ಹಾಕಿಕೊಂಡಿರುವ ವಿದೇಶಾಂಗ ಸಚಿವಾಲಯಕ್ಕೆ ಸಲ್ಲಿಸಿರುವ ಮನವಿ ಪರಿಗಣಿಸಬೇಕು ಎಂದು ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದೆ. ಪ್ರಕರಣ ಸಂಬಂಧ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಮೂಲದ ಶಾನಿ ಜೋಸ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ಅಲ್ಲದೆ, ವಿದೇಶದಲ್ಲಿ ಉದ್ಯೋಗ ಹೊಂದಲು ಅರ್ಜಿದಾರರಿಗೆ ಪಾಸ್‌ಪೋರ್ಟ್ ಅವಶ್ಯಕತೆ ಇದೆ. ಏಳು ವರ್ಷಗಳ ಕಾಲ ಪಾಸ್‌ಪೋರ್ಟ್ ಹಸ್ತಾಂತರಿಸದಿದ್ದಲ್ಲಿ ಆಕೆಯ ಉದ್ಯೋಗವನ್ನು ಕಸಿದುಕೊಂಡಂತಾಗುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಮುಂದುವರಿದು, ಆದೇಶದ ಪ್ರತಿ ಲಭ್ಯವಾದ ನಾಲ್ಕು ವಾರದಲ್ಲಿ ಸಂಬಂಧಪಟ್ಟ ಪ್ರಾಧಿಕಾರ ಕಾನೂನಿನ ಅನುಸಾರ ಪಾಸ್‌ಪೋರ್ಟ್ ಹಿಂದಿರುಗಿಸಬೇಕೆಂಬ ಅರ್ಜಿದಾರರ ಮನವಿ ಪರಿಗಣಿಸಲು ಸೂಚಿಸಿತು.
ಪ್ರಕರಣದ ಹಿನ್ನೆಲೆ:ಅರ್ಜಿದಾರರಾದ ಶಾನಿ ಜೋಸ್ ಜನರಲ್ ನರ್ಸಿಂಗ್ ಮತ್ತು ಮಿಡ್‌ವೈಫರಿಯಲ್ಲಿ ಡಿಪ್ಲೊಮಾ ಹೊಂದಿದ್ದು, 2011 ರಿಂದ ಯೆಮೆನ್‌ನಲ್ಲಿ ಶುಶ್ರೂಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಈ ನಡುವೆ ಆಕೆ ಎರಡು ಬಾರಿ ಯೆಮನ್ ನಿಂದ ಭಾರತಕ್ಕೆ ಮರಳಿ ಭೇಟಿ ನೀಡಿದ್ದರು. ಆಕೆಯ ತಂದೆ ಹೊಟ್ಟೆ ಕ್ಯಾನ್ಸ್‌ರ್‌ನಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ತಂದೆ ಯೋಗಕ್ಷೇಮ ವಿಚಾರಿಸುವ ನಿಟ್ಟಿನಲ್ಲಿ 2023 ರ ಆಗಸ್ಟ್‌ನಲ್ಲಿ ಯೆಮೆನ್‌ನಿಂದ ಭಾರತಕ್ಕೆ ಹಿಂತಿರುಗಿದ್ದರು. ಈ ವೇಳೆ ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳು (ಇಮಿಗ್ರೇಷನ್) ಆಕೆಯ ಪ್ರಯಾಣದಿಂದ ಕಾನೂನು ಉಲ್ಲಂಘನೆಯಾಗಿದೆ ಎಂದು ಪಾಸ್ ಪೋರ್ಟ್ ಮುಟ್ಟುಗೋಲು ಹಾಕಿಕೊಂಡಿದ್ದರು. ಬಳಿಕ ವಲಸೆ ಅಧಿಕಾರಿಗಳು ಶೋಕಾಸ್ ನೋಟಿಸ್ ಜಾರಿ ಮಾಡಿದ್ದರು. ತದನಂತರ ಅರ್ಜಿದಾರರು ಏಕೆ ಪ್ರಯಾಣ ಬೆಳೆಸಿದ್ದಾರೆ ಎನ್ನುವ ಕುರಿತು ವಿಸ್ತಾರವಾದ ವಿವರಣೆ ನೀಡಿದ್ದರು. ಆದರೆ ಅಧಿಕಾರಿಗಳು ಪಾಸ್‌ಪೋರ್ಟ್ ಹಿಂದಿರುಗಿಸಿಲ್ಲ ಎಂದು ಹೈಕೋರ್ಟ್ ಮೆಟ್ಟಿಲೇರಿದರು.