ಕರ್ನಾಟಕ

karnataka

ETV Bharat / state

ಬೆಂಗಳೂರಿನಲ್ಲಿ ವಾಹನ ನಿಲುಗಡೆ ನೀತಿ 2.0 ಪರಿಣಾಮಕಾರಿ ಜಾರಿಗೆ ಹೈಕೋರ್ಟ್ ಸೂಚನೆ - Parking Policy

ವಾಹನ ನಿಲುಗಡೆ ನೀತಿ 2.0ರ ಪರಿಣಾಮಕಾರಿ ಜಾರಿಗೆ ಅಗತ್ಯ ಕ್ರಮ ವಹಿಸುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ(ಬಿಬಿಎಂಪಿ) ಹೈಕೋರ್ಟ್ ಸೂಚನೆ ನೀಡಿದೆ.

high court
ಬಿಬಿಎಂಪಿ, ಹೈಕೋರ್ಟ್ (ETV Bharat)

By ETV Bharat Karnataka Team

Published : May 22, 2024, 7:09 AM IST

ಬೆಂಗಳೂರು:ರಾಜಧಾನಿಯಲ್ಲಿ ವಾಹನ ನಿಲುಗಡೆ ನೀತಿ 2.0 ಅನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ. ವಸತಿ ಪ್ರದೇಶದಲ್ಲಿ ಅಕ್ರಮವಾಗಿ ವಾಹನ ನಿಲುಗಡೆ ಪ್ಲಾಟ್ ನಡೆಸುತ್ತಿರುವುದನ್ನು ಪ್ರಶ್ನಿಸಿ ನಗರದ ಹೆಚ್‌ಎಸ್​​ಆರ್ ಬಡಾವಣೆಯ ನಾಗಭೂಷಣ ರೆಡ್ಡಿ ಮತ್ತಿತರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಭಾಗಶಃ ಮಾನ್ಯ ಮಾಡಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯಪೀಠ ಈ ಆದೇಶ ಹೊರಡಿಸಿದೆ.

ಅಲ್ಲದೆ, ಯಾವ ರೀತಿ ಪಾರ್ಕಿಂಗ್​ ನೀತಿಯನ್ನು ಅನುಷ್ಠಾನಗೊಳಿಸಲಾಗುತ್ತದೆ ಎಂಬ ವಿಧಾನದ ಬಗ್ಗೆ ವಿಸ್ತೃತ ಯೋಜನಾ ವರದಿಯನ್ನು(ಡಿಪಿಆರ್) ಜೂನ್​ 20ರೊಳಗೆ ಬಿಬಿಎಂಪಿ ಆಯುಕ್ತರು ನ್ಯಾಯಾಲಯಕ್ಕೆ ಸಲ್ಲಿಸಬೇಕು​ ಎಂದು ಕೋರ್ಟ್ ಸೂಚನೆ ನೀಡಿತು.

ಪಾರ್ಕಿಂಗ್ ನೀತಿ 2.0, 2020ರ ಡಿಸೆಂಬರ್​​ನಿಂದಲೂ ಚಾಲ್ತಿಯಲ್ಲಿದೆ. ಅದರಂತೆ ಬಿಬಿಎಂಪಿ ವಾಹನ ನಿಲುಗಡೆ ಪ್ರದೇಶ, ವಾಹನ ನಿಲುಗಡೆ ಶುಲ್ಕ, ಬೀದಿ ಬದಿ ಪಾರ್ಕಿಂಗ್ ವ್ಯವಸ್ಥೆ ಉತ್ತಮಗೊಳಿಸುವುದು ಹಾಗೂ ಪೈಲಟ್ ಪರ್ಮಿಟ್ ವ್ಯವಸ್ಥೆ ಆರಂಭಿಸುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಬೇಕಿತ್ತು. ಆದರೆ, ಆ ಕೆಲಸವನ್ನು ಬಿಬಿಎಂಪಿ ಮಾಡಿಲ್ಲ. ಬಿಬಿಎಂಪಿ ಮತ್ತು ನಗರ ಭೂ ಸಾರಿಗೆ ನಿರ್ದೇಶನಾಲಯದ ನಿಷ್ಕ್ರೀಯತೆಯಿಂದ ಸಾರ್ವಜನಿಕರು ಅನಗತ್ಯ ತೊಂದರೆ ಎದುರಿಸುವಂತಾಗಿದೆ. ಪ್ರಸಕ್ತ ಪ್ರಕರಣದಲ್ಲಿ ಅರ್ಜಿದಾರರೂ ಸಹ ಅಂತಹ ಸಮಸ್ಯೆ ಎದುರಿಸುತ್ತಿದ್ದು, ಅದಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಪೀಠ ಹೇಳಿದೆ.

ಬಿಲ್ಡಿಂಗ್ ಬೈಲಾ ಪ್ರಕಾರ ನಿರ್ಮಾಣವಾಗುವ ಪ್ರತಿಯೊಂದು ವಸತಿ ಸಮುಚ್ಛಯದಲ್ಲೂ ಪಾರ್ಕಿಂಗ್ ಜಾಗ ಒದಗಿಸಬೇಕಾಗುತ್ತದೆ. ಜೊತೆಗೆ ಬೆಂಗಳೂರು ನಗರದಲ್ಲಿ ವಸತಿ ಪ್ರದೇಶ ಹಾಗೂ ವಾಣಿಜ್ಯ ಪ್ರದೇಶದಲ್ಲಿ ಪಾರ್ಕಿಂಗ್ ಸಮಸ್ಯೆ ಸಾಮಾನ್ಯವಾಗಿದೆ. ಅದೇ ಕಾರಣಕ್ಕೆ ಕೆಲವು ಖಾಲಿ ಇರುವ ನಿವೇಶನದಾರರು ಪಾರ್ಕಿಂಗ್‌ಗೆ ಅವಕಾಶ ನೀಡುವ ವಿನೂತನ ಐಡಿಯಾ ಮಾಡಿಕೊಂಡು ಅದರಿಂದ ಹಣ ಮಾಡುತ್ತಿದ್ದಾರೆ. ಇಂತಹ ಕ್ರಮಗಳಿಗೆ ಬಿಬಿಎಂಪಿ ಕಡಿವಾಣ ಹಾಕಬೇಕು ಎಂದು ಪೀಠ ತಿಳಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ''ಹೆಚ್​ಎಸ್​ಆರ್ ಬಡಾವಣೆಯ 19ನೇ ಎ ಮುಖ್ಯರಸ್ತೆಯಲ್ಲಿ 20ಪ್ಲಾಟ್​ಗಳಿದ್ದು, ಅವುಗಳನ್ನು ಅವುಗಳ ಮಾಲೀಕರು ವಾಸಿಸುತ್ತಿದ್ದಾರೆ. ಅದೇ ರಸ್ತೆಯಲ್ಲಿ ನಾಲ್ಕು ನಿವೇಶನಗಳು ಖಾಲಿ ಇವೆ. ನಾಗೇಂದ್ರ ಎಂಬುವರಿಗೆ ಸೇರಿದ ಪ್ಲಾಟ್ ನಂಬರ್ 4 ಅನ್ನು ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳ ನಿಲುಗಡೆ ಉದ್ದೇಶಕ್ಕೆ ಗುತ್ತಿಗೆ ನೀಡಲಾಗಿದೆ'' ಎಂದರು.

''ಆ ರೀತಿ ವಸತಿ ಪ್ರದೇಶದಲ್ಲಿ ವಾಹನಗಳ ನಿಲುಗಡೆಗೆ ಅವಕಾಶ ನೀಡಿರುವುದರಿಂದ ಶಬ್ದ ಹಾಗೂ ವಾಯುಮಾಲಿನ್ಯ ಹೆಚ್ಚಾಗುವ ಜೊತೆಗೆ ಆ ರಸ್ತೆಯಲ್ಲಿ ವಾಹನಗಳ ನಿಲುಗಡೆ ಸಮಸ್ಯೆಯೂ ಎದುರಾಗಿದೆ. ಅಲ್ಲಿ ನಿಲ್ಲಿಸುವ ವಾಹನಗಳು ಕೆಲವೊಮ್ಮೆ ಹಗಲು-ರಾತ್ರಿ ಅಲ್ಲೇ ಇರುತ್ತವೆ. ಇದರಿಂದ ಸುತ್ತಮುತ್ತಲ ನಿವಾಸಿಗಳಿಗೆ ತೀವ್ರ ತೊಂದರೆ ಎದುರಾಗುತ್ತಿದೆ'' ಎಂದು ನ್ಯಾಯಪೀಠಕ್ಕೆ ವಿವರಿಸಿದರು.

''ಅಲ್ಲದೆ, ಆ ರೀತಿ ವಸತಿ ಪ್ರದೇಶದ ನಿವೇಶನವನ್ನು ವಾಹನ ನಿಲುಗಡೆ ಉದ್ದೇಶಕ್ಕೆ ಬಳಸಲು ನಿಯಮದಲ್ಲಿ ಅವಕಾಶವಿಲ್ಲ. ಜೊತೆಗೆ ಆ ರೀತಿ ಮೂರನೇ ವ್ಯಕ್ತಿಗೆ ಗುತ್ತಿಗೆ ನೀಡಲೂ ಸಹ ಅವಕಾಶವಿಲ್ಲ. ಹಾಗಾಗಿ ಅಕ್ರಮ ಪಾರ್ಕಿಂಗ್ ನಿಲುಗಡೆ ಪ್ಲಾಟ್ ಬಗ್ಗೆ ಕ್ರಮ ಕೈಗೊಳ್ಳುವಂತೆ 2023ರ ಜುಲೈ 27ರಂದೇ ಬಿಬಿಎಂಪಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಸಹ ಏನೂ ಪ್ರಯೋಜನವಾಗಿಲ್ಲ'' ಎಂದರು.

ಇದಕ್ಕೆ ಪ್ರತಿಯಾಗಿ ಪಾಲಿಕೆ ಪರ ವಕೀಲರು, ''ಪ್ರತಿವಾದಿಗಳಿಗೆ ವಸತಿ ಪ್ರದೇಶದ ನಿವೇಶನವನ್ನು ವಾಹನ ನಿಲುಗಡೆ ಉದ್ದೇಶಕ್ಕೆ ಬಳಕೆ ಮಾಡಲು ಬಿಬಿಎಂಪಿ ಯಾವುದೇ ಅನುಮತಿ ನೀಡಿಲ್ಲ. ನಗರ ಭೂ ಸಾರಿಗೆ ನಿರ್ದೇಶನಾಲಯ ಪಾರ್ಕಿಂಗ್ ನೀತಿ 2.0 ಅನ್ನು 2020ರ ಡಿಸೆಂಬರ್​ನಲ್ಲಿ ಜಾರಿಗೊಳಿಸಲಾಗಿದೆ. ಅದರಂತೆ ವಾಹನ ನಿಲುಗಡೆ ಪ್ರದೇಶ ಗುರುತಿಸುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ'' ಎಂದು ನ್ಯಾಯಾಲಯಕ್ಕೆ ವಿವರಿಸಿದರು.

ಇದನ್ನೂ ಓದಿ:ಮೇ 25, 26ರಂದು ಕುದುರೆ ರೇಸ್​ ನಡೆಸುವ ಕುರಿತ ನಿರ್ಧಾರ ತಿಳಿಸಲು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ - High Court

ABOUT THE AUTHOR

...view details