ಕರ್ನಾಟಕ

karnataka

ETV Bharat / state

ದಾಖಲೆಗಳಿದ್ದಲ್ಲಿ ಶಿಕ್ಷಣ ಸಂಸ್ಥೆಗಳ ತೆರಿಗೆ ವಿನಾಯ್ತಿ ಅರ್ಜಿ ಪರಿಗಣಿಸಲು ಶಿಕ್ಷಣ ಇಲಾಖೆಗೆ‌ ಹೈಕೋರ್ಟ್​ ಸೂಚನೆ

ಅಗತ್ಯ ದಾಖಲೆಗಳನ್ನು ಸಲ್ಲಿಸುವ ಶಿಕ್ಷಣ ಸಂಸ್ಥೆಗಳ ಅರ್ಜಿಗಳನ್ನು ಪರಿಗಣಿಸುವಂತೆ ಶಾಲಾ ಶಿಕ್ಷಣ ಇಲಾಖೆಗೆ ಹೈಕೋರ್ಟ್​ ಸೂಚನೆ ನೀಡಿದೆ.

HIGH COURT
ಹೈಕೋರ್ಟ್ (ETV Bharat)

By ETV Bharat Karnataka Team

Published : Nov 4, 2024, 7:45 PM IST

ಬೆಂಗಳೂರು: ತೆರಿಗೆ ಪಾವತಿಯಿಂದ ವಿನಾಯಿತಿ ಕೋರಿ ಅಗತ್ಯ ದಾಖಲೆಗೊಂದಿಗೆ ಅರ್ಜಿ ಸಲ್ಲಿಸುವ ಶಾಲೆಗಳ ಮಾನ್ಯತಾ ನವೀಕರಣ ಅರ್ಜಿಗಳನ್ನು ಪರಿಗಣಿಸುವಂತೆ ಶಿಕ್ಷಣ ಇಲಾಖೆಗೆ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ.

ಶಾಲೆಗಳ ಮಾನ್ಯತಾ ನವೀಕರಣಕ್ಕೆ ಷರತ್ತುಗಳನ್ನು ವಿಧಿಸಿ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು 2024ರ ಜುಲೈ 24ರಂದು ಹೊರಡಿಸಿರುವ ಸುತ್ತೋಲೆ ರದ್ದುಪಡಿಸುವಂತೆ ಕೋರಿ ‘ಕೃಪಾ’ ಕರ್ನಾಟಕ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘ (ರಿ) ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತ್ತು.

ವಿಚಾರಣೆ ನ. 25ಕ್ಕೆ ಮುಂದೂಡಿಕೆ; ತೆರಿಗೆ ಪಾವತಿಯಿಂದ ತಮಗೆ ವಿನಾಯಿತಿ ಇದೆ ಎಂದು ಋಜುವಾತುಪಡಿಸುವ ಶಾಲೆಗಳ ಮಾನ್ಯತಾ ನವೀಕರಣ ಅರ್ಜಿಗಳನ್ನು ಪರಿಗಣಿಸುವಂತೆ ಶಿಕ್ಷಣ ಇಲಾಖೆಗೆ ಹೈಕೋರ್ಟ್ ಮಧ್ಯಂತರ ಆದೇಶ ನೀಡಿತು. ಅಲ್ಲದೆ, ಅರ್ಜಿ ಸಂಬಂಧ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಪ್ರತಿವಾದಿಗಳಾದ ಶಾಲಾ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಆಯುಕ್ತರಿಗೆ ಸೂಚಿಸಿ ವಿಚಾರಣೆಯನ್ನು ನವೆಂಬರ್ 25ಕ್ಕೆ ಮುಂದೂಡಿತು.

ಶಾಲೆಗಳ ಮಾನ್ಯತಾ ನವೀಕರಣಕ್ಕೆ ಆಡಳಿತ ಮಂಡಳಿಗಳು ಪ್ರತಿ ವರ್ಷ ಅರ್ಜಿ ಸಲ್ಲಿಸಬೇಕು ಎಂಬುದು ಸೇರಿದಂತೆ ತೆರಿಗೆ ಪಾವತಿ, ನಿವೇಶನ ಪತ್ರ, ಖಾತಾ ಪತ್ರ ಹಾಗೂ ಕಂದಾಯ ರಸೀದಿ ಸಲ್ಲಿಸಬೇಕು ಎಂಬ ಷರತ್ತುಗಳನ್ನು ವಿಧಿಸಿ ‘ಕರ್ನಾಟಕ ಶಿಕ್ಷಣ ಕಾಯ್ದೆ ಸೆಕ್ಷನ್ 36ರಡಿ ಮತ್ತು ಕರ್ನಾಟಕ ಶಿಕ್ಷಣ ಸಂಸ್ಥೆಗಳು (ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮಾನ್ಯತೆ) ನಿಯಮಗಳು-1999ರ ನಿಯಮ 3ರನ್ವಯ ಶಾಲಾ ಶಿಕ್ಷಣ ಇಲಾಖೆ 2024ರ ಜು.24ರಂದು ಸುತ್ತೋಲೆ ಹೊರಡಿಸಿದೆ.

ಆದರೆ, ಕರ್ನಾಟಕ ಶಿಕ್ಷಣ ಕಾಯ್ದೆಯ ಸೆಕ್ಷನ್ 36ರಂತೆ ಕಾಲ ಕಾಲಕ್ಕೆ ನವೀಕರಣ ಅಗತ್ಯವಿಲ್ಲ. ಅದೇ ರೀತಿ ಶಿಕ್ಷಣ ನಿಯಮಗಳು 1999ರಂತೆ ಮಾನ್ಯತಾ ನವೀಕರಣ ಅವಧಿ 10 ವರ್ಷ ಇದೆ. ಹೀಗಿದ್ದಾಗ, ಇವರೆಡಕ್ಕೂ ವಿರುದ್ಧವಾಗಿ ಸುತ್ತೋಲೆ ಹೊರಡಿಸಲಾಗಿದೆ. ತೆರಿಗೆ ಪಾವತಿ, ಖಾತಾ ಪತ್ರ, ಕಂದಾಯ ರಸೀದಿ ಇತ್ಯಾದಿ ಭೂ ಕಂದಾಯ ಕಾಯ್ದೆ ವ್ಯಾಪ್ತಿಗೆ ಒಳಪಡುತ್ತದೆ. ಅವುಗಳ ಉಲ್ಲಂಘನೆ ಆದಲ್ಲಿ, ಸಂಬಂಧಪಟ್ಟ ಕಾಯ್ದೆಯನ್ವಯ ಸಂಬಂಧಿಸಿದ ಪ್ರಾಧಿಕಾರಗಳು ಕ್ರಮ ಕೈಗೊಳ್ಳುತ್ತವೆ. ಆ ಷರತ್ತುಗಳನ್ನು ಶಿಕ್ಷಣ ಕಾಯ್ದೆಯಡಿ ವಿಧಿಸುವುದು ಸರಿಯಲ್ಲ. ಆದ್ದರಿಂದ 2024ರ ಜುಲೈ 24ರಂದು ಹೊರಡಿಸಿರುವ ಸುತ್ತೋಲೆ ರದ್ದು ಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ಇದನ್ನೂ ಓದಿ: ದರ್ಶನ್​ ಮೆಚ್ಚಿನ 'ಸರಸ್ವತಿ ಚಿತ್ರಮಂದಿರ' ನೆಲಸಮ; ಮೈಸೂರಿನಲ್ಲಿ ಈವರೆಗೆ ಶೋ ನಿಲ್ಲಿಸಿದ ಥಿಯೇಟರ್​​​ಗಳೆಷ್ಟು?

ABOUT THE AUTHOR

...view details