ಬೆಂಗಳೂರು :ವ್ಯಕ್ತಿಯೊಬ್ಬರಿಂದ 9 ಲಕ್ಷಕ್ಕೆ ಟೊಯೋಟಾ ಅರ್ಬನ್ ಕ್ರೂಸರ್ ಕಾರು ಖರೀದಿಸುವುದಾಗಿ ಒಪ್ಪಂದ ಮಾಡಿಕೊಂಡು 25 ಸಾವಿರ ಮುಂಗಡ ಹಣ ಪಾವತಿಸಿ, ಕಾರು ಪಡೆದು ಮೂರನೇ ವ್ಯಕ್ತಿಗೆ ಮಾರಾಟ ಮಾಡಿ ಬಂಧನದ ಭೀತಿ ಎದುರಿಸುತ್ತಿದ್ದ ಆರೋಪಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಪ್ರಕರಣ ಸಂಬಂಧ ಜಾಮೀನು ಕೋರಿ ಉಡುಪಿ ಜಿಲ್ಲೆಯ ಕುಂದಾಪುರ ನಿವಾಸಿ ಆದಿತ್ಯ ದೇವಾಡಿಗ ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ಜಿ ಉಮಾ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ಅಲ್ಲದೆ, ಆದೇಶದ 15 ದಿನಗಳೊಳಗೆ ಅರ್ಜಿದಾರರು ತನಿಖಾಧಿಕಾರಿಯ ಮುಂದೆ ಹಾಜರಾಗಬೇಕು. ಅರ್ಜಿದಾರ 2 ಲಕ್ಷ ರೂ. ಮೊತ್ತದ ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತಕ್ಕೆ ಇಬ್ಬರ ಭದ್ರತಾ ಖಾತರಿ ನೀಡಬೇಕು. ಸಾಕ್ಷ್ಯಾಧಾರ ತಿರುಚಲು ಯತ್ನಿಸಬಾರದು. ಅಗತ್ಯವಿದ್ದಾಗೆಲ್ಲಾ ಅಧೀನ ನ್ಯಾಯಾಲಯದ ವಿಚಾರಣೆಗೆ ಹಾಜರಾಗಬೇಕು. ಇದೇ ಮಾದರಿಯ ಅಪರಾಧದಲ್ಲಿ ಮತ್ತೆ ಭಾಗಿಯಾಗಬಾರದು ಎಂದು ತಿಳಿಸಿ ಜಾಮೀನು ಮಂಜೂರಾತಿಗೆ ಹೈಕೋರ್ಟ್ ಷರತ್ತು ವಿಧಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ನಮ್ಮ ಕಕ್ಷಿದಾರರು ಅಮಾಯಕರಾಗಿದ್ದು, ಕಾನೂನು ಪಾಲಿಸುವ ನಾಗರೀಕರಾಗಿದ್ದಾರೆ. ಅರ್ಜಿದಾರರು ದೂರುದಾರರ ಜತೆ ಟೊಯೊಟಾ ಅರ್ಬನ್ ಕ್ರೂಸರ್ ವಾಹನ ಖರೀದಿಸಲು ಒಪ್ಪಂದ ಮಾಡಿಕೊಂಡಿದ್ದರು. ಅದರ ಅನುಸಾರ 25000 ಮುಂಗಡ ಮೊತ್ತ ಪಾವತಿಸಲಾಗಿದ್ದು, ಬಾಕಿ ರೂ. 9,05,000 ಪಾವತಿಗೆ ಬಾಕಿ ಇದೆ ಎಂದು ಆರೋಪಿಸಲಾಗಿದೆ. ಆದರೆ ವಾಹನದ ಆರ್‌ಸಿ ಅರ್ಜಿದಾರರ ಹೆಸರಿಗೆ ವರ್ಗಾವಣೆಯಾಗಿಲ್ಲ. ಅರ್ಜಿದಾರರು ಯಾವುದೇ ಅಪರಾಧಗಳ ಎಸಗಿಲ್ಲ. ಸುಖಾಸುಮ್ಮನೆ ಅವರ ಮೇಲೆ ಆರೋಪ ಹೊರಿಸಲಾಗಿದೆ ಎಂದು ವಿವರಿಸಿದೆ.