ಕರ್ನಾಟಕ

karnataka

ETV Bharat / state

ಪೊಲೀಸರು ವಶಕ್ಕೆ ಪಡೆದ ಹಣ ಬಿಡುಗಡೆಗೆ ಕೋರಿ ಅರ್ಜಿ: ಆರೋಪಿ ತಂದೆಗೆ 10 ಸಾವಿರ ದಂಡ ವಿಧಿಸಿದ ಹೈಕೋರ್ಟ್

ಮನೆಯಿಂದ ವಶಪಡಿಸಿಕೊಂಡಿದ್ದ 14,37,060 ರೂ ಹಣವನ್ನು ಬಿಡುಗಡೆ ಮಾಡುವಂತೆ ಕೋರಿದ್ದ ಆರೋಪಿಯ ತಂದೆಯ ಅರ್ಜಿಯನ್ನ ಹೈಕೋರ್ಟ್ ವಜಾಗೊಳಿಸಿ, ದಂಡ ವಿಧಿಸಿದೆ.

ಹೈಕೋರ್ಟ್
ಹೈಕೋರ್ಟ್ (ETV Bharat)

By ETV Bharat Karnataka Team

Published : Nov 4, 2024, 10:14 PM IST

ಬೆಂಗಳೂರು: ಭಯೋತ್ಪಾದನೆ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿದ್ದ ನಿಷೇಧಿತ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್ಐ) ಸಂಘಟನೆಯ ಕಾರ್ಯಕರ್ತ ಎನ್ನಲಾದ ವ್ಯಕ್ತಿಯ ಮನೆಯಿಂದ ನಗರದ ಕೆ.ಜಿ.ಹಳ್ಳಿ ಠಾಣಾ ಪೊಲೀಸರು ವಶಪಡಿಸಿಕೊಂಡಿರುವ ಒಟ್ಟು 14,37,060 ರೂ ಹಣ ಬಿಡುಗಡೆ ಮಾಡಲು ಆದೇಶಿಸುವಂತೆ ಕೋರಿ ಆರೋಪಿಯ ತಂದೆ ಸಲ್ಲಿಸಿದ್ದ ಕ್ರಿಮಿನಲ್ ‌ಮೇಲ್ಮನವಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ. ಅಲ್ಲದೆ, ಅರ್ಜಿದಾರರಿಗೆ 10 ಸಾವಿರ ರೂ ದಂಡ ವಿಧಿಸಿ ಆದೇಶಿಸಿದೆ.

ಪ್ರಕರಣದಲ್ಲಿ ಮೂರನೇ ಆರೋಪಿಯಾಗಿರುವ ಶೇಕ್‌ ಇಜಾಜ್‌ ಅಲಿ ಅವರ ತಂದೆ ಕಲಬುರಗಿಯ ಶೇಕ್‌ ಸಾದಿಕ್‌ ಅಲಿ ಎಂಬುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಸ್‌. ಮುದಗಲ್‌ ಮತ್ತು ನ್ಯಾಯಮೂರ್ತಿ ವಿಜಯ ಕುಮಾರ ಎ.ಪಾಟೀಲ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಮಾಡಿದೆ. ವಿಸ್ತೃತ ಆದೇಶವು ಇನ್ನಷ್ಟೇ ಬಿಡುಗಡೆಯಾಗಬೇಕಿದೆ.

ವಿಚಾರಣೆ ವೇಳೆ ಅರ್ಜಿಗೆ ಆಕ್ಷೇಪಣೆ ಸಲ್ಲಿಸಿದ್ದ ಪೊಲೀಸರ ಪರ ವಿಶೇಷ ಸರ್ಕಾರಿ ಅಭೀಯೋಜಕ ಪಿ.ಪ್ರಸನ್ನ ಕುಮಾರ್‌, ಮೂರನೇ ಆರೋಪಿ ಶೇಕ್‌ ಇಜಾಜ್‌ ಅಲಿ ಭಯೋತ್ಪಾದನೆ ಕೃತ್ಯದಲ್ಲಿ ಭಾಗಿಯಾಗಿದ್ದಾನೆ. ಉಗ್ರ ಚಟುವಟಿಕೆಗೆ ಬಳಸಲು ವಿವಿಧ ಮೂಲದಿಂದ 14,37,060 ಹಣ ಸಂಗ್ರಹಿಸಿದ್ದಾನೆ. ಈ ಅಂಶವನ್ನು ಸಾಬೀತುಪಡಿಸಲು ತನಿಖಾಧಿಕಾರಿಗಳ ಸಾಕ್ಷ್ಯವಿದೆ. ಒಂದೊಮ್ಮೆ ಆರೋಪಿಯ ತಂದೆಯ ಅರ್ಜಿಯನ್ನು ಹೈಕೋರ್ಟ್‌ ಪುರಸ್ಕರಿಸಿದರೆ, ಆರೋಪಿಯ ಕೃತ್ಯಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರಗಳನ್ನು ವಿಚಾರಣಾ ನ್ಯಾಯಾಲಯದಲ್ಲಿ ಪ್ರಸ್ತುಪಡಿಸಲು ಅಡ್ಡಿ ಉಂಟು ಮಾಡಿದಂತಾಗುತ್ತದೆ ಎಂದು ವಾದಿಸಿದ್ದರು.

ಹಾಗೆಯೇ, ವಿಚಾರಣಾ ನ್ಯಾಯಾಲಯದ ಪ್ರಕರಣವನ್ನು ತೀರ್ಮಾನ ಮಾಡುವ ಮುನ್ನವೇ ಇಡೀ ಪ್ರಕರಣದಲ್ಲಿ ಆರೋಪಿ ಭಾಗಿಯಾಗಿಲ್ಲ ಎಂಬುದನ್ನೂ ಹೈಕೋರ್ಟ್‌ ಈಗಲೇ ನಿರ್ಧರಿಸಿದಂತಾಗುತ್ತದೆ. ತಾನು ಹೂವು-ಹಣ್ಣು ಮಾರಾಟ ಮಾಡಿ ಪೊಲೀಸರು ಜಪ್ತಿ ಮಾಡಿರುವ ಹಣ ಸಂಪಾದನೆ ಮಾಡಿರುವುದಾಗಿ ಆರೋಪಿ ತಂದೆ, ಕೆಲ ಪ್ರಮಾಣ ಪತ್ರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಆದರೆ, ಅದರಲ್ಲಿ ಹಣ ಸಂಪಾದಿಸಿರುವ ಸಮಯ ಹಾಗೂ ದಿನಾಂಕದ ವಿವರ ಒದಗಿಸಿಲ್ಲ. ಹೂವು-ಹಣ್ಣು ಮಾರಾಟ ಮಾಡಿ ಇಷ್ಟು ಹಣ ಸಂಪಾದಿಸಿರುವುದನ್ನು ಸಾಬೀತುಪಡಿಸಲು ಸೂಕ್ತ ದಾಖಲೆಗಳನ್ನು ಅರ್ಜಿದಾರರು ಸಲ್ಲಿಸಿಲ್ಲ. ಆರೋಪಿ ಕೃತ್ಯವನ್ನು ವಿಚಾರಣಾ ನ್ಯಾಯಾಲಯದ ವಿಚಾರಣೆ ವೇಳೆ ಪ್ರಾಸಿಕ್ಯೂಷನ್‌ ಸಾಬೀತುಪಡಿಸಲಿದ್ದು, ಅರ್ಜಿ ವಜಾಗೊಳಿಸಬೇಕು ಎಂದು ಪೀಠಕ್ಕೆ ಕೋರಿದ್ದರು. ಈ ವಾದ ಅಂಗೀಕರಿಸಿದ್ದ ಹೈಕೋರ್ಟ್‌, ಅರ್ಜಿ ವಜಾಗೊಳಿಸಿ ಆದೇಶಿಸಿದೆ.

ಪ್ರಕರಣವೇನು?ಆರೋಪಿ ಇಜಾಜ್‌ ಅಲಿ ಅವರ ಕಲಬುರಗಿಯ ಮನೆಯ ಮೇಲೆ 2022ರ ಸೆ.22ರಂದು ದಾಳಿ ನಡೆಸಿದ್ದ ಕೆ.ಜಿ. ಹಳ್ಳಿ ಠಾಣಾ ಪೊಲೀಸರು, ಭಯೋತ್ಪಾದನೆ ಕೃತ್ಯ ಎಸಗಲು ವಿವಿಧ ಮೂಲಗಳಿಂದ ಸಂಗ್ರಹಿಸಿದ್ದ ಎನ್ನಲಾದ 14,37,060 ಹಣವನ್ನು ಜಪ್ತಿ ಮಾಡಿದ್ದರು. ನಂತರ ಇಜಾಜ್‌ ಅನ್ನು ಬಂಧಿಸಿ, ದೂರು ದಾಖಲಿಸಿದ್ದರು. ಪ್ರಕರಣವನ್ನು 49ನೇ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯವು ವಿಚಾರಣೆ ನಡೆಸುತ್ತಿದೆ.

ಆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಆರೋಪಿಯ ತಂದೆ ಸಾದಿಕ್‌ ಅಲಿ, ತಾನು ಹೂವು-ಹಣ್ಣು ವ್ಯಾಪಾರ ಮಾಡಿ ಸಂಪಾದನೆ ಮಾಡಿದ್ದ 14,37,060 ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆ ಹಣವನ್ನು ಬಿಡುಗಡೆ ಮಾಡಲು ಆದೇಶಿಸಬೇಕು ಎಂದು ಕೋರಿದ್ದರು. ಆ ಅರ್ಜಿ ವಜಾಗೊಳಿಸಿ 2023ರ ಡಿ.16ರಂದು ಅಧೀನ ನ್ಯಾಯಾಲಯ ಆದೇಶಿಸಿತ್ತು. ಇದರಿಂದ ಸಾದಿಕ್‌ ಅಲಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಇದನ್ನೂ ಓದಿ:ಡಿಕೆ ಶಿವಕುಮಾರ್​ ವಿರುದ್ಧ ಸಿಬಿಐ ತನಿಖೆ ಹಿಂಪಡೆಯುವಿಕೆ ವಿರುದ್ಧದ ಅರ್ಜಿ ವಿಚಾರಣೆ ಮುಂದೂಡಿದ ಸುಪ್ರೀಂ

ABOUT THE AUTHOR

...view details