ಬೆಂಗಳೂರು: ಅಪರಾಧ ಪ್ರಕರಣಗಳಲ್ಲಿ ಯಾವುದೇ ತನಿಖಾಧಿಕಾರಿಯು ಮರಣೋತ್ತರ ಪರೀಕ್ಷೆ (ಪೋಸ್ಟ್ ಮಾರ್ಟಮ್) ನಡೆಯುವ ಸ್ಥಳಕ್ಕೆ ಖುದ್ದು ಭೇಟಿ ನೀಡುವುದಿಲ್ಲ. ಡಿವೈಎಸ್ಪಿ ಶ್ರೇಣಿಯ ಅಧಿಕಾರಿಗಳಿಗೂ ಘಟನಾ ಸ್ಥಳದ ಪಂಚನಾಮೆ/ಮಹಜರು ವರದಿ ಬಗ್ಗೆ ಸರಿಯಾಗಿ ನಾಲ್ಕು ವಾಕ್ಯ ಬರೆಯಲು ಬರುವುದಿಲ್ಲ. ಕಾನೂನುಗಳ ಬಗ್ಗೆ ಆಳವಾದ ಮಾಹಿತಿ ಇರದ ಪೊಲೀಸ್ ಮುಖ್ಯ ಕಾನ್ಸ್ಟೇಬಲ್ ತನಿಖೆ ನಡೆಸಿ ವರದಿ ಸಿದ್ಧಪಡಿಸಿದರೆ, ಅದಕ್ಕೆ ವೃತ್ತ ನಿರೀಕ್ಷಕರು, ಸಬ್ ಇನ್ಸ್ಪೆಕ್ಟರ್ ಸಹಿ ಹಾಕಿ ನ್ಯಾಯಾಲಯಕ್ಕೆ ಸಲ್ಲಿಸುತ್ತಾರೆ. ಇದು ಪ್ರಸ್ತುತ ಪೊಲೀಸ್ ತನಿಖೆಗಳಲ್ಲಿ ನಡೆಯುತ್ತಿದೆ ಎಂದು ಹೈಕೋರ್ಟ್ ಮೌಖಿಕವಾಗಿ ಅಸಮಾಧಾನ ವ್ಯಕ್ತಪಡಿಸಿತು.
ಕ್ರಿಮಿನಲ್ ಪ್ರಕರಣವೊಂದರ ವಿಚಾರಣೆ ಸಂದರ್ಭದಲ್ಲಿ, ಪೊಲೀಸ್ ತನಿಖಾ ವರದಿಯ ಲೋಪಗಳ ಬಗ್ಗೆ ನ್ಯಾಯಮೂರ್ತಿ ವಿ. ಶ್ರಿಷಾನಂದ ಈ ಮೇಲಿನಂತೆ ಪ್ರತಿಕ್ರಿಯಿಸಿದರು. ಸರ್ಕಾರಿ ವಕೀಲರು, ನ್ಯಾಯಾಧೀಶರು ಹಾಗೂ ಕಾನೂನು ತಜ್ಞರು ನಿಯಮಿತವಾಗಿ ಕಾರ್ಯಕ್ರಮಗಳನ್ನು ನಡೆಸಿ ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಕಾನೂನುಗಳ ಬಗ್ಗೆ ಅರಿವು ಮೂಡಿಸಬೇಕು. ನ್ಯಾಯಾಲಯಗಳ ತೀರ್ಪುಗಳ ಬಗ್ಗೆ ಮಾಹಿತಿ ನೀಡಬೇಕು. ತನಿಖೆ ವೇಳೆ ಅನುಸರಿಸಬೇಕಾದ ವಿಧಾನಗಳನ್ನು ತಿಳಿಸಿಕೊಡುವುದು ಸೂಕ್ತ ಎಂದು ಪೀಠ ಸಲಹೆ ನೀಡಿದೆ. ಅಲ್ಲದೇ, ಪೊಲೀಸರು ಸಮರ್ಪಕ ತನಿಖೆ ನಡೆಸುತ್ತಿಲ್ಲ. ತನಿಖೆ ವೇಳೆ ಅನುಸರಿಸಬೇಕಾದ ವಿಧಾನಗಳನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದರು.
ಪ್ರತಿದಿನ ವಿಐಪಿಯೊಬ್ಬರು ನಗರಕ್ಕೆ ಬರುತ್ತಾರೆ. ಅವರ ಸುಗಮ ಸಂಚಾರ ವ್ಯವಸ್ಥೆ ಹಾಗೂ ಬಂದೋಬಸ್ತ್ಗೆ ಎಲ್ಲಾ ಪೊಲೀಸರನ್ನು ನಿಯೋಜಿಸಲಾಗುತ್ತದೆ. ಬೆಳಗ್ಗೆದ್ದರೆ ಪೊಲೀಸರು ಬಂದೋಬಸ್ತ್ ಕೆಲಸದಲ್ಲಿ ಇರುತ್ತಾರೆ. ಇನ್ಯಾವಾಗ ಪೊಲೀಸರು ತನಿಖೆ ನಡೆಸುತ್ತಾರೆ ಎಂದು ಪ್ರಶ್ನಿಸುವ ಮೂಲಕ ಸದ್ಯದ ಪರಿಸ್ಥಿತಿಯನ್ನು ಟೀಕಿಸಿದರು.