ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಂತರ ರೂ.ಗಳ ಹಗರಣಕ್ಕೆ ಸಂಬಂಧಿಸಿದಂತೆ ಪ್ರಕರಣವನ್ನು ಕೇಂದ್ರೀಯ ತನಿಖಾ ಸಂಸ್ಥೆಗೆ (ಸಿಬಿಐ) ವಹಿಸಬೇಕು ಎಂದು ಕೋರಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೆ, ಈ ರೀತಿಯಲ್ಲಿ ಬ್ಯಾಂಕ್‌ಗಳ ಮನವಿಯನ್ನು ಪುರಸ್ಕರಿಸಿದಲ್ಲಿ ಮುಂದೆ ಪ್ರತಿಯೊಂದು ಬ್ಯಾಂಕ್ ಕೂಡ ಸಿಬಿಐ ತನಿಖೆಗೆ ಕೋರಿ ಹೈಕೋರ್ಟ್ ಮೆಟ್ಟಿಲೇರಲಿದ್ದಾರೆ ಎಂದು ನ್ಯಾಯಪೀಠ ಮೌಖಿಕವಾಗಿ ತಿಳಿಸಿತು.
''ಬ್ಯಾಂಕಿಂಗ್ ನಿಬಂಧನೆಗಳ ಕಾಯ್ದೆ-1949ರ ಸೆಕ್ಷನ್ 35ಎ ಪ್ರಕಾರ ಬ್ಯಾಂಕ್ ವ್ಯವಹಾರಗಳ ಕುರಿತು ಯಾವುದೇ ಬ್ಯಾಂಕ್‌ಗಳಿಗೆ ಕಾಲಕಾಲಕ್ಕೆ ನಿರ್ದೇಶನ ನೀಡುವ ಅಧಿಕಾರವನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹೊಂದಿದೆ. ಅದರಂತೆ ಸೆಕ್ಷನ್ ಅನ್ವಯ ಬ್ಯಾಂಕ್ ವ್ಯವಹಾರಗಳಲ್ಲಿ ನಡೆದಿರುವ ವಂಚನೆ ಹಾಗೂ ಅಕ್ರಮದ ಬಗ್ಗೆ ಸಿಬಿಐ ಅಂತಹ ಸ್ವತಂತ್ರ ಸಂಸ್ಥೆಯ ತನಿಖೆಗೆ ವಹಿಸಲು ಕೋರಬಹುದಾಗಿದೆ. ಬ್ಯಾಂಕಿಂಗ್ ವ್ಯವಹಾರದಲ್ಲಿ 50 ಕೋಟಿ ರೂ. ಅಧಿಕ ಅಕ್ರಮ ವ್ಯವಹಾರ ನಡೆದ ಪಕ್ಷದಲ್ಲಿ ಸಿಬಿಐ ಅಂತಹ ಪ್ರಕರಣವನ್ನು ಸಿಬಿಐಗೆ ವಹಿಸಬಹದಾಗಿದೆ. ಹಗರಣದಲ್ಲಿ ವಾಲ್ಮೀಕಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಉನ್ನತ ಶ್ರೇಣಿಯ ಅಧಿಕಾರಿಗಳು ಮತ್ತು ನಿಗಮದ ಅಧ್ಯಕ್ಷರು ಶಾಸಕರು ಭಾಗಿಯಾಗಿದ್ದಾರೆ. ಇದರಿಂದ ರಾಜ್ಯ ಸರ್ಕಾರವು ವಾಲ್ಮೀಕಿ ಪ್ರಕರಣದ ತನಿಖೆಗೆ ರಚಿಸಿರುವ ಎಸ್‌ಐಟಿಯು ನ್ಯಾಯಯುತ ತನಿಖೆ ನಡೆಸುವುದಿಲ್ಲ. ಹಾಗಾಗಿ, ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು'' ಎಂದು ಯೂನಿಯನ್ ಬ್ಯಾಂಕ್ ಪರ ವಕೀಲರು ವಾದ ಮಂಡಿಸಿದ್ದರು.
ಆದರೆ, ''ವಕೀಲರು ಸೆಕ್ಷನ್ 35ಎ ಅನ್ನು ವ್ಯಾಖ್ಯಾನ ಮಾಡಿರುವುದನ್ನು ಒಪ್ಪಲಾಗದು. ಸೆಕ್ಷನ್ 35ಎ ಕೇವಲ ಯಾವುದೇ ಬ್ಯಾಂಕಿಂಗ್ ಸಂಸ್ಥೆಗಳ ವ್ಯವಹಾರಗಳನ್ನು ಸಂಪೂರ್ಣವಾಗಿ ನಿಯಂತ್ರಿಸುವ ಮತ್ತು ಮೇಲ್ವಿಚಾರಣೆ ನಡೆಸುವುದಕ್ಕೆ ಸಂಬಂಧಿಸಿರುತ್ತದೆ. ಯಾವುದೇ ಬ್ಯಾಂಕಿಂಗ್ ಸಂಸ್ಥೆಗೆ ತನಿಖೆಯನ್ನು ಸಿಬಿಐ ಕೈಗೆ ವರ್ಗಾಯಿಸಲು ಅನುಮತಿ ನೀಡಿದರೆ, ಅದು ಸೆಕ್ಷನ್ 35ಎಗೆ ಶಾಸನವು ನೀಡದ ಅಧಿಕಾರವನ್ನು ನೀಡಿದಂತಾಗುತ್ತದೆ. ವಾಲ್ಮೀಕಿ ಹಗರಣದ ಕುರಿತು ದೂರು ದಾಖಲಾದ ಸಂದರ್ಭದಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಕೆಲ ಅಧಿಕಾರಿಗಳು ಆರೋಪಿಗಳಾಗಿದ್ದರು ಎಂಬ ಕಾರಣಕ್ಕೆ ಹಗರಣವನ್ನು ಸಿಬಿಐಗೆ ವಹಿಸುವಂತೆ ಬ್ಯಾಂಕ್ ಕೋರಿದೆ. ಆ ಮಾತ್ರಕ್ಕೆ ಅಟಾರ್ನಿ ಜನರಲ್ ಅವರು ಹೇಳಿರುವಂತೆ ಸೆಕ್ಷನ್ 35ಎ ವ್ಯಾಖ್ಯಾನವನ್ನು ನ್ಯಾಯಾಲಯವು ಒಪ್ಪಬೇಕಿಲ್ಲ'' ಎಂದು ಆದೇಶದಲ್ಲಿ ಕೋರ್ಟ್ ತಿಳಿಸಿದೆ.
''ಅಲ್ಲದೆ, ವಾಲ್ಮೀಕಿ ನಿಗಮವು ಪರಿಶಿಷ್ಟ ಪಂಡಗದ ಸಮುದಾಯದವರು ಆರ್ಥಿಕವಾಗಿ ಅಭಿವೃದ್ಧಿ ಹೊಂದುವುದಕ್ಕೆ ಹಾದಿ ಮಾಡಿಕೊಡಲು, ಹಣಕಾಸು ನೆರವು ಕಲ್ಪಿಸಲು, ಕೃಷಿ ಕಾರ್ಮಿಕರಿಗೆ ಬೆಂಬಲ ನೀಡಲು ಸ್ಥಾಪಿಸಲಾಗಿದೆ. ಪರಿಶಿಷ್ಟ ಪಂಗಡದವರಿಗ ಸೇರಿದ ಹಣದ ಅತ್ಯಂತ ಕಾಳಜಿ ವಹಿಸಬೇಕಿದೆ. ನಿಗಮಕ್ಕೆ ಸೇರಿದ ಹಣದ ಅವ್ಯವಹಾರ ಮಾಡಿರುವುದು ನ್ಯಾಯಾಲಯದ ಆತ್ಮಸಾಕ್ಷ್ಮಿಗೆ ಆಘಾತ ತರಿಸಿದೆ'' ಎಂದು ಪೀಠ ಹೇಳಿದೆ.
''ಅಲ್ಲದೆ, ಹಗರಣದಲ್ಲಿ ಹಾಲಿ ಶಾಸಕ ಮತ್ತು ಉನ್ನತ ಶ್ರೇಣಿಯ ಅಧಿಕಾರಿಗಳು ನಿಗಮ ಹಣದ ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆ. ಸಚಿವರು ಮತ್ತು ಅಧಿಕಾರಿಗಳು ಹಗರಣದಲ್ಲಿ ಭಾಗಿಯಾಗಿರುವ ಆರೋಪ ಎದುರಾದಾಗ, ಅಂತಹ ಆರೋಪಗಳು ಬಗ್ಗೆ ತನಿಖೆ ನಡೆಸಬೇಕಾಗುತ್ತದೆ. ಅಂತಹ ತನಿಖೆಯು ರಾಜ್ಯ ಸರ್ಕಾರದ ಅಧೀನ/ನಿಯಂತ್ರಣದಲ್ಲಿರದ ಸ್ವತಂತ್ರ ತನಿಖಾ ಸಂಸ್ಥೆಗೆ ವಹಿಸಬೇಕಾಗುತ್ತದೆ. ಆಗ ಮಾತ್ರ ಅದು ಸಾರ್ವಜನಿಕರಲ್ಲಿ ವಿಶ್ವಾಸವನ್ನು ಮೂಡಿಸುತ್ತದೆ. ತನಿಖೆ ಅಥವಾ ಅಂತಹ ತನಿಖೆಗೆ ವಿಶ್ವಾಸಾರ್ಹತೆಯನ್ನು ಒದಗಿಸುತ್ತದೆ. ಆದರೆ, ಬ್ಯಾಂಕಿಂಗ್ ನಿಬಂಧನೆಗಳ ಕಾಯ್ದೆ ಸೆಕ್ಷನ್ 35ಎ ವ್ಯಾಖ್ಯಾನದ ಮೇಲೆ ಪ್ರಕರಣದ ತನಿಖೆಯನ್ನು ಸ್ವತಂತ್ರ ತನಿಖಾ ವಹಿಸುವುದಲ್ಲ. ಇತರೆ ವ್ಯಾಖ್ಯಾನವನ್ನು ಮಂಡಿಸಿದ್ದರೆ, ಆಗ ಅರ್ಜಿದಾರರ ಮನವಿಯನ್ನು ನ್ಯಾಯಾಲಯವು ಪರಿಗಣಿಸುತ್ತಿತ್ತು'' ಎಂದು ಪೀಠ ತಿಳಿಸಿದೆ.
''ಜೊತೆಗೆ, ಪ್ರಕರಣದ ಕುರಿತು ದೂರು ದಾಖಲಾದಾಗ ಯನಿಯನ್ ಬ್ಯಾಂಕಿನ ಅಧಿಕಾರಿಗಳು ಸಹ ಆರೋಪಿಗಳಾಗಿದ್ದರು. ಅದಕ್ಕಾಗಿಯೇ ಯೂನಿಯನ್ ಬ್ಯಾಂಕ್ ತನಿಖೆಯನ್ನು ಸಿಬಿಐ ವಹಿಸಲು ಕೋರಿದೆ. ಬ್ಯಾಂಕ್ ಸಿಬಿಐ ತನಿಖೆ ಕೇಳಿದ ಮಾತ್ರಕ್ಕೆ ಸೆಕ್ಷನ್ 35ಎ ವ್ಯಾಖ್ಯಾನದ ಆಧಾರದಲ್ಲಿ ಸಿಬಿಐ ತನಿಖೆಗೆ ವಹಿಸಲು ಸಾಧ್ಯವಿಲ್ಲ. ಇನ್ನೂ ಎಸ್‌ಐಟಿಯು ದೋಷಾರೋಪ ಪಟ್ಟಿಯಿಂದ ಬ್ಯಾಂಕ್ ಅಧಿಕಾರಿಗಳನ್ನು ಕೈಬಿಡಲಾಗಿದೆ. ಆದರೆ, ಕಾನೂನು ಅನುಗುಣವಾದ ಮಾರ್ಗದಲ್ಲಿ ಸಿಬಿಐ ತನಿಖೆಗೆ ಅಭ್ಯಂತರವಿಲ್ಲ. ಆಗ ರಾಜ್ಯದ ತನಿಖಾ ಸಂಸ್ಥೆಯು ಹಗರಣದಿಂದ ಕೈ ಬಿಟ್ಟಿರುವ ವ್ಯಕ್ತಿಗಳನ್ನೂ ಸಿಬಿಐ ತನಿಖೆಗೊಳಪಡಿಸಬಹುದು'' ಎಂದು ನ್ಯಾಯಪೀಠ ಸ್ಪಷ್ಟಪಡಿಸಿ ಅರ್ಜಿ ವಜಾಗೊಳಿಸಿದೆ.
ಈ ಹಿಂದಿನ ವಿಚಾರಣೆಯ ವಿವರ:ಅರ್ಜಿಯ ಸಂಬಂಧ ಈ ಹಿಂದೆ ನಡೆದ ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಬಿ. ವಿ. ಆಚಾರ್ಯ, ''ಪ್ರಕರಣ ರಾಜ್ಯ ಸರ್ಕಾರದ ವ್ಯಾಪ್ತಿಗೆ ಸೇರಿರುವುದಾಗಿದ್ದು, ರಾಜ್ಯ ಪೊಲೀಸರು ಈ ಪ್ರಕರಣ ಸಂಬಂಧ ತನಿಖೆ ನಡೆಸುವುದಕ್ಕೆ ಸಂಪೂರ್ಣ ಅಧಿಕಾರವಿದೆ. ರಾಜ್ಯ ಸರ್ಕಾರ ತನಿಖೆ ನಡೆಸುತ್ತಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ತನಿಖೆ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡುವುದಕ್ಕೆ ಅಧಿಕಾರವಿಲ್ಲ. ಬ್ಯಾಂಕ್‌ನ ಅಧಿಕಾರಿಗಳು ಪ್ರಕರಣದ ತನಿಖೆ ನಡೆಸುತ್ತಿರುವ ರಾಜ್ಯ ಸರ್ಕಾರವನ್ನೇ ಆರೋಪಿಯನ್ನಾಗಿಸಲಾಗುತ್ತಿದೆ'' ಎಂದು ತಿಳಿಸಿದ್ದರು.