ಕರ್ನಾಟಕ

karnataka

ETV Bharat / state

ವಕ್ಫ್ ಆಸ್ತಿ ಕುರಿತು ರೈತರಿಗೆ ನೀಡಿದ್ದ ನೋಟಿಸ್ ಹಿಂಪಡೆದ ಸರ್ಕಾರದ ಕ್ರಮ ಪ್ರಶ್ನಿಸಿದ್ದ ಅರ್ಜಿ ವಜಾ - WAQF ISSUE

ವಕ್ಫ್ ಆಸ್ತಿಗಳ ಒತ್ತುವರಿ ಕುರಿತು ಹೈಕೋರ್ಟ್ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆಗೆ ಆದೇಶಿಸಲು ಸರ್ಕಾರಕ್ಕೆ ನಿದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಹೈಕೋರ್ಟ್, waqf issue
ಹೈಕೋರ್ಟ್ (ETV Bharat)

By ETV Bharat Karnataka Team

Published : Dec 17, 2024, 6:57 PM IST

ಬೆಂಗಳೂರು: ರಾಜ್ಯದಲ್ಲಿ ವಕ್ಫ್ ಆಸ್ತಿ ಒತ್ತುವರಿ ಕುರಿತಂತೆ ರೈತರಿಗೆ ನೀಡಿದ್ದ ನೋಟಿಸ್‌ಗಳನ್ನು ಹಿಂಪಡೆದಿರುವ ಸರ್ಕಾರದ ಆದೇಶ ಪ್ರಶ್ನಿಸಿ ಮತ್ತು ವಕ್ಫ್ ಆಸ್ತಿ ಒತ್ತುವರಿಗೆ ಸಂಬಂಧಿಸಿದಂತೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಆದೇಶಿಸಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಬೆಂಗಳೂರಿನ ನಿವಾಸಿ ಸೈಯದ್ ಎಜಾಜ್ ಅಹ್ಮದ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್. ವಿ. ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ. ವಿ. ಅರವಿಂದ್ ಅವರ ವಿಭಾಗೀಯ ಪೀಠ, ಅರ್ಜಿ ವಜಾಗೊಳಿಸಿ ಆದೇಶಿಸಿತು.

ಅಲ್ಲದೆ, ಈ ಅರ್ಜಿ ರಾಜಕೀಯ ಪ್ರೇರಿತ ಮತ್ತು ಪ್ರಚಾರಕ್ಕಾಗಿ ಸಲ್ಲಿಸಿದಂತಿದೆ. ಅರ್ಜಿದಾರರ ಪ್ರಾಮಾಣಿಕತೆಯು ಪ್ರಶ್ನಾರ್ಹವಾಗಿದೆ. ಅರ್ಜಿಯಲ್ಲಿನ ಎಲ್ಲ ಮನವಿಗಳ ಬಗ್ಗೆ ಕಾರ್ಯಾಂಗ ಕ್ರಮ ಕೈಗೊಳ್ಳಬೇಕು. ಅರ್ಜಿಯಲ್ಲಿ ವಿಚಾರಣೆಗೆ ಅರ್ಹವಾದ ಯಾವುದೇ ಅಂಶಗಳಿಲ್ಲ ಎಂದು ಪೀಠ ತಿಳಿಸಿತು. ಜೊತೆಗೆ, ಅರ್ಜಿದಾರರಿಗೆ 10 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶಿಸಿತು.

ಆದರೆ, ಈ ವೇಳೆ ಅರ್ಜಿದಾರರ ಪರ ವಕೀಲರು ಮನವಿ ಮಾಡಿದ ಹಿನ್ನೆಲೆಯಲ್ಲಿ ದಂಡ ವಿಧಿಸುವುದನ್ನು ನ್ಯಾಯಾಲಯ ಕೈಬಿಟ್ಟಿತು.

ಅರ್ಜಿಯಲ್ಲಿರುವ ಅಂಶಗಳೇನು?

ರಾಜ್ಯದಲ್ಲಿನ ವಕ್ಫ್‌ಗೆ ಸೇರಿದ ಎಲ್ಲ ಆಸ್ತಿಗಳ ಸಂರಕ್ಷಣೆ ಮಾಡಬೇಕು. ವಕ್ಫ್ ಆಸ್ತಿಗಳ ಒತ್ತುವರಿದಾರರಿಗೆ ನೀಡಿದ್ದ ನೋಟಿಸ್‌ಗಳನ್ನು ಹಿಂಪಡೆಯಲು ರಾಜ್ಯ ಸರ್ಕಾರ 2024ರ ನವೆಂಬರ್ 11ರಂದು ಹೊರಡಿಸಿರುವ ಆದೇಶವನ್ನು ರದ್ದಪಡಿಸಬೇಕು. ಈ ಸಂಬಂಧ ಸರ್ಕಾರಕ್ಕೆ ಅರ್ಜಿದಾರರು ನೀಡಿರುವ ಮನವಿಯನ್ನು ಪರಿಗಣಿಸಲು ಸೂಚನೆ ನೀಡಬೇಕು ಎಂದು ಅರ್ಜಿದಾರರು ಕೋರಿದ್ದರು.

ಅಲ್ಲದೆ, ವಕ್ಫ್ ಆಸ್ತಿ ಒತ್ತುವರಿ ಮಾಡಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳ ವಿರುದ್ಧ ನ್ಯಾಯಾಂಗ ತನಿಖೆ ನಡೆಸುವುದಕ್ಕಾಗಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ರಚನೆ ಮಾಡಬೇಕು. ಕರ್ನಾಟಕ ಇನಾಮ್ಸ್ ನಿರ್ಮೂಲನೆ ಕಾಯ್ದೆ ಮತ್ತು ಕರ್ನಾಟಕ ಭೂಸುಧಾರಣಾ ಕಾಯ್ದೆ ಅಡಿಯಲ್ಲಿ ಸ್ವಾಧೀನ ಪಡಿಸಿಕೊಂಡಿರುವ ಭೂಮಿಗೆ ಪರ್ಯಾಯವಾಗಿ ಮಾರುಕಟ್ಟೆ ಮೌಲ್ಯದ ಜಮೀನನ್ನು ನೀಡಿ ವಕ್ಫ್ ಆಸ್ತಿಗಳನ್ನು ಹಿಂಪಡೆಯಲು ನಿರ್ದೇಶನ ನೀಡಬೇಕು ಎಂದು ಕೋರಿದ್ದರು.

ವಕ್ಫ್ ಆಸ್ತಿಗಳಿಗೆ ಕುರಿತಂತೆ ಮಾಧ್ಯಮಗಳಲ್ಲಿ ರಾಜಕೀಯಗೊಳಿಸಿ ಪ್ರಸಾರ ಮಾಡುವುದನ್ನು ನಿರ್ಬಂಧಿಸಲು ಆದೇಶಿಸುವುದು. ಸರ್ಕಾರ, ಸರ್ಕಾರದ ಆಧೀನ ಸಂಸ್ಥೆಗಳು ಮತ್ತು ಖಾಸಗಿ ವ್ಯಕ್ತಿಗಳಿಂದ ಅಕ್ರಮವಾಗಿ ಒತ್ತುವರಿಯಾಗಿರುವ ವಕ್ಫ್ ಮಂಡಳಿಯ ಆಸ್ತಿಗಳನ್ನು ಗುರುತಿಸಲು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡುವುದು ಮತ್ತು ನಿಗದಿತ ಸಮಯದಲ್ಲಿ ಹಿಂಪಡೆಯಲು ನಿರ್ದೇಶನ ನೀಡಬೇಕು ಎಂಬುದು ಸೇರಿದಂತೆ ಹಲವು ಮನವಿಗಳನ್ನು ಅರ್ಜಿಯಲ್ಲಿ ಮಾಡಲಾಗಿತ್ತು.

ಇದನ್ನೂ ಓದಿ: ದರ್ಶನ್ ಇತರರ ಜಾಮೀನು ಪ್ರಶ್ನಿಸಿ ಸುಪ್ರೀಂಕೋರ್ಟ್​​ ಮೆಟ್ಟಿಲೇರಲು ಬೆಂಗಳೂರು ಪೊಲೀಸರ ನಿರ್ಧಾರ

ABOUT THE AUTHOR

...view details