ಬೆಂಗಳೂರು:ಬೆಂಗಳೂರು ವಕೀಲರ ಸಂಘದಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಬೇಕು ಎಂಬ ಬೇಡಿಕೆಗೆ ಸಹಮತ ವ್ಯಕ್ತಪಡಿಸಿರುವ ಹೈಕೋರ್ಟ್, ಚುನಾವಣಾ ನೀತಿ ಸಂಹಿತೆ ಜಾರಿಯಿರುವ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಮಾತ್ರ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ ಎಂದು ತಿಳಿಸಿ, ಅರ್ಜಿಗಳನ್ನು ವಜಾಗೊಳಿಸಿ ಗುರುವಾರ ಆದೇಶಿಸಿದೆ.
ವಕೀಲರ ಸಂಘದಲ್ಲಿ ತಮಗೆ ಶೇ.33ರಷ್ಟು ಮೀಸಲಾತಿ ನೀಡಲು ನಿರ್ದೇಶನ ನೀಡಬೇಕು ಎಂದು ಕೋರಿ ಬೆಂಗಳೂರು ವಕೀಲರ ಸಂಘದ ಮಹಿಳಾ ಸದಸ್ಯರು ಮತ್ತು ಮಹಿಳಾ ವಕೀಲರ ಒಕ್ಕೂಟ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ನ್ಯಾಯಪೀಠ, ಈ ಕುರಿತು ಸುಪ್ರೀಂ ಕೋರ್ಟ್ ಮಾತ್ರ ನಿರ್ಧಾರ ಮಾಡಬೇಕು ಎಂದು ತಿಳಿಸಿತು. ಹಾಗೂ ಯಾವುದೇ ಆದೇಶ ನೀಡಲು ನಿರಾಕರಿಸಿತು.
ಅಲ್ಲದೆ, ಮಹಿಳಾ ಮೀಸಲಾತಿ ಕುರಿತಂತೆ ನಾವು ನಿಮ್ಮ (ಮಹಿಳೆಯರ) ಪರವಾಗಿಯೇ ಇದ್ದೇವೆ. ಆದರೆ, ಮೀಸಲಾತಿ ನೀಡಬೇಕಾದಲ್ಲಿ ಕಾನೂನುಬದ್ಧವಾಗಿರಬೇಕು. ಮೀಸಲಾತಿ ಸಂಬಂಧ ಆದೇಶ ನೀಡಲು ಈ ನ್ಯಾಯಾಲಯಕ್ಕೆ ಅವಕಾಶವಿಲ್ಲ. ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ಗೆ ಹೆಚ್ಚಿನ ಅಧಿಕಾರವಿದ್ದು, ಅಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಪೀಠ ಮೌಖಿಕವಾಗಿ ಹೇಳಿದೆ.
"ಸುಪ್ರೀಂ ಕೋರ್ಟ್ ಮಾತ್ರ ಆದೇಶ ನೀಡಬಹುದು": ಸಂಘದ ಆಡಳಿತ ಮಂಡಳಿಯಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವ ಸಂಬಂಧ ಯಾವುದೇ ಕಾನೂನು ಇಲ್ಲ. ಜೊತೆಗೆ, ಸಂಘದ ಬೈಲಾದಲ್ಲಿ ಈ ರೀತಿಯ ಮೀಸಲಾತಿ ನೀಡುವುದಕ್ಕೆ ಅವಕಾಶ ಕಲ್ಪಿಸಿರಬೇಕು. ಅಂತಹ ಸಂದರ್ಭದಲ್ಲಿ ಬೈಲಾ ನಿಯಮಗಳು ಉಲ್ಲಂಘನೆಯಾದಲ್ಲಿ ಹೈಕೋರ್ಟ್ ಆದೇಶ ನೀಡಬಹುದಾಗಿದೆ. ಆದರೆ, ಬೈಲಾದಲ್ಲಿ ಮೀಸಲಾತಿ ಕುರಿತು ಪ್ರಸ್ತಾಪ ಇಲ್ಲದಿದ್ದ ಸಂದರ್ಭದಲ್ಲಿ ಅದಕ್ಕೆ ತಿದ್ದುಪಡಿ ತರಬೇಕು. ಈ ಸಂಬಂಧ ಸುಪ್ರೀಂ ಕೋರ್ಟ್ ಮಾತ್ರ ಆದೇಶ ನೀಡಬಹುದಾಗಿದೆ. ಆದ್ದರಿಂದ ಹೈಕೋರ್ಟ್ ಯಾವುದೇ ರೀತಿಯ ಆದೇಶ ನೀಡಲು ಸಾಧ್ಯವಿಲ್ಲ ಎಂದು ಪೀಠ ಹೇಳಿದೆ.
ಈ ವೇಳೆ ಅರ್ಜಿದಾರರ ಪರ ವಕೀಲರು ಮಧ್ಯಪ್ರವೇಶಿಸಿ, ''ವಕೀಲರ ಸಂಘದಲ್ಲಿ 2024ರ ಚುನಾವಣೆಗೆ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಮೀಸಲಾತಿ ನೀಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಅದೇ ರೀತಿಯ ಆದೇಶ ನೀಡಬೇಕು'' ಎಂದು ಕೋರಿದರು.