ಬೆಂಗಳೂರು:ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎನ್ನಲಾದ ಸಂತ್ರಸ್ತ ಮಹಿಳೆಯನ್ನು ಅಪಹರಣ ಆರೋಪ ಕುರಿತ ಪ್ರಕರಣದಲ್ಲಿ ಜೆಡಿಎಸ್ ಶಾಸಕ ಹೆಚ್.ಡಿ.ರೇವಣ್ಣ ಅವರ ವಿರುದ್ಧ ದಾಖಲಾಗಿದ್ದ ಪ್ರಕರಣ ಸಂಬಂಧ ಜನವರಿ 30ರವರೆಗೂ ಆರೋಪ ನಿಗದಿ ಮಾಡದಂತೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಮಹಿಳೆ ಅಪಹರಣ ಆರೋಪ ಸಂಬಂಧ ಕೆ.ಆರ್.ನಗರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ರದ್ದುಕೋರಿ ರೇವಣ್ಣ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿದೆ. ಅಲ್ಲದೆ, ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ಪ್ರಕರಣ ಸಂಬಂಧ ವಿಚಾರಣಾ ನ್ಯಾಯಾಲಯದಲ್ಲಿ ಆರೋಪ ನಿಗದಿ ಮಾಡುವ ಕುರಿತು ವಿಚಾರಣೆ ಆರಂಭವಾಗಿದೆ. ವಿಚಾರಣೆ ಮುಂದುವರೆಸಿದರೂ, ಆರೋಪ ನಿಗದಿ ಮಾಡದಂತೆ ಕೋರಿದ್ದಾರೆ. ಈ ಹಿನ್ನೆಲೆ ಜನವರಿ 30ರವರೆಗೂ ಆರೋಪ ನಿಗದಿ ಮಾಡದಂತೆ ಆದೇಶಿಸಿರುವುದಾಗಿ ತಿಳಿಸಿದೆ.
ಸಂತ್ರಸ್ತೆಯ ಮಗ ನೀಡಿದ ದೂರಿನ ಮೇರೆ ಎಫ್ಐಆರ್ ದಾಖಲಾಗಿತ್ತು. ನಮ್ಮ ತಾಯಿ (ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆ) ರೇವಣ್ಣ ಅವರ ಮನೆಯಲ್ಲಿ ಸುಮಾರ 6 ವರ್ಷಗಳ ಕಾಲ ಕೆಲಸ ಮಾಡಿಕೊಂಡಿದ್ದರು. ಪ್ರಜ್ವಲ್ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಬಾಬಣ್ಣ ಎಂಬುವರು ರೇವಣ್ಣ ಅವರ ಸೂಚನೆ ಮೇರೆಗೆ ಅಪಹರಣ ಮಾಡಿದ್ದರು. ಅಲ್ಲದೆ ಪ್ರಜ್ವಲ್ ರೇವಣ್ಣ ಅವರಿಂದ ದೌರ್ಜನ್ಯಕ್ಕೆ ಒಳಗಾಗಿರುವ ಸಂಬಂಧ ತಾಯಿಯ ಕೆಲವು ವಿಡಿಯೋಗಳಲ್ಲಿ ವೈರಲ್ ಆಗಿರುವುದಾಗಿ ಸ್ನೇಹಿತರು ತಿಳಿಸಿದ್ದರು. ತಕ್ಷಣ ಬಾಬಣ್ಣ ಅವರಿಗೆ ಮನವಿ ಮಾಡಿ ತನ್ನ ತಾಯಿಯನ್ನು ವಾಪಸ್ ಕಳುಹಿಸುವಂತೆ ಮನವಿ ಮಾಡಲಾಗಿತ್ತು. ಆದರೆ, ಕಳುಹಿಸಿರಲಿಲ್ಲ ಎಂದು ಆರೋಪಿಸಿ 2024ರ ಮೇ 2 ರಂದು ಕೆ.ಆರ್.ನಗರದ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದರು.
ಪ್ರಕರಣ ಸಂಬಂಧ ವಿಚಾರಣಾ ನ್ಯಾಯಾಲಯ ರೇವಣ್ಣ ಅವರಿಗೆ ಮೇ 13ರಂದು ಜಾಮೀನು ಮಂಜೂರು ಮಾಡಿತ್ತು. ಜಾಮೀನು ರದ್ದು ಮಾಡುವಂತೆ ಕೋರಿ ವಿಶೇಷ ತನಿಖಾ ದಳ (ಎಸ್ಐಟಿ) ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿ ಆದೇಶಿಸಿತ್ತು.
ಓದಿ:ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣ: ಆದೇಶ ಕಾಯ್ದಿರಿಸಿದ ಹೈಕೋರ್ಟ್