ಬೆಂಗಳೂರು: ರಾಜ್ಯ ಮಾಹಿತಿ ಆಯುಕ್ತರ ನೇಮಕ ಮಾಡುವ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಕಾರ್ಯದರ್ಶಿಗಳ ಸಮಿತಿಯನ್ನು ಶೋಧನಾ ಸಮಿತಿ ಎನ್ನಲಾಗುವುದಿಲ್ಲ ಎಂದು ತಿಳಿಸಿರುವ ಹೈಕೋರ್ಟ್, ಶೋಧನಾ ಸಮಿತಿ ರಚಿಸಿರುವ ಸಂಬಂಧ ಸೂಕ್ತ ಪ್ರತಿಕ್ರಿಯೆ ನೀಡಬೇಕು ಎಂದು ಇಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು.
ರಾಜ್ಯ ಮಾಹಿತಿ ಆಯುಕ್ತರ ಹುದ್ದೆಯ ಆಕಾಂಕ್ಷಿಯಾಗಿದ್ದ ಜೆ.ಪಿ.ನಗರದ ನಿವಾಸಿ ಕೆ.ಮಲ್ಲಿಕಾರ್ಜುನ ರಾಜು ಎಂಬವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ನ್ಯಾಯಪೀಠ ಈ ನಿರ್ದೇಶನ ನೀಡಿ, ವಿಚಾರಣೆಯನ್ನು ಮುಂದೂಡಿದೆ.
ವಿಚಾರಣೆ ವೇಳೆ, ರಾಜ್ಯ ಸರ್ಕಾರದ ಪರ ಹಾಜರಿದ್ದ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ''ರಾಜ್ಯ ಮಾಹಿತಿ ಮುಖ್ಯ ಆಯುಕ್ತರು ಮತ್ತು ಮಾಹಿತಿ ಆಯುಕ್ತರ ನೇಮಕ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಡಿಪಿಎಆರ್ ಕಾರ್ಯದರ್ಶಿಗಳ ಸಮಿತಿಯನ್ನು ರಚನೆ ಮಾಡಲಾಗಿತ್ತು. ಆದರೆ, ಈ ಸಂಬಂಧ ಯಾವುದೇ ಸಾರ್ವಜನಿಕ ಪ್ರಕಟಣೆ ಹೊರಡಿಸಿಲ್ಲ. ಅಲ್ಲದೆ, ಮಾಹಿತಿ ಆಯುಕ್ತರ ನೇಮಕ ಕುರಿತಂತೆ ಸುಪ್ರೀಂ ಕೋರ್ಟ್ ನಿಗಾ ವಹಿಸಿದೆ. ಈ ಕುರಿತ ವಿವರಣೆಯನ್ನು ಸುಪ್ರೀಂ ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಲಾಗುವುದು'' ಎಂದು ತಿಳಿಸಿದರು.
ಇದಕ್ಕೆ ಪೀಠ, ''ಶೋಧನಾ ಸಮಿತಿ ರಚನೆ ಮಾಡಿರುವ ಕುರಿತು ಸೂಕ್ತ ವಿವರಣೆ ಇಲ್ಲ. ಸರ್ಕಾರ ರಚನೆ ಮಾಡಿರುವ ಸಮಿತಿಯನ್ನು ಶೋಧನಾ ಸಮಿತಿ ಎನ್ನಲಾಗದು. ಹೀಗಾಗಿ, ಸೂಕ್ತ ಪ್ರತಿಕ್ರಿಯೆ ನೀಡಬೇಕು'' ಎಂದು ಸೂಚನೆ ನೀಡಿ ವಿಚಾರಣೆಯನ್ನು ಪೆಬ್ರವರಿ 18ಕ್ಕೆ ಮುಂದೂಡಿತು.
ಅರ್ಜಿಯಲ್ಲಿ ಪ್ರಶ್ನಿಸಿರುವ ಅಂಶಗಳು:ರಾಜ್ಯ ಮಾಹಿತಿ ಆಯೋಗದ ಮುಖ್ಯ ಆಯುಕ್ತರು ಹಾಗೂ ಮಾಹಿತಿ ಆಯುಕ್ತರ ನೇಮಕ ಪ್ರಕ್ರಿಯೆಯಲ್ಲಿ ಸಲ್ಲಿಕೆಯಾಗುವ ಅರ್ಜಿಗಳ ಪರಿಶೀಲನೆಗೆ ಶೋಧನಾ ಸಮಿತಿ ರಚನೆ ಮಾಡಬೇಕು. ಬಳಿಕ ಆಯ್ಕೆಯಾದವ ಪಟ್ಟಿಯನ್ನು ಆಯ್ಕೆ ಸಮಿತಿಯ ಮುಂದೆ ಮಂಡಿಸಬೇಕು ಎಂಬುದಾಗಿ ಅಂಜಲಿ ಭಾರಧ್ವಾಜ್ ವಿರುದ್ಧದ ಕೇಂದ್ರ ಸರ್ಕಾರದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದೆ. ಆದರೆ, ರಾಜ್ಯ ಸರ್ಕಾರ ಶೋಧನಾ ಸಮಿತಿ ರಚನೆ ಮಾಡದೆಯೇ 2024ರ ಜೂನ್ 11ರಂದು ಅರ್ಜಿಗಳನ್ನು ಆಹ್ವಾನ ಮಾಡಿದೆ. ಜೊತೆಗೆ, ಸಲ್ಲಿಕೆಯಾಗಿದ್ದ 184 ಅರ್ಜಿಗಳ ಯಾವುದೇ ರೀತಿಯ ಪರಿಶೀಲನೆ ನಡೆಸದೆ, ಅವುಗಳ ಪೈಕಿ 7 ಮಂದಿಯನ್ನು ನೇಮಕ ಮಾಡಿ 2025ರ ಜನವರಿ 30ರಂದು ಆದೇಶ ಹೊರಡಿಸಿದೆ. ಇದು ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಿದಂತಾಗಲಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ:ಕೋವಿಡ್ 2ನೇ ಅಲೆಯಲ್ಲಿ ದುಬಾರಿ ಬೆಲೆಗೆ ಪಿಪಿಇ ಕಿಟ್ ಪೂರೈಕೆ: ಹೈಕೋರ್ಟ್ಗೆ ವರದಿ ಸಲ್ಲಿಸಿದ ಸರ್ಕಾರ
ರಾಜ್ಯ ಮುಖ್ಯ ಮಾಹಿತಿ ಆಯುಕ್ತರ ಹುದ್ದೆಗೆ ಆಯ್ಕೆಯಾಗಿರುವ ಎ.ಎಂ.ಪ್ರಸಾದ್ ಅವರು ಆ ಹುದ್ದೆಗಾಗಿ ಅರ್ಜಿಯನ್ನು ಸಲ್ಲಿಸಿಯೇ ಇಲ್ಲ. ಆದರೆ, ರಾಜ್ಯ ಮಾಹಿತಿ ಆಯುಕ್ತರ ಹುದ್ದೆಗೆ ಮಾತ್ರ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಯಾವುದೇ ವಿವರಣೆ ಇಲ್ಲದೆ ಅವರನ್ನು ಮುಖ್ಯ ಮಾಹಿತಿ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ. ಅವರ ಜನ್ಮ ಪ್ರಮಾಣ ಪತ್ರದ ಪ್ರಕಾರ 2025ರ ಅಕ್ಟೋಬರ್ 29ಕ್ಕೆ 65 ವರ್ಷ ತಲುಪಲಿದ್ದಾರೆ. ಹೀಗಿರುವಾಗ ಮುಖ್ಯ ಆಯುಕ್ತರ ಹುದ್ದೆಯನ್ನು ಕೇವಲ 9 ತಿಂಗಳು ಮಾತ್ರ ಕಾರ್ಯ ನಿರ್ವಹಣೆ ಮಾಡಲಿದ್ದಾರೆ. ಅಲ್ಲದೆ, ಅವರು ಅರ್ಜಿ ಸಲ್ಲಿಸದ ಹುದ್ದೆಗೆ ನೇಮಕ ಮಾಡಲಾಗಿದ್ದು, ವಿಶೇಷ ಸೌಲಭ್ಯವನ್ನು ನೀಡಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಈ ಬಗ್ಗೆ ಈವರೆಗೂ ರಾಜ್ಯ ಮಾಹಿತಿ ಆಯುಕ್ತರ ಹುದ್ದೆಗೆ ಮೂರು ಬಾರಿ ಅರ್ಜಿ ಸಲ್ಲಿಸಲಾಗಿದೆ. ಆದರೆ, ನಮ್ಮ ಅರ್ಜಿಯನ್ನು ಪರಿಗಣಿಸಿಲ್ಲ. ಆದ್ದರಿಂದ ಸರ್ಕಾರ ನೇಮಕಾತಿ ಆದೇಶವನ್ನು ರದ್ದುಪಡಿಸಿ ಆದೇಶಿಸಬೇಕು. ಶೋಧನಾ ಸಮಿತಿ ರಚನೆ ಮಾಡಿ ಸುಪ್ರೀಂ ಕೋರ್ಟ್ ಆದೇಶದಂತೆ ನೇಮಕ ಪ್ರಕ್ರಿಯೆ ನಡೆಸಬೇಕು ಎಂದು ಅರ್ಜಿದಾರರು ಕೋರಿದ್ದರು.
ಇದನ್ನೂ ಓದಿ:ಇ - ಮೇಲ್ ಮೂಲಕ ನೋಟಿಸ್, ಸಮನ್ಸ್: ವರದಿ ನೀಡಲು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ