ಬೆಂಗಳೂರು:ದೃಷ್ಟಿ ವಿಕಲಚೇತನರ ಅನುಕೂಲಕ್ಕಾಗಿ ರಾಜ್ಯದ ಎಲ್ಲ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಮುಂದಿನ ಎರಡು ವರ್ಷಗಳಲ್ಲಿ ಬಸ್ ಸಂಚಾರದ ವಿವರಗಳ ಪ್ರಕಟಣೆಗಾಗಿ ಆಡಿಯೋ ವ್ಯವಸ್ಥೆ ಕಲ್ಪಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ದೃಷ್ಟಿವಿಶೇಷಚೇತನ ವಕೀಲ ಎನ್. ಶ್ರೇಯಸ್ ಮತ್ತು ಶ್ರೇಯಸ್ ಗ್ಲೋಬಲ್ ಟ್ರಸ್ಟ್ ಫಾರ್ ಸೋಷಿಯಲ್ ಕಾಸ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಕೃತಿಕಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರಿದ್ದ ವಿಭಾಗೀಯಪೀಠ ಈ ಆದೇಶ ನೀಡಿದೆ.
ವಿವಿಧ ಬಸ್ ನಿಲ್ದಾಣಗಳಲ್ಲಿ ಬಸ್ಗಳ ಆಗಮನ ಮತ್ತು ನಿರ್ಗಮನ ಸ್ಥಳಗಳಲ್ಲಿ ದೃಷ್ಟಿ ವಿಶೇಷಚೇತನರೂ ಸೇರಿ ಎಲ್ಲ ಬಗೆಯ ದಿವ್ಯಾಂಗರ ಅನುಕೂಲಕ್ಕಾಗಿ ಬಸ್ಗಳಲ್ಲಿ ಆಡಿಯೋ ಅನೌನ್ಸ್ಮೆಂಟ್ ಸಿಸ್ಟಂ (ಎಎಎಸ್) ಕಾರ್ಯನಿರ್ವಹಿಸುವಂತೆ ಮಾಡಬೇಕು ಎಂದು ರಾಜ್ಯ ಸಾರಿಗೆ ಸಂಸ್ಥೆಗಳಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಈ ಸಲುವಾಗಿ ಸುಧಾರಿತ ತಾಂತ್ರಿಕ ಉಪಕರಣಗಳು ಮತ್ತು ಸೌಲಭ್ಯಗಳನ್ನು ಪರಿಚಯಿಸಲು ರಾಜ್ಯ ಸರ್ಕಾರ ಮತ್ತು ಅದರ ಸಾರಿಗೆ ನಿಗಮಗಳಿಗೆ ನಿರ್ದೇಶನ ನೀಡಿರುವ ನ್ಯಾಯಾಲಯ, ಈ ಯೋಜನೆಯು ನಿರಂತರವಾಗಿ ಕಾರ್ಯನಿರ್ವಹಿಸಲು ಸ್ಥಳೀಯ ಅಧಿಕಾರಿಗಳು ಸಾಕಷ್ಟು ಹಣವನ್ನು ಬಜೆಟ್ನಲ್ಲಿ ಮೀಸಲಿಡಬೇಕು ಎಂದು ಆದೇಶಿಸಿದೆ.