ಕರ್ನಾಟಕ

karnataka

ETV Bharat / state

ಬಿಟ್‌ಕಾಯಿನ್: ವಿಚಾರಣೆ ಮುಂದೂಡಲು ಹೈಕೋರ್ಟ್ ನಿರಾಕರಣೆ, ಅರ್ಜಿ ಹಿಂಪಡೆದ ಆರೋಪಿ - Bitcoin Case - BITCOIN CASE

ಎಫ್ಐಆರ್ ಮತ್ತು ಮುಂದಿನ ಕಾನೂನು ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಬಿಟ್‌ಕಾಯಿನ್ ಹಗರಣದ ಆರೋಪಿಯಾದ ಪೊಲೀಸ್ ಅಧಿಕಾರಿ ಶ್ರೀಧರ್ ಪೂಜಾರ್ ಹಿಂಪಡೆದಿದ್ದಾರೆ.

ಹೈಕೋರ್ಟ್
ಹೈಕೋರ್ಟ್ (ETV Bharat)

By ETV Bharat Karnataka Team

Published : Sep 5, 2024, 7:14 AM IST

ಬೆ‌ಂಗಳೂರು: ಬಿಟ್‌ಕಾಯಿನ್ ಹಗರಣದ ಆರೋಪಿಯಾಗಿರುವ ಪೊಲೀಸ್ ಅಧಿಕಾರಿ ಶ್ರೀಧರ್ ಕೆ.ಪೂಜಾರ್ ವಿರುದ್ಧ ಕಾಟನ್‌ಪೇಟೆ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮುಂದೂಡಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿತು. ಹೀಗಾಗಿ, ತಮ್ಮ ಅರ್ಜಿಯನ್ನು ಅಧಿಕಾರಿ ಹಿಂಪಡೆದರು.

ಬೆಂಗಳೂರಿನ ಕಾಟನ್‌ಪೇಟೆ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ಮತ್ತು ಮುಂದಿನ ಕಾನೂನು ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ಶ್ರೀಧರ್ ಪೂಜಾರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ನಡೆಸಿತು.

ವಿಚಾರಣೆಯಲ್ಲಿ ಅರ್ಜಿದಾರರ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲರು, ಮೊದಲನೇ ಪ್ರಕರಣದಲ್ಲಿ ಪೂಜಾರ್​ಗೆ ಜಾಮೀನು ದೊರೆತಿದೆ. ಆ ನಂತರ ಕಾಟನ್‌ಪೇಟೆ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿದ್ದಾರೆ. ಈ ಭಯದಿಂದ ನಾವು ಮಧ್ಯಂತರ ಆದೇಶ ಪಡೆದಿದ್ದೇವೆ. ಸದ್ಯ, ಅರ್ಜಿ ವಿಚಾರಣೆ ಮುಂದೂಡಬೇಕು ಎಂದು ಕೋರಿದರು.

ಇದಕ್ಕೆ ನ್ಯಾಯಪೀಠ, ಅರ್ಜಿಯನ್ನು ಯಾವುದೇ ಕಾರಣಕ್ಕೂ ಮುಂದೂಡಲಾಗದು. ಊರ್ಜಿತತ್ವದ ಆಧಾರದಲ್ಲಿ ವಾದ ಮಂಡಿಸಬೇಕು. ಇಲ್ಲವಾದಲ್ಲಿ ದುರುದ್ದೇಶಪೂರಿತ ಕ್ರಮ ಕೈಗೊಳ್ಳಬಾರದು ಎಂದು ಮಾಡಿರುವ ಮಧ್ಯಂತರ ಆದೇಶ ತೆರವು ಮಾಡಲಾಗದು ಎಂದು ಹೇಳಿತು. ಇದಕ್ಕೆ ವಕೀಲರು, ಈ ನ್ಯಾಯಾಲಯದ ಮುಂದೆ ಎತ್ತಿರುವ ವಾದಗಳನ್ನು ಮುಕ್ತವಾಗಿರಿಸಿ ಅರ್ಜಿ ಹಿಂಪಡೆಯಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಆಗ ನ್ಯಾಯಾಲಯವು, ಹಾಲಿ ಅರ್ಜಿಗೆ ಸಂಬಂಧಿಸಿದಂತೆ ಅರ್ಜಿದಾರರು ಈಗ ಎತ್ತಿರುವ ವಾದಗಳನ್ನು ಮುಕ್ತವಾಗಿರಿಸಿ, ಸೂಕ್ತ ಸಂದರ್ಭದಲ್ಲಿ ಸೂಕ್ತ ಪರಿಹಾರ ಕೋರಲು ಸ್ವತಂತ್ರರಾಗಿರುತ್ತಾರೆ ಎಂದು ತಿಳಿಸಿ ಅರ್ಜಿಯನ್ನು ಇತ್ಯರ್ಥಪಡಿಸಿತು.

ಪ್ರಕರಣದ ಹಿನ್ನೆಲೆ:ಡಾರ್ಕ್ ನೆಟ್ ಮೂಲಕ ಮಾದಕ ವಸ್ತು ಖರೀದಿಸಿದ ಆರೋಪದ ಮೇಲೆ 2020ರ ನವೆಂಬರ್​ನಲ್ಲಿ ಶ್ರೀಕಿ ಎಂಬಾತನನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದರು. ಆಗ ಸಿಸಿಬಿಯಲ್ಲಿ ಪೂಜಾರ್ ತನಿಖಾಧಿಕಾರಿಯಾಗಿದ್ದರು. ಶ್ರೀಕಿ ಬಂಧನದೊಂದಿಗೆ ಕರ್ನಾಟಕದಲ್ಲಿ ಸೈಬರ್ ಅಪರಾಧಗಳು ಬೆಳಕಿಗೆ ಬಂದಿದ್ದವು. ಇದರಲ್ಲಿ 2019ರ ಜುಲೈ-ಆಗಸ್ಟ್ ಅವಧಿಯಲ್ಲಿ ಕರ್ನಾಟಕ ಸರ್ಕಾರದ ಇ-ಆಡಳಿತ ಘಟಕದ 11.5 ಕೋಟಿ ರೂಪಾಯಿ ದೋಚಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಈ ಪ್ರಕರಣದಲ್ಲಿ 10ನೇ ಆರೋಪಿಯಾದ ಶ್ರೀಕಿಯನ್ನು ಅಕ್ರಮವಾಗಿ ವಶದಲ್ಲಿಟ್ಟುಕೊಂಡು ಬಿಟ್ ಕಾಯಿನ್ ವರ್ಗಾವಣೆ, ಪಾಸ್ವರ್ಡ್ ಬದಲಾವಣೆ ಇತ್ಯಾದಿ ಕೃತ್ಯಕ್ಕೆ ಬಳಕೆ ಮಾಡಿದ ಆರೋಪ ಪೂಜಾರ್ ಮತ್ತಿತರರ ವಿರುದ್ಧ ಕೇಳಿ ಬಂದಿತ್ತು.

ಇದನ್ನೂ ಓದಿ: ಮೆಟ್ರೋ ಕಾಮಗಾರಿಗೆ ಅಡ್ಡಿಯಾದ 41 ಮರಗಳ ಕಡಿಯಲು ಅನುಮತಿ ನೀಡಿದ ಹೈಕೋರ್ಟ್ - High Court allowed cutting tree

ABOUT THE AUTHOR

...view details