ಬೆಂಗಳೂರು : ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (ಕೆಟಿಪಿಪಿ) ನಿಯಮಗಳಿಗೆ ವಿರುದ್ಧವಾಗಿ ಕರೆದಿದ್ದ 2023-24 ನೇ ಸಾಲಿನಲ್ಲಿ ಗಂಗಾ ಕಲ್ಯಾಣ ಯೋಜನೆಯಲ್ಲಿ ಕೊಳವೆಬಾವಿ ಕೊರೆಯಲು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಕರೆದಿದ್ದ ಟೆಂಡರ್‌ನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ.
ಟೆಂಡರ್‌ನಲ್ಲಿ ಕೆಲವು ಷರತ್ತುಗಳನ್ನು ಕೈಬಿಡಲಾಗಿದೆ ಎಂದು ಆರೋಪಿಸಿ ಬೆಂಗಳೂರಿನ ಮಾರುತಿ ಬೋರ್‌ವೆಲ್ ಆಪರೇಟರ್ ಚಿನ್ನಪ್ಪರೆಡ್ಡಿ ಮತ್ತಿತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಟೆಂಡರ್ ರದ್ದುಪಡಿಸಿ ಆದೇಶ ಮಾಡಿದೆ.
ಅಲ್ಲದೆ, ಕೆಟಿಪಿಪಿ ಕಾಯಿದೆ ಜಾರಿಗೆ ಸಂಬಂಧಿಸಿದಂತೆ ಸರ್ಕಾರವೇ ಹೊರಡಿಸಿರುವ ನಿಯಮ 27 ರಲ್ಲಿ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗಿಯಾಗುವವರ ಸೇವಾ ಅನುಭವ ಉಲ್ಲೇಖಿಸಬೇಕು ಎಂಬ ನಿಯಮವಿದೆ. ಆದರೆ, ಸೇವಾ ಅನುಭವವನ್ನು ಟೆಂಡರ್ಗೆ ತೆಗೆದು ಹಾಕಿರುವುದು ನಿಯಮ ಬಾಹಿರವಾಗಿದೆ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.
ಜೊತೆಗೆ, ನಿಗಮದ ಕ್ರಮ ಡೆಂಡರ್ ಡಾಕ್ಯೂಮೆಂಟ್ಸ್ ನಿಯಮಗಳಿಗೆ ವಿರುದ್ಧವಾಗಿದೆ. ಟೆಂಟರ್ ಪ್ರಕ್ರಿಯೆಯಲ್ಲಿ ಸೇವಾ ಅನುಭವವನ್ನು ತೆಗೆದು ಹಾಕಿರುವುದರಿಂದ ಗುತ್ತಿಗೆ ಪಡೆಯುವವರ ಅನುಭವವನ್ನು ಕಸಿದುಕೊಂಡಂತಾಗಲಿದೆ. ಜೊತೆಗೆ, ಯೋಜನೆಯನ್ನು ಪಾತಾಳಕ್ಕೆ ತಳ್ಳುವ ಸಾಧ್ಯತೆಯಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಹೇಳಿದೆ.