ಬೆಂಗಳೂರು: ಮಗನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಆರೋಪದಲ್ಲಿ ಮಹಿಳೆಯೊಬ್ಬರನ್ನು ಸೀಮೆಎಣ್ಣೆ ಹಾಕಿ ಬೆಂಕಿ ಹಚ್ಚಿ ಕೊಲೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಾಧಾರಗಳ ಕೊರತೆಯ ಹಿನ್ನೆಲೆಯಲ್ಲಿ ಮೂವರು ಆರೋಪಿಗಳಿಗೆ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ.
ವಿಚಾರಣಾ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಿದ್ದ ನಿಂಗಣ್ಣ ಮತ್ತು ನಾಗಮ್ಮ ದಂಪತಿ ಮತ್ತು ಮಗ ಎಂ.ಎನ್.ಪ್ರಸಾದ ಎಂಬವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ರೀನಿವಾಸ ಹರೀಶ್ ಕುಮಾರ್ ಮತ್ತು ನ್ಯಾಯಮೂರ್ತಿ ಎಸ್.ರಾಚಯ್ಯ ಅವರಿದ್ದ ಪೀಠ ಈ ಆದೇಶ ನೀಡಿದೆ. ಅಲ್ಲದೆ, ಪ್ರಕರಣ ಸಂಬಂಧ ಪ್ರಾಸಿಕ್ಯೂಷನ್ ಸಲ್ಲಿಸಿರುವ ಸಾಕ್ಷ್ಯಾಧಾರಗಳು ಸಂಶಯಾಸ್ಪಾದವಾಗಿವೆ. ಸತ್ಯಾಂಶವನ್ನು ಹೊರಗೆಳೆಯುವಲ್ಲಿ ಪ್ರಾಸಿಕ್ಯೂಷನ್ ಸಂಪೂರ್ಣ ವಿಫಲವಾಗಿದೆ ಎಂದು ತಿಳಿಸಿದೆ.
ವಿಚಾರಣಾ ನ್ಯಾಯಾಲಯವು ವಿಚಾರಣೆ ವೇಳೆ ಸಾಕ್ಷ್ಯಾಧಾರಗಳು ಆರೋಪಕ್ಕೆ ಸಂಬಂಧಿಸಿದಂತೆ ಸೂಕ್ತ ಸಹಕಾರ ನೀಡಿಲ್ಲ ಎಂದು ತಿಳಿಸಿದ್ದಾರೆ. ಆದರೆ, ಪ್ರತಿವಾದಿಗಳು ಕ್ರಿಮಿನಲ್ ನ್ಯಾಯಶಾಸ್ತ್ರದ ತತ್ವದ ವಿರುದ್ಧವಾದ ತನ್ನ ಪ್ರಕರಣವನ್ನು ಸಾಬೀತುಪಡಿಸಬೇಕಿತ್ತು ಎಂದು ಪೀಠ ಹೇಳಿದೆ. ಸರ್ಕಾರಿ ವಕೀಲರು(ಪಬ್ಲಿಕ್ ಪ್ರಾಸಿಕ್ಯೂಟರ್) ವಾದದಲ್ಲಿ ಆರೋಪಿಗಳು ಸಾಕ್ಷಿಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಹೇಳುವ ಮೂಲಕ ಸಾಕ್ಷಿಗಳ ಅಪಖ್ಯಾತಿಗೊಳಿಸಲು ವ್ಯರ್ಥ ಪ್ರಯತ್ನ ಮಾಡಿದ್ದಾರೆ ಎಂದು ಪೀಠ ಅಭಿಪ್ರಾಯ ಪಟ್ಟಿದ್ದಾರೆ. ಹೀಗಾಗಿ ಮೇಲ್ಮನವಿಯನ್ನು ಪುರಸ್ಕರಿಸುತ್ತಿದ್ದು, ಆರೋಪಿಗಳನ್ನು ನಿರಪರಾಧಿಗಳು ಎಂಬುದಾಗಿ ಘೋಷಿಸಿರುವುದಾಗಿ ಪೀಠ ತಿಳಿಸಿದೆ.
ಪ್ರಕರಣದ ಹಿನ್ನೆಲೆ:ಪ್ರಕರಣದಲ್ಲಿ ಮೂರನೇ ಆರೋಪಿಯಾಗಿರುವವರು ಮೃತ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು. ಈ ಸಂಬಂಧ ಮೂರನೇ ಆರೋಪಿಯ ತಂದೆ-ತಾಯಿ(ಪ್ರಕರಣದ ಒಂದನೇ ಮತ್ತು ಎರಡನೇ ಆರೋಪಿಗಳು) ಗೊತ್ತಾಗಿ ಮಹಿಳೆಗೆ ಎಚ್ಚರಿಕೆಯನ್ನೂ ನೀಡಿದ್ದರು. ಈ ನಡುವೆ ಆರೋಪಿಗಳು ಸಂತ್ರಸ್ಥೆಯನ್ನು ಮನೆಗೆ ಕರೆದು ಬೆಂಕಿ ಹಚ್ಚಿದ್ದರು. ಬೆಂಕಿಗೆ ಶೇ.90 ರಷ್ಟು ಸುಟ್ಟಗಾಯಗಳಿಂದ ಬಳಲುತ್ತಿದ್ದ ಅವರು ಒಂದು ವಾರದ ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ವಿಚಾರಣಾ ನ್ಯಾಯಾಲು, ಘಟನೆಗೆ ಪ್ರತ್ಯಕ್ಷ ಸಾಕ್ಷ್ಯಗಳಿಲ್ಲಿದ್ದರೂ, ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ 15 ಸಾವಿರ ರೂ.ಗಳ ದಂಡ ವಿಧಿಸಿ ಆದೇಶಿಸಿತ್ತು.
ಮೇಲ್ಮನವಿದಾರರು ತಮ್ಮ ಅರ್ಜಿಯಲ್ಲಿ, ಘಟನೆ ಸಂಬಂಧ ಯಾವುದೇ ಪ್ರತ್ಯಕ್ಷ ಸಾಕ್ಷಿಗಳು ಇಲ್ಲವಾಗಿದೆ. ಆದರೂ ಪ್ರತಿಕೂಲ ಸಾಕ್ಷ್ಯಗಳನ್ನು ಪರಿಗಣಿಸಿ ಶಿಕ್ಷೆ ಪ್ರಕಟಿಸಿದೆ. ವಿಚಾರಣಾ ನ್ಯಾಯಾಲಯ ಪ್ರಾಸಿಕ್ಯೂಷನ್ನ ನೀಡಿದ ದಾಖಲೆಗಳನ್ನು ಪರಿಗಣಿಸಿ ಸಂಶಯಾತ್ಮಗವಾಗಿದ್ದರೂ ಎಲ್ಲಾ ಆರೋಪಿಗಳಿಗೆ ಶಿಕ್ಷೆ ವಿಧಿಸಿ ಆದೇಶಿಸಿದೆ ಎಂದು ತಿಳಿಸಿದ್ದರು. ಸರ್ಕಾರದ ಪರ ವಕೀಲರು ವಾದ ಮಂಡಿಸಿ, ಪ್ರತ್ಯಕ್ಷದರ್ಶಿ ಸಾಕ್ಷಿಗಳನ್ನು ಕರೆತರುವುದಕ್ಕೆ ಸಾಕಷ್ಟು ಪ್ರಯತ್ನ ಮಾಡಲಾಗಿದೆ. ಆದರೆ, ಆವರು ಸತ್ಯವನ್ನು ನ್ಯಾಯಾಧೀಶರ ಮುಂದೆ ಹೇಳುವುದರಿಂದ ತಪ್ಪಿಸಿಕೊಂಡಿದ್ದಾರೆ. ಅಲ್ಲದೆ, ಘಟನೆ ಬಳಿಕ ಗ್ರಾಮದ ಪಂಚಾಯತ್ ನಡೆದಿದ್ದು, ಸಾಕ್ಷ್ಯಗಳಿಗೆ ಒಂದಷ್ಟು ಹಣ ಕೊಟ್ಟು ಹೇಳಿಕೆಗಳನ್ನು ನೀಡದಂತೆ ಮಾಡಲಾಗಿದೆ. ಅಲ್ಲದೆ, ಸಾಕ್ಷಿಯ ಮಗನಿಗೆ ಉಚಿತ ಶಿಕ್ಷಣ ಕೊಡಿಸುವುದಾಗಿ ಭರವಸೆ ನೀಡಲಾಗಿದೆ. ಇದೇ ಕಾರಣದಿಂದ ಸಾಕ್ಷಿಧಾರರ ಘಟನೆಯ ವಿರುದ್ಧದ ಹೇಳಿಕೆಗಳನ್ನು ನೀಡುವಂತಾಗಿತ್ತು ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು. ಅರ್ಜಿದಾರರ ಪರ ಬಿ.ವಿ. ಪಿಂಟೋ ಹಾಗೂ ಸಿ.ಎನ್. ರಾಜು ಅವರು ವಾದ ಮಂಡಿಸಿದ್ದರು.
ಇದನ್ನೂ ಓದಿ:ಶಾಸಕ ವಸಂತ್ ಆಸ್ನೋಟಿಕರ್ ಕೊಲೆ ಕೇಸ್; ಆರೋಪಿಗೆ ವಿಧಿಸಿದ್ದ ಜೀವಾವಧಿ ಶಿಕ್ಷೆ ಎತ್ತಿಹಿಡಿದ ಹೈಕೋರ್ಟ್ - Vasant Asnotikar Murder Case