ಬೆಂಗಳೂರು:ನಮ್ಮ ಮೆಟ್ರೋ ಯೋಜನೆಯ ಎರಡನೇ ಹಂತದ ಎಚ್‌ಎಸ್‌ಆರ್ ಲೇಔಟ್ ಮೆಟ್ರೋ ರೈಲು ನಿಲ್ದಾಣ ನಿರ್ಮಾಣಕ್ಕೆ ಅಡ್ಡಿಯಾಗಿರುವ 41 ಮರಗಳನ್ನು ಕತ್ತರಿಸಲು ಹಾಗೂ 20 ಮರಗಳನ್ನು ಸ್ಥಳಾಂತರಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್)ಕ್ಕೆ ಹೈಕೋರ್ಟ್ ಷರತ್ತಿನ ಅನುಮತಿ ನೀಡಿದೆ.
ಕರ್ನಾಟಕ ಮರಗಳ ಸಂರಕ್ಷಣಾ ಕಾಯ್ದೆ-1976 ಅನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ನಿರ್ದೇಶನ ನೀಡುವಂತೆ ಕೋರಿ ದತ್ತಾತ್ರೇಯ ಟಿ.ದೇವರೆ ಹಾಗೂ ಬೆಂಗಳೂರು ಎನ್ರಾವಿರಾನ್ಮೆಂಟ್ ಟ್ರಸ್ಟ್ 2018 ರಲ್ಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾ.ಕೆ.ವಿ. ಅರವಿಂದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಅನುಮತಿ ನೀಡಿದೆ.
ವಿಚಾರಣೆ ವೇಳೆ, ಬಿಎಂಆರ್‌ಸಿಎಲ್ ಪರ ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ, ಆಗರದಿಂದ ಇಬ್ಬಲೂರು ಮಾರ್ಗದ ಎಚ್‌ಎಸ್‌ಆರ್ ಲೇಔಟ್ ಮೆಟ್ರೋ ರೈಲು ನಿಲ್ದಾಣದ ಆಗಮನ ಮತ್ತು ನಿರ್ಗಮನ ಭಾಗದಲ್ಲಿ ಬರುವ 20 ಮರಗಳನ್ನು ಸ್ಥಳಾಂತರಿಸಲು, 41 ಮರಗಳನ್ನು ತೆರವುಗೊಳಿಸಲು ಅನುಮತಿ ನೀಡಿ ಮರ ಅಧಿಕಾರಿ ಹಾಗೂ ಬಿಬಿಎಂಪಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು 2024 ರ ಜುಲೈ 20 ರಂದು ಅಧಿಕೃತ ಜ್ಞಾಪನಾ ಹೊರಡಿಸಿದ್ದಾರೆ ಎಂದು ನ್ಯಾಯಾಲಯಕ್ಕೆ ವಿವರಿಸಿದರು.
ಅಂತೆಯೇ ತೆರವುಗೊಳಿಸಲು ಅನುಮತಿಸಿರುವ 41 ಮರಗಳ ಪೈಕಿ 21 ಮರಗಳು ಯೋಜನಾ ಪ್ರದೇಶದಲ್ಲಿ ಬರಲಿವೆ. ಇನ್ನುಳಿದ 20 ಮರಗಳು ಹೊರವರ್ತುಲ ರಸ್ತೆಯ ಎಡ ಮತ್ತು ಬಲಬದಿ ಬರಲಿವೆ. ಮರ ಅಧಿಕಾರಿ ಹಾಗೂ ಬಿಬಿಎಂಪಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಹೊರಡಿಸಿರುವ ಅಧಿಕೃತ ಜ್ಞಾಪನಾ (ಅಫಿಷಿಯಲ್ ಮೆಮೊರಾಂಡಮ್) ಆಧರಿಸಿ ಮುಂದುವರಿಯಲು ಬಿಎಂಆರ್‌ಸಿಎಲ್‌ಗೆ ಅನುಮತಿ ನೀಡಬೇಕು ಎಂದು ಕೋರಿದರು.