ಬೆಂಗಳೂರು : ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಿಕ್ಷಣ ಸಂಸ್ಥೆಗಳಲ್ಲಿ 5, 8, 9 ಮತ್ತು 11ನೇ ತರಗತಿಗಳಿಗೆ ಬೋರ್ಡ್ ಮಟ್ಟದ ಮೌಲ್ಯಾಂಕನ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅನುಮತಿ ನೀಡಿ ಆದೇಶಿಸಿದೆ.
ಬೋರ್ಡ್ ಮಟ್ಟದ ಪರೀಕ್ಷೆಗಳನ್ನು ನಡೆಸುವ ಸಂಬಂಧ ಸರ್ಕಾರ ಹೊರಡಿಸಿದ್ದ ಸುತ್ತೋಲೆಗಳನ್ನು ರದ್ದುಪಡಿಸಿದ್ದ ಏಕ ಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಕೆ.ಸೋಮಶೇಖರ್ ಮತ್ತು ಕೆ. ರಾಜೇಶ್ ರೈ ಅವರ ನೇತೃತ್ವದ ಪೀಠವು ಸುದೀರ್ಘ ಕಾಲ ವಿಚಾರಣೆ ನಡೆಸಿ ಆದೇಶ ಕಾಯ್ದಿಸಿರಿಸಿದ್ದು, ಇಂದು ಪ್ರಕಟಿಸಿದೆ.
ಬೋರ್ಡ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ಹೊರಡಿಸಿದ್ದ ಎರಡು ಸುತ್ತೋಲೆಗಳನ್ನು ರದ್ದುಪಡಿಸಿದ್ದ ಏಕಸದಸ್ಯ ಪೀಠದ ತೀರ್ಪನ್ನು ವಿಭಾಗೀಯ ಪೀಠ ರದ್ದು ಮಾಡಿತು. ರಾಜ್ಯ ಸರ್ಕಾರ ಬೋರ್ಡ್ ಪರೀಕ್ಷೆ ನಡೆಸಬಹುದು. ಪರೀಕ್ಷೆ ಪ್ರಕ್ರಿಯೆ ಸ್ಥಗಿತಗೊಂಡ ಹಂತದಿಂದಲೇ ಇದನ್ನು ಮುಂದುವರಿಸಬೇಕು. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಬೋರ್ಡ್ ಪರೀಕ್ಷೆ ನಡೆಸಲು ಸಂಬಂಧಪಟ್ಟವರೊಂದಿಗೆ ಸಮಾಲೋಚಿಸಬೇಕು ಎಂದು ಸರ್ಕಾರಕ್ಕೆ ಪೀಠ ಸೂಚಿಸಿದೆ.
ಜತೆಗೆ, ಈ ಆದೇಶಕ್ಕೆ ತಡೆಯಾಜ್ಞೆ ನೀಡಬೇಕು ಎಂದು ರುಪ್ಸಾ ಹಾಗೂ ಅವರ್ಸ್ ಸ್ಕೂಲ್ ಸಲ್ಲಿಸಿದ ಮನವಿಯನ್ನೂ ಇದೇ ವೇಳೆ ಪೀಠ ತಿರಸ್ಕರಿಸಿದೆ. ಅರ್ಜಿಯ ಸಂಬಂಧ ಈ ಹಿಂದೆ ನಡೆದಿದ್ದ ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ರಾಜ್ಯ ಪಠ್ಯಕ್ರಮ ಅಳವಡಿಸಿರುವ ಎಲ್ಲ ಮಕ್ಕಳಿಗೂ ಸಮಾನ ಶಿಕ್ಷಣ ವ್ಯವಸ್ಥೆ ಬೇಕಾಗಿದೆ. ಆದ್ದರಿಂದ ಶಿಕ್ಷಣ ಇಲಾಖೆ ಬೋರ್ಡ್ ಪರೀಕ್ಷೆಗೆ ಮುಂದಾಗಿದೆ. ಅಲ್ಲದೇ, ಪರೀಕ್ಷೆಗಳು ತಮಾಷೆಯಲ್ಲ. ಮಕ್ಕಳು ಹಲವು ದಿನಗಳಿಂದ ಸಿದ್ದತೆ ಮಾಡಿಕೊಂಡಿರುತ್ತಾರೆ. ಆದರೆ, ಪರೀಕ್ಷಾ ದಿನಾಂಕಗಳನ್ನು ಮತ್ತೆ ಮತ್ತೆ ಬದಲಾವಣೆ ಮಾಡುವುದರಿಂದ ವಿದ್ಯಾರ್ಥಿಗಳಿಗೆ ತೀವ್ರ ತರದ ಗೊಂದಲಗಳಿಗೆ ಕಾರಣವಾಗುತ್ತಿದೆ ಎಂದರು.
ಜೊತೆಗೆ ರಾಜ್ಯ ಶಿಕ್ಷಣ ಇಲಾಖೆಗೆ ಆರ್ಟಿಐ ಕಾಯಿದೆಯಡಿ ಪರೀಕ್ಷೆಗಳನ್ನು ಮಾಡುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ. ಕಳೆದ ವರ್ಷವೂ ಆರ್ಟಿಐ ಕಾಯಿದೆಯಡಿ ಸುತ್ತೋಲೆ ಹೊರಡಿಸಿ ಪರೀಕ್ಷೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಜೊತೆಗೆ ಶಿಕ್ಷಣ ಇಲಾಖೆ ಸಮವರ್ತಿ ಪಟ್ಟಿಗೆ ಸೇರಿದ್ದು, ಈ ಸಂಬಂಧ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಅವಕಾಶವಿದೆ ಎಂದಿತ್ತು ಎಂದು ತಿಳಿಸಿದರು.
ಅರ್ಜಿದಾರರ ಪರ ವಕೀಲರು (ಮೇಲ್ಮನವಿಯಲ್ಲಿ ಪ್ರತಿವಾದಿಗಳು), ರಾಜ್ಯ ಸರ್ಕಾರವು ಬೋರ್ಡ್ ಪರೀಕ್ಷೆಗಳನ್ನು ನಡೆಸುವುದಕ್ಕೆ ಮುಂದಾಗಿರುವುದು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆಗೆ ತದ್ವಿರುದ್ಧವಾಗಿದೆ. ಈ ರೀತಿಯಲ್ಲಿ ಪರೀಕ್ಷೆಗಳನ್ನು ನಡೆಸುವುದು ಕಾನೂನುಬಾಹಿರ ಎಂದು ವಿವರಿಸಿದ್ದರು.
ಆದೇಶದಲ್ಲೇನಿದೆ?: 5, 8, 9 ಮತ್ತು 11 ನೇ ತರಗತಿಗಳ ಪರೀಕ್ಷಾ ಮಾದರಿಯನ್ನು ಬದಲಾಯಿಸುವುದು ಕೇವಲ ರಾಜ್ಯ ಸರ್ಕಾರದಿಂದ ನಿರ್ಧರಿಸುವ ವಿಷಯವಲ್ಲ. ಮುಂದಿನ ಶೈಕ್ಷಣಿಕ ವರ್ಷಗಳಲ್ಲಿ ಪರೀಕ್ಷೆಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡುವುದಕ್ಕಾಗಿ ಪರೀಕ್ಷಾ ಮಾದರಿಯಲ್ಲಿ ಬದಲಾವಣೆ ಕುರಿತು ಸರ್ಕಾರವು ಎಲ್ಲಾ ಪಾಲುದಾರರೊಂದಿಗೆ ಚರ್ಚಿಸಬೇಕು. ಪರೀಕ್ಷಾ ಮಾದರಿ ಬದಲಾದರೆ ಮಕ್ಕಳನ್ನು ಪರೀಕ್ಷೆಗೆ ಸಜ್ಜುಗೊಳಿಸುವುದು ಹಾಗೂ ಅವರ ಯೋಗಕ್ಷೇಮ ಮತ್ತು ಬೆಳವಣಿಗೆಗೆ ಅಡ್ಡಿಯಾಗುತ್ತದೆ ಎಂಬ ಕೆಲವು ಅನುದಾನರಹಿತ ಖಾಸಗಿ ಶಾಲೆಗಳ ಸಂಘಗಳ ವಾದವನ್ನು ತಿರಸ್ಕರಿಸಿದ ಪೀಠ, ಬೋರ್ಡ್ ಪರೀಕ್ಷೆ ಕುರಿತು ಪೋಷಕರಿಗೆ ಮುಂಚಿತವಾಗಿ ತಿಳಿಸಬೇತ್ತು ಎಂದು ಆದೇಶದಲ್ಲಿ ತಿಳಿಸಿದೆ.