ಕರ್ನಾಟಕ

karnataka

ETV Bharat / state

ರೇಣುಕಾಸ್ವಾಮಿ ಸಂದೇಶಗಳು ಸಮಾಜಕ್ಕೆ ಅಪಾಯಕಾರಿ; ದರ್ಶನ್ ಪರ ವಕೀಲರ ವಾದ - ಗುರುವಾರಕ್ಕೆ ವಿಚಾರಣೆ ಮುಂದೂಡಿಕೆ

ರೇಣುಕಾಸ್ವಾಮಿ ಕೊಲೆ ಪ್ರಕರಣದ ಎರಡನೇ ಆರೋಪಿ ನಟ ದರ್ಶನ್ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನ ಹೈಕೋರ್ಟ್​ ನವೆಂಬರ್ 29ಕ್ಕೆ ಮುಂದೂಡಿದೆ.

high-court
ಹೈಕೋರ್ಟ್ (ETV Bharat)

By ETV Bharat Karnataka Team

Published : Nov 26, 2024, 7:56 PM IST

Updated : Nov 26, 2024, 8:36 PM IST

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕಳುಹಿಸಿರುವ ಸಂದೇಶಗಳು ವ್ಯವಸ್ಥಿತ ಸಮಾಜಕ್ಕೆ ಅಪಾಯಕಾರಿಯಾಗಿವೆ. ಈ ರೀತಿ ಸಂದೇಶಗಳು ಹಲವು ಮಹಿಳೆಯರಿಗೆ ಕಳುಹಿಸಿದ್ದು, ಸಮಾಜದಲ್ಲಿ ಮಹಿಳೆಯರನ್ನು ಗೌರವಿಸಲು ಬಯಸದ ವ್ಯಕ್ತಿಯನ್ನು ಈ ಪ್ರಕರಣದಲ್ಲಿ ವೈಭವೀಕರಿಸಿ ರಾಷ್ಟ್ರ ನಾಯಕರನ್ನಾಗಿ ಮಾಡಲಾಗಿದೆ. ಆದರೆ, ಈ ಬೆಳವಣಿಗೆ ಕೊಲೆಗೆ ಕಾರಣ ಎಂದು ಹೇಳಲಾಗುವುದಿಲ್ಲ ಎಂದು ದರ್ಶನ್ ಪರ ವಕೀಲರು ಹೈಕೋರ್ಟ್‌ಗೆ ವಿವರಿಸಿದರು.

ಕೊಲೆ ಪ್ರಕರಣದ ಎರಡನೇ ಆರೋಪಿ ನಟ ದರ್ಶನ್ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನವೆಂಬರ್ 28ಕ್ಕೆ(ಗುರುವಾರ) ಮುಂದೂಡಿದೆ. ಜಾಮೀನು ಕೋರಿ ದರ್ಶನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ನ್ಯಾಯಪೀಠ, ಮಂಗಳವಾರ ಸುಮಾರು ಮೂರು ತಾಸು ವಾದ ಆಲಿಸಿತು. ಬಳಿಕ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿ. ವಿ ನಾಗೇಶ್, ಪ್ರಕರಣದಲ್ಲಿ ಮೃತರಾಗಿರುವ ರೇಣುಕಾಸ್ವಾಮಿ ಅವರು ಕಳುಹಿಸಿರುವ ಸಂದೇಶಗಳು ವ್ಯವಸ್ಥಿತ ಸಮಾಜಕ್ಕೆ ಅಪಾಯಕಾರಿಯಾಗಿವೆ. ಅಲ್ಲದೇ, ರೇಣುಕಾಸ್ವಾಮಿಗೆ ಮಹಿಳೆಯರ ಬಗ್ಗೆ ಕಿಂಚಿತ್ತೂ ಗೌರವವಿಲ್ಲ. ಅವರೊಬ್ಬರು ಕಾನೂನು ಬಾಹಿರ ವ್ಯಕ್ತಿಯಾಗಿದ್ದಾರೆ ಎಂದು ವಾದ ಮಂಡಿಸಿದರು.

ದರ್ಶನ್‌ರನ್ನು ವಿಲನ್ ರೀತಿಯಲ್ಲಿ ಕಾಣಲಾಗುತ್ತಿದೆ: ಅಲ್ಲದೇ, ನಮ್ಮ ಸಮಾಜದಲ್ಲಿ ಮಹಿಳೆಯರನ್ನು ದೇವರುಗಳಾದ ಸರಸ್ವತಿ, ಲಕ್ಷ್ಮಿ, ಅನ್ನಪೂರ್ಣೇಶ್ವರಿ ಎಂದು ಕರೆಯುತ್ತೇವೆ. ಅರ್ಜಿದಾರರ ಗೆಳತಿ ಪವಿತ್ರಾಗೌಡರನ್ನು ಮಂಚಕ್ಕೆ ಕರೆದಿದ್ದಾರೆ. ಸಮಾಜದಲ್ಲಿ ಮಹಿಳೆಯರನ್ನು ಗೌರವಿಸದ, ಸರಿಯಾದ ನಡತೆ ಹೊಂದಿರದ, ಕಾನೂನಿಗೆ ಎಳ್ಳಷ್ಟೂ ಗೌರವ ನೀಡದ ವ್ಯಕ್ತಿಯಾಗಿದ್ದಾರೆ. ಆದರೆ, ಮಹಿಳೆಯರ ಘನತೆಗೆ ಧಕ್ಕೆ ತರುವ ಕೆಲಸವನ್ನು ಕೊಲೆಯಾಗಿರುವ ರೇಣುಕಾಸ್ವಾಮಿ ಮಾಡಿದ್ದಾರೆ. ಬಣ್ಣದ ಬದುಕಿನಲ್ಲಿ ನಾಯಕನಾಗಿದ್ದರೂ ದರ್ಶನ್‌ರನ್ನು ವಿಲನ್ ರೀತಿಯಲ್ಲಿ ಕಾಣಲಾಗುತ್ತಿದೆ ಎಂದಿದ್ದಾರೆ.

ತನಿಖಾಧಿಕಾರಿಗಳು ತಿಳಿಸಿರುವಂತೆ, ಜೂನ್ 8 ರಂದು ಚಿತ್ರದುರ್ಗದಿಂದ ರೇಣುಕಾಸ್ವಾಮಿ ಅಪಹರಿಸಿ ಕರೆತಂದು ಮಧ್ಯಾಹ್ನ 1 ಗಂಟೆಯಿಂದ 6 ಗಂಟೆ ನಡುವೆ ಪಟ್ಟಣಗೆರೆಯ ಜಯಣ್ಣ ಶೆಡ್‌ನಲ್ಲಿ ಅಂದೇ ಕೊಲೆ ಮಾಡಲಾಗಿದೆ. ರೇಣುಕಾಸ್ವಾಮಿಯ ಮೃತದೇಹವು ಅಪಾರ್ಟ್‌ಮೆಂಟ್ ಒಂದರ ಬಳಿ ಜೂನ್ 9 ರಂದು ಪತ್ತೆಯಾಗಿದೆ. ಸೆಕ್ಯೂರಿಟಿ ಗಾರ್ಡ್ ನೀಡಿದ ದೂರು ಆಧರಿಸಿ, ಎಫ್‌ಐಆರ್ ದಾಖಲಿಸಿದೆ.

ರೇಣುಕಾಸ್ವಾಮಿ ಅವರನ್ನು ಬಲಪ್ರಯೋಗದಿಂದ ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆತರಲಾಗಿದೆ ಎಂಬುದಾಗಿ ಆರೋಪ ಪಟ್ಟಿಯಲ್ಲಿ ತಿಳಿಸಲಾಗಿದೆ. ಆದರೆ, ನನ್ನನ್ನು ಅಪಹರಿಸಲಾಗಿಲ್ಲ ಎಂದು ರೇಣುಕಾಸ್ವಾಮಿ ಸಾಯುವುದಕ್ಕೂ ಮುನ್ನ ತಂದೆ ಕಾಶಿನಾಥಯ್ಯ ಮತ್ತು ತಾಯಿಗೆ ಹೇಳಿದ್ದಾರೆ. ಗೆಳೆಯರ ಜೊತೆ ಊಟಕ್ಕೆ ಹೊರಹೋಗುತ್ತಿದ್ದೇನೆ. ಮಧ್ಯಾಹ್ನ ಊಟಕ್ಕೆ ಬರುವುದಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ, ಬಲಪ್ರಯೋಗ ಅಥವಾ ವಂಚನೆಯಿಂದ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆತಂದಿಲ್ಲ. ಮಾರ್ಗ ಮಧ್ಯದ ಹೋಟೆಲ್‌ನಲ್ಲಿ ರೇಣುಕಾಸ್ವಾಮಿಯೇ ಹಣ ಪಾವತಿ ಮಾಡಿದ್ದಾರೆ. ಈ ಎಲ್ಲ ಪ್ರಕ್ರಿಯೆ ಅವರನ್ನು ಕೊಲೆ ಮಾಡುವುದಕ್ಕಾಗಿ ಅಪಹರಣ ಮಾಡಿದ್ದಾರೆ ಎಂಬ ಅಂಶ ಸುಳ್ಳಾಗಿದೆ ಎಂದು ವಿವರಿಸಿದರು.

ಸಾವಿಗೆ ಕಾರಣ ಏನು ಎಂದು ಹೇಳಿದ್ದಾರೆ :ಪ್ರಕರಣ ಸಂಬಂಧ ಸಾಕ್ಷ್ಯ ಬಚ್ಚಿಟ್ಟಿದ್ದಾರೆ ಮತ್ತು ನಾಶಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ. ಮೃತದೇಹವನ್ನು ಒಂದು ಕಡೆಯಿಂದ ಮತ್ತೊಂದು ಕಡೆ ಸಾಗಿಸುವುದನ್ನು ಸಾಕ್ಷ್ಯನಾಶ ಎನ್ನಲಾಗದು. ಜೂನ್ 9 ರಂದು ರೇಣುಕಾಸ್ವಾಮಿ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದು, ಜೂನ್ 10 ಮತ್ತು 11 ರಂದು ಏನೂ ಮಾಡಿಲ್ಲ. ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಯಾವಾಗ ರೇಣುಕಾಸ್ವಾಮಿ ಸತ್ತಿದ್ದಾರೆ ಎಂದು ಹೇಳಿಲ್ಲ. ಆದರೆ, ಸಾವಿಗೆ ಕಾರಣ ಏನು ಎಂದು ಹೇಳಿದ್ದಾರೆ.

ಜೂನ್ 12 ರಂದು ತನಿಖಾಧಿಕಾರಿಗಳು ಹಗ್ಗ, ಎರಡು ಅಡಿ ಉದ್ದದ ಲಾಟಿ, ಮರದ ಕೊಂಬೆಯನ್ನು ಕೊಲೆಗೆ ಬಳಸಿದ ಶಸ್ತ್ರಾಸ್ತ್ರ ಎಂದು ಜಪ್ತಿ ಮಾಡಿದ್ದಾರೆ. ಜೂನ್ 9, 10 ಮತ್ತು 11ರಂದು ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿಲ್ಲ. ಆದರೆ, ಜೂನ್ 9 ರಂದೇ ಪಟ್ಟಣಗೆರೆ ಶೆಡ್‌ ಅನ್ನು ತನಿಖಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಜೂನ್ 10 ರಂದು ಆರೋಪಿಗಳನ್ನು ಬಂಧಿಸಿ, ಸ್ವ ಹೇಳಿಕೆ ದಾಖಲಿಸಿದ್ದಾರೆ. ಕಾಮಾಕ್ಷಿಪಾಳ್ಯ ಠಾಣೆಯ ತನಿಖಾಧಿಕಾರಿಗೆ ಘಟನಾ ಸ್ಥಳದ ಬಗ್ಗೆ ಜೂನ್ 9 ರಂದೇ ತಿಳಿದಿತ್ತು. ಅದಾಗ್ಯೂ, ಅವರನ್ನು ಪಂಚನಾಮೆ ಮಾಡದಂತೆ ಯಾರೂ ತಡೆದಿರಲಿಲ್ಲ. ತನಿಖಾಧಿಕಾರಿಯ ಈ ನಡೆ ಒಪ್ಪತಕ್ಕದ್ದಲ್ಲ. ಜೂನ್ 9ರಂದು 14ನೇ ಆರೋಪಿಗೆ ಪಿಎಸ್‌ಐ ವಿನಯ್ ಅವರು ಘಟನಾ ಸ್ಥಳದ ಚಿತ್ರಗಳು ಮತ್ತು ವಿಡಿಯೊ ಕಳುಹಿಸುತ್ತಾರೆ. ಇವರನ್ನು ಸಾಕ್ಷಿಯಾಗಿ ಹೆಚ್ಚುವರಿ ಆರೋಪ ಪಟ್ಟಿ ಮತ್ತು ಆರೋಪ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದಿದ್ದಾರೆ.

ವಿಚಾರಣೆ ಗುರುವಾರಕ್ಕೆ ಮುಂದೂಡಿಕೆ :ದರ್ಶನ್ ಅವರಿಂದ 37.40 ಲಕ್ಷ ರೂಪಾಯಿಯನ್ನು ವಶಪಡಿಸಿಕೊಂಡಿದ್ದು, ಅದನ್ನು ಸಾಕ್ಷ್ಯ ನಾಶಕ್ಕೆ ಸಂಗ್ರಹಿಸಿದ್ದರು ಎಂದು ಕತೆ ಹೆಣೆಯಲಾಗಿದೆ. ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆತಂದು ಕೊಲೆ ಮಾಡಲಾಗುತ್ತದೆ ಎಂದು ಯಾರಿಗೂ ಮಾರ್ಚ್‌ನಲ್ಲಿ ತಿಳಿದಿರಲಿಲ್ಲ. ಇದಕ್ಕೆ ಸಂಬಂಧಿಸಿದಂತೆ ಆರೋಪ ಪಟ್ಟಿ ಸಲ್ಲಿಸಲಾಗುತ್ತದೆ ಎಂದು ಯಾರಿಗೆ ಗೊತ್ತು? ಸುಳ್ಳು ಕತೆ ಹೆಣೆಯಲು ಒಂದು ಮಿತಿ ಇರಬೇಕು. ದರ್ಶನ್‌ ಅವರಿಂದ ಪಡೆದಿದ್ದ ಹಣವನ್ನು ಅವರ ಗೆಳೆಯ ಹಿಂದಿರುಗಿಸಿದ್ದಾರೆ. ಪ್ರಕರಣದಲ್ಲಿ ಒಟ್ಟು 17 ಮಂದಿಯಲ್ಲಿ ಐದು ಮಂದಿಗೆ ಜಾಮೀನಾಗಿದೆ. ಇದರಲ್ಲಿ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದವನಿಗೂ ಜಾಮೀನು ಸಿಕ್ಕಿದೆ. ದರ್ಶನ್ ಅವರಿಗೂ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದರು. ಕಲಾಪದ ಅವಧಿ ಮುಗಿದ ಹಿನ್ನೆಲೆ ಹೈಕೋರ್ಟ್​ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು.

ಇದನ್ನೂ ಓದಿ :ರೇಣುಕಾಸ್ವಾಮಿ ಕೊಲೆ ಕೇಸ್: ದರ್ಶನ್, ಸಹಚರರ ವಿರುದ್ಧ ಹೆಚ್ಚುವರಿ ಚಾರ್ಜ್‌ಶೀಟ್‌ ಸಲ್ಲಿಕೆ

Last Updated : Nov 26, 2024, 8:36 PM IST

ABOUT THE AUTHOR

...view details