ಬೆಂಗಳೂರು: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ತನ್ನ ವಿರುದ್ದ ದಾಖಲಾಗಿರುವ ಪ್ರಕರಣ ರದ್ದು ಕೋರಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಇಂದು 2025ರ ಜನವರಿ 7ಕ್ಕೆ ಮುಂದೂಡಿದೆ. ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಅರ್ಜಿ ವಿಚಾರಣೆ ನಡೆಸಿತು.
ಖುದ್ದು ವಿಚಾರಣೆಗೆ ಹಾಜರಾಗುವುದರಿಂದ ವಿನಾಯಿತಿ ನೀಡಿದ್ದ ಆದೇಶವನ್ನು ಮುಂದಿನ ವಿಚಾರಣೆಯವರೆಗೂ ವಿಸ್ತರಿಸಿ ಆದೇಶಿಸಿದೆ.
ಇಂದು ವಾದ ಮುಂದುವರೆಸಿದ ಯಡಿಯೂರಪ್ಪ ಪರ ವಕೀಲರು, "ಪ್ರಕರಣ ಸಂಬಂಧ ದೂರು ನೀಡಿರುವ ಸಂತ್ರಸ್ತೆಯ ತಾಯಿಗೆ ಪದೇ ಪದೇ ದೂರು ದಾಖಲಿಸುವುದು ಅಭ್ಯಾಸವಾಗಿದೆ. ಯಡಿಯೂರಪ್ಪ ವಿರುದ್ಧದ ಪೊಲೀಸ್ ವರದಿಯನ್ನು ಆಧರಿಸಿ ಸಿಆರ್‌ಪಿಸಿ ಸೆಕ್ಷನ್ 191 (ಬಿ) ಅಡಿಯಲ್ಲಿ ವಿಚಾರಣೆಗೆ ಪರಿಗಣಿಸಲಾಗಿದೆ. ಅಲ್ಲದೆ, ಯಡಿಯೂರಪ್ಪ ವಿರುದ್ಧ ಸಂತ್ರಸ್ತೆ ಸಿಆರ್‌ಪಿಸಿ 161 (ಪೊಲೀಸರ ಮುಂದೆ ಹೇಳಿಕೆ) ಮತ್ತು 164 (ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ) ದಾಖಲಿಸಿರುವುದು ತನಿಖಾಧಿಕಾರಿಯ ಅಭಿಪ್ರಾಯವಾಗಿರಲಿದೆ. ಸಾಕ್ಷ್ಯಾಧಾರಗಳು ಸರಿ ಇವೆಯೇ ಎಂಬುದನ್ನು ನ್ಯಾಯಪೀಠ ಪರಿಶೀಲಿಸಬೇಕಾಗಿದೆ. ಸಾಕ್ಷ್ಯಗಳ ಆಧಾರದಲ್ಲಿ ತನಿಖಾಧಿಕಾರಿ ತಪ್ಪು ನಿರ್ಧಾರಕ್ಕೆ ಬಂದಿದ್ದಾರೆ. ತನಿಖಾಧಿಕಾರಿಗಳ ಅಭಿಪ್ರಾಯದಂತೆ ನಿರ್ಧಾರ ತೆಗೆದುಕೊಳ್ಳುವುದು ನ್ಯಾಯಾಲಯದ ಕರ್ತವ್ಯವಲ್ಲ ಎಂದು ಪೀಠಕ್ಕೆ ತಿಳಿಸಿದರು.
ನ್ಯಾಯಾಲಯದ ಕಲಾಪ ಮುಗಿದ ಹಿನ್ನೆಲೆಯಲ್ಲಿ ಪೀಠ ವಿಚಾರಣೆ ಮುಂದೂಡಿತು.
ಇದನ್ನೂ ಓದಿ:ಬಿಎಸ್ವೈ ವಿರುದ್ಧದ ಪೋಕ್ಸೋ ಪ್ರಕರಣ: ಸರ್ಕಾರದ ಪರ ವಾದಿಸಲು ಪ್ರೊ. ರವಿವರ್ಮ ಕುಮಾರ್ ನೇಮಕ - RaviVarmaKumar Appointed as SPP - RAVIVARMAKUMAR APPOINTED AS SPP