ಕರ್ನಾಟಕ

karnataka

ETV Bharat / state

ದರ್ಶನ್​ ಶಸ್ತ್ರಚಿಕಿತ್ಸೆ ಕುರಿತು ಈವರೆಗೂ ವೈದ್ಯರು ನಿರ್ಧರಿಸಿಲ್ಲ- ವಕೀಲರ ವಾದ: ವಿಚಾರಣೆ ನಾಳೆಗೆ ಮುಂದೂಡಿಕೆ - DARSHAN BAIL PLEA HEARING

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಕೋರಿ ನಟ ದರ್ಶನ್ ಸಲ್ಲಿಸಿರುವ ಅರ್ಜಿಯ ವಿಚಾರಣೆ​ ನಾಳೆಗೆ ಮುಂದೂಡಿಕೆಯಾಗಿದೆ.

darshan
ಹೈಕೋರ್ಟ್, ದರ್ಶನ್ (ETV Bharat)

By ETV Bharat Karnataka Team

Published : Nov 28, 2024, 5:55 PM IST

Updated : Nov 28, 2024, 8:14 PM IST

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಜೈಲು ಸೇರಿ ಬೆನ್ನುಹುರಿ ಊತದ ಹಿನ್ನೆಲೆಯಲ್ಲಿ ವೈದ್ಯಕೀಯ ಮಧ್ಯಂತರ ಜಾಮೀನು ಪಡೆದು ನಟ ದರ್ಶನ್‌ ತೂಗುದೀಪ್​ ರಕ್ತದೊತ್ತಡದಲ್ಲಿ ಏರಿಳಿತವಾಗುತ್ತಿರುವುದರಿಂದ ಶಸ್ತ್ರಚಿಕಿತ್ಸೆಯ ಬಗ್ಗೆ ಈವರೆಗೂ ವೈದ್ಯರು ನಿರ್ಧರಿಸಿಲ್ಲ ಎಂದು ದರ್ಶನ್​ ಪರ ವಕೀಲರು ಹೈಕೋರ್ಟ್​ಗೆ ಮಾಹಿತಿ ನೀಡಿದರು.

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ದರ್ಶನ್‌, ಪವಿತ್ರಾಗೌಡ, ಆರ್‌. ನಾಗರಾಜು, ಎಂ. ಲಕ್ಷ್ಮಣ್, ಅನು ಕುಮಾರ್‌ ಅಲಿಯಾಸ್‌ ಅನು, ಜಗದೀಶ್‌ ಅಲಿಯಾಸ್‌ ಜಗ್ಗ ಪ್ರತ್ಯೇಕವಾಗಿ ಸಲ್ಲಿಸಿರುವ ಜಾಮೀನು ಅರ್ಜಿಗಳನ್ನು ಯಮೂರ್ತಿ ಎಸ್‌. ವಿಶ್ವಜಿತ್‌ ಶೆಟ್ಟಿ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ನ್ಯಾಯಪೀಠದ ಎದುರು ದರ್ಶನ್​ ಪರ ಹಿರಿಯ ವಕೀಲ ಸಿ.ವಿ.ನಾಗೇಶ್​ ವಾದ ಮಂಡಿಸಿದರು.

ದರ್ಶನ್‌ಗೆ ಜಾಮೀನು ಮಂಜೂರು ಮಾಡಲು ಕೋರಿ ವಾದ ಮುಂದುವರೆಸಿದ ವೇಳೆ, ಪೀಠ, ''ದರ್ಶನ್‌ಗೆ ಶಸ್ತ್ರಚಿಕಿತ್ಸೆ ಮಾಡಲು ಯಾವುದೇ ಸಮಸ್ಯೆಯಿಲ್ಲ ಎಂದು ವೈದ್ಯರು ನೀಡಿರುವ ಸರ್ಟಿಫಿಕೆಟ್‌ನಲ್ಲಿ ಇದೆಯಲ್ಲಾ'' ಎಂದು ಪ್ರಶ್ನಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ''ದರ್ಶನ್‌ಗೆ ಎಂಆರ್‌ಐ ಮಾಡಿಸಲಾಗಿದೆ. ದರ್ಶನ್‌ ಅವರ ರಕ್ತದೊತ್ತಡದಲ್ಲಿ ಏರಿಳಿತವಾಗುತ್ತಿರುವುದರಿಂದ ವೈದ್ಯರು ಅವರಿಗೆ ಶಸ್ತ್ರಚಿಕಿತ್ಸೆ ಕುರಿತು ನಿರ್ಧರಿಸಿಲ್ಲ. ಯಾವಾಗ ಶಸ್ತ್ರಚಿಕಿತ್ಸೆ ಮಾಡಬೇಕು ಎಂಬುದನ್ನು ವೈದ್ಯರು ನಿರ್ಧರಿಸಬೇಕಿದೆ'' ಎಂದು ತಿಳಿಸಿದರು.

''ದರ್ಶನ್‌ ಅವರಿಗೆ ರೇಣುಕಾಸ್ವಾಮಿ ಕೊಲೆ ಮಾಡುವ ಉದ್ದೇಶವಿದ್ದರೆ ನೀರು ಕೊಡಿ, ಊಟ ತಂದು ಕೊಡಿ, ಆತನ ಚಿತ್ರ ಸೆರೆ ಹಿಡಿಯಿರಿ, ವಿಡಿಯೋ ಮಾಡಿ, ಆತನನ್ನು ಪೊಲೀಸ್‌ ಠಾಣೆಗೆ ಕರೆದುಕೊಂಡು ಹೋಗಿ ಬಿಡಿ ಎಂದು ಹೇಳುತ್ತಿದ್ದರೆ? ಇದು ದರ್ಶನ್‌ ನಡತೆಯಾಗಿದ್ದು, ದಾಖಲೆಯ ರೂಪದಲ್ಲಿ ಸಾಕ್ಷ್ಯವಿದೆ'' ಎಂದು ಪೀಠಕ್ಕೆ ಮಾಹಿತಿ ನೀಡಿದರು.

ಪ್ರಕರಣದ 11ನೇ ಆರೋಪಿಯಾಗಿರುವ ದರ್ಶನ್‌ ವ್ಯವಸ್ಥಾಪಕ ಆರ್‌.ನಾಗರಾಜು ಪರ ವಾದ ಮಂಡಿಸಿದ ಹಿರಿಯ ವಕೀಲ ಸಂದೇಶ್‌ ಚೌಟ, ''ಯಾವ ಕಾರಣಕ್ಕಾಗಿ ಆರೋಪಿಗಳನ್ನು ಬಂಧಿಸಲಾಗಿದೆ ಎಂಬ ವಿಚಾರವನ್ನು ರಿಮ್ಯಾಂಡ್‌ ಅರ್ಜಿಯಲ್ಲಿ ತನಿಖಾಧಿಕಾರಿಗಳು ಉಲ್ಲೇಖಿಸಿಲ್ಲ. ಈ ವಿಚಾರವನ್ನು ವಿಚಾರಣಾಧೀನ ನ್ಯಾಯಾಲಯವು ಪರಿಗಣಿಸಿಲ್ಲ'' ಎಂದು ಆಕ್ಷೇಪಿಸಿದರು.

ಕಲಾಪದ ದಿನ ಮುಕ್ತಾಯವಾದ ಹಿನ್ನೆಲೆಯಲ್ಲಿ ಪೀಠವು ಅರ್ಜಿಗಳ ವಿಚಾರಣೆಯನ್ನು ನಾಳೆಗೆ (ಡಿಸೆಂಬರ್‌ 29ಕ್ಕೆ) ಮುಂದೂಡಿತು.

ಇದನ್ನೂ ಓದಿ:ರೇಣುಕಾಸ್ವಾಮಿ ಕೊಲೆ ಕೇಸ್: ದರ್ಶನ್, ಸಹಚರರ ವಿರುದ್ಧ ಹೆಚ್ಚುವರಿ ಚಾರ್ಜ್‌ಶೀಟ್‌ ಸಲ್ಲಿಕೆ

Last Updated : Nov 28, 2024, 8:14 PM IST

ABOUT THE AUTHOR

...view details