ಬೆಂಗಳೂರು: ಬೆಂಗಳೂರು:ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದ ರಾಜ್ಯಪಾಲರ ಕ್ರಮ ಎತ್ತಿ ಹಿಡಿದಿದ್ದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ಕುರಿತಂತೆ ರಾಜ್ಯಪಾಲರ ಕಚೇರಿ, ರಾಜ್ಯ ಸರ್ಕಾರ ಮತ್ಯು ದೂರುದಾರ ಸ್ನೇಹಮಹಿ ಕೃಷ್ಣ ಮತ್ತಿತರರಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರಿದ್ದ ಪೀಠ ಈ ಆದೇಶ ನೀಡಿ ವಿಚಾರಣೆಯನ್ನು ಜನವರಿ 20 ಕ್ಕೆ ಮುಂದೂಡಿದೆ.
'ತಮ್ಮ ಕಕ್ಷಿದಾರನಿಗೆ ಈ ಪ್ರಕರಣಕ್ಕೆ ಸಂಬಂಧವಿಲ್ಲ. ಅವರಿಗೆ ಈಗ 80 ವರ್ಷ. ನಮ್ಮನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಅಲ್ಲದೆ, ಪ್ರಕರಣವನ್ನು ಸಿಬಿಐ ತನಿಖೆಗೆ ಕೋರಿ ಅರ್ಜಿ ಸಲ್ಲಿಕೆಯಾಗಿದ್ದು, ಅದಕ್ಕೆ ತಡೆ ನೀಡಬೇಕು' ಎಂದು ಸಿದ್ದರಾಮಯ್ಯ ಪತ್ನಿಯ ಸಹೋದರ ಖರೀದಿಸಿದ್ದ ಜಮೀನಿ ಮೂಲ ಮಾಲೀಕ ದೇವರಾಜು ಪರ ವಕೀಲ ದುಷ್ಯಂತ್ ದವೆ ಕೋರಿದರು.
ನಮ್ಮ ಕಕ್ಷಿದಾರರಿಗೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ. ಆದರೂ ವಿಚಾರಣೆಗೊಳಪಡಬೇಕಾಗಿದೆ, ಹೀಗಾಗಿ ಮೇಲ್ಮನವಿ ಮೂಲಕ ಪ್ರಶ್ನಿಸಿದ್ದೇವೆ. ಅಲ್ಲದೆ, ಪ್ರಕರಣ ಸಂಬಂಧ ಲೋಕಾಯುಕ್ತ ಪೊಲೀಸರ ತನಿಖೆ ಸ್ಥಿತಿಗತಿ ವರದಿ ಕೇಳಿದ್ದು, ಈ ಆದೇಶಕ್ಕೆ ಮಧ್ಯಂತರ ತಡೆ ನೀಡಲು ಮನವಿ ಮಾಡಿದರು.
ಏಕ ಸದಸ್ಯ ಪೀಠವು ರಾಜ್ಯಪಾಲರ ಅನುಮತಿ ಸರಿಯೋ ತಪ್ಪೋ ಎಂದಷ್ಟೇ ಹೇಳಬೇಕಿತ್ತು. ಬದಲಿಗೆ ದೇವರಾಜು ವಿರುದ್ಧ ಆದೇಶ ನೀಡಿದೆ. ದೇವರಾಜು ವಾದ ಆಲಿಸದೇ ಪೀಠ ಈ ಆದೇಶ ನೀಡಿದೆ. ಇದರಿಂದಾಗಿ ತೊಂದರೆ ಆಗುತ್ತಿರುವುದರಿಂದ ಪ್ರಶ್ನಿಸಿದ್ದೇವೆ ಎಂದು ಪೀಠಕ್ಕೆ ವಿವರಿಸಿದರು.
ಇದನ್ನೂ ಓದಿ:ಯೋಗೇಶ್ ಗೌಡ ಕೊಲೆ ಪ್ರಕರಣ: ಮಾಫಿ ಸಾಕ್ಷಿ ಹೇಳಿಕೆ ದಾಖಲಿಸಿದ್ದ ವಿಶೇಷ ನ್ಯಾಯಾಲಯದ ಆದೇಶ ರದ್ದು
ಕರ್ನಾಟಕದಲ್ಲಿ ಡಿನೋಟಿಫಿಕೇಷನ್ ವಿಚಾರ ಹೊಸದಲ್ಲ. ರೈತರು ಡಿನೋಟಿಫಿಕೇಷನ್ ಅರ್ಜಿ ಸಲ್ಲಿಸಿದಾಗ ಸರ್ಕಾರ ಪರಿಗಣಿಸುತ್ತದೆ. 1998 ರಲ್ಲಿ ಏನಾಯಿತು ಎಂಬುದನ್ನು 2024 ರಲ್ಲಿ ತೀರ್ಮಾನಿಸಲಾಗುವುದಿಲ್ಲ. ದೇವರಾಜು ಜಮೀನಿನ ಮೂಲ ಮಾಲೀಕರಾಗಿದ್ದರು. ಪ್ರಕ್ರಿಯೆ ಪಾಲಿಸಿಯೇ ಡಿನೋಟಿಫಿಕೇಷನ್ ಮಾಡಲಾಗಿದೆ. ಹಲವರ ಜಮೀನು ಡಿನೋಟಿಫಿಕೇಷನ್ ಮಾಡಲಾಗಿದೆ. ಅದರಲ್ಲಿ ದೇವರಾಜು ಜಮೀನನ್ನೂ ಮಾಡಲಾಗಿದೆ. ಆದರೆ, ಏಕಸದಸ್ಯ ಪೀಠಕ್ಕೆ ತಪ್ಪು ಮಾಹಿತಿ ನೀಡಲಾಗಿದೆ ಎಂದು ದುಷ್ಯಂತ್ ದವೆ ವಾದ ಮಂಡಿಸಿದರು.
ಜಮೀನು ಡಿನೋಟಿಫಿಕೇಷನ್ ಆದಾಗ ಜಮೀನಿನ ಮೌಲ್ಯ 3 ಲಕ್ಷ ಇತ್ತು. ಇದೀಗ 56 ಕೋಟಿ ಆಗಿದೆ ಎಂದು ಹೈಕೋರ್ಟ್ ಆದೇಶದಲ್ಲಿದೆ. ಆದರೆ ಇದಕ್ಕೂ ದೇವರಾಜುಗೂ ಯಾವುದೇ ಸಂಬಂಧವಿಲ್ಲ. ಅಲ್ಲದೆ, ವಿಭಾಗೀಯ ಪೀಠ ಮೇಲ್ಮನವಿ ತೀರ್ಮಾನಿಸಲಿ. ಅಲ್ಲಿಯವರೆಗೂ ಸಿಬಿಐ ತನಿಖೆ ಬಗ್ಗೆ ವಿಚಾರಣೆ ನಡೆಸುವುದು ಸೂಕ್ತವಲ್ಲ. ಘಟನೆ ನಡೆದು ಈಗಾಗಲೇ 24 ವರ್ಷಗಳಾಗಿವೆ. ಈಗ ಆಕಾಶ ಕಳಚಿ ಬೀಳುವುದಿಲ್ಲ. ಸಿಬಿಐ ತನಿಖೆ ಕೋರಿರುವ ಬಗ್ಗೆ ತುರ್ತು ವಿಚಾರಣೆ ಅಗತ್ಯವಿಲ್ಲ. ಇದೊಂದು ದುರುದ್ದೇಶಪೂರಿತ ಅರ್ಜಿಯಾಗಿದೆ. ಹೀಗಾಗಿ ಮೇಲ್ಮನವಿ ವಿಚಾರಣೆವರೆಗೆ ಏಕಸದಸ್ಯ ಪೀಠಕ್ಕೆ ತಡೆ ನೀಡಬೇಕು ಎಂದು ಪೀಠಕ್ಕೆ ತಿಳಿಸಿದರು.
ಏಕಸದಸ್ಯ ಪೀಠದ ಪ್ರಕ್ರಿಯೆಯಿಂದ ಮಧ್ಯಂತರ ರಕ್ಷಣೆ ಬೇಕು. ರಕ್ಷಣೆ ನೀಡಲಾಗದಿದ್ದರೆ ಅದನ್ನೇ ತಾವು ದಾಖಲಿಸಬಹುದು. ಕೇವಲ ನೋಟಿಸ್ ನೀಡಿ ವಿಚಾರಣೆ ಮುಂದೂಡಿದರೆ ಪ್ರಯೋಜನವಿಲ್ಲ. ಆಪರೇಷನ್ ಸಕ್ಸಸ್ ಪೇಷಂಟ್ ಡೈಡ್ ಎಂಬಂತಾಗಲಿದೆ. ಆದ್ದರಿಂದ ಮಧ್ಯಂತರ ಆದೇಶ ನೀಡಬೇಕು ಎಂದು ದುಷ್ಯಂತ್ ದವೆ ಮನವಿ ಮಾಡಿದರು.
ಸ್ನೇಹಮಯಿ ಕೃಷ್ಣ ಪರ ಹಿರಿಯ ವಕೀಲ ಮಣೀಂದರ್ ಸಿಂಗ್, ಮೇಲ್ಮನವಿದಾರರು ಪರಸ್ಪರ ಶಾಮೀಲಾಗಿ ವಾದ ಮಂಡಿಸುತ್ತಿದ್ದಾರೆ. ಮೇಲ್ನೋಟಕ್ಕೆ ಮಾತ್ರ ಪರಸ್ಪರ ಸಂಬಂಧವಿಲ್ಲವೆಂದು ವಾದಿಸಿದ್ದಾರೆ. ತಮಗೆ ನೋಟಿಸ್ ನೀಡಿದರೆ ನಾವು ವಾದ ಮಂಡಿಸುತ್ತೇವೆ ಎಂದು ವಿವರಿಸಿದರು.
ರಾಜ್ಯ ಸರ್ಕಾರದ ಪರ ಹಿರಿಯ ವಕೀಲ ಕಪಿಲ್ ಸಿಬಲ್, ಮುಖ್ಯಮಂತ್ರಿಯನ್ನು ರಾಜ್ಯಪಾಲರು ಆಯ್ಕೆ ಮಾಡಿಲ್ಲ. ಹೀಗಾಗಿ ರಾಜ್ಯಪಾಲರಿಗೆ ತನಿಖೆ ಅನುಮತಿ ನೀಡುವ ಅಧಿಕಾರವಿಲ್ಲ. ಸಾಂವಿಧಾನಿಕ ಪ್ರಶ್ನೆಗಳಿಗೆ ಹೈಕೋರ್ಟ್ ಉತ್ತರಿಸಬೇಕಿದೆ. ಸರ್ಕಾರಿ ಅಧಿಕಾರಿಗಳಿಗಾದರೆ ನೇಮಕಗೊಳಿಸಿದವರು ಅನುಮತಿ ನೀಡಬಹುದು. ರಾಜ್ಯಪಾಲರಿಗೆ ಅನುಮತಿ ನೀಡುವ ಅಧಿಕಾರವಿಲ್ಲ ಎಂದು ಪೀಠಕ್ಕೆ ತಿಳಿಸಿದರು.
ಅಲ್ಲದೆ, ಈ ರೀತಿ ಮುಖ್ಯಮಂತ್ರಿ ವಿರುದ್ಧ ತನಿಖೆಗೆ ಅನುಮತಿ ನೀಡಬಾರದು. ಈ ರೀತಿ ಮಾಡಿದರೆ ರಾಷ್ಟ್ರದಲ್ಲಿ ಅರಾಜಕತೆ ಉಂಟಾಗಲಿದೆ ಎಂದು ಪೀಠಕ್ಕೆ ವಿವರಿಸಿದರು.
ಏಕಸದಸ್ಯ ಪೀಠದ ಆದೇಶದಲ್ಲಿನ ಲೋಪ ತೋರಿಸುತ್ತೇನೆ. ಭ್ರಷ್ಟಾಚಾರ ನಿಯಂತ್ರಣಾ ಕಾಯಿದೆ 17 ಎ ನಿಯಮವನ್ನು ಸಂಪೂರ್ಣವಾಗಿ ರಾಜ್ಯಪಾಲರು ಉಲ್ಲಂಘಿಸಿದ್ದಾರೆ. ಪೊಲೀಸ್ ಅಧಿಕಾರಿ ಮೂಲಕವೇ ಅನುಮತಿ ಕೋರಬೇಕು. ಆದರೆ ಈ ಅಂಶವನ್ನು ಏಕಸದಸ್ಯ ಪೀಠ ನಿರ್ಲಕ್ಷಿಸಿದೆ. ರಾಜ್ಯಪಾಲರು ಕ್ಯಾಬಿನೆಟ್ ಸಲಹೆ ಸೂಚನೆ ಪಾಲಿಸಬೇಕು. ಈ ಬಗ್ಗೆ ಸುಪ್ರೀಂಕೋರ್ಟ್ ತೀರ್ಪು ಸ್ಪಷ್ಟವಾಗಿದೆ. ಆದರೂ ಏಕ ಸದಸ್ಯ ಪೀಠ ರಾಜ್ಯಪಾಲರ ಅನುಮತಿಯನ್ನು ಎತ್ತಿಹಿಡಿದಿದೆ. ಮುಖ್ಯಮಂತ್ರಿ ಪರವಾಗಿಯೇ ಸಚಿವ ಸಂಪುಟ ಇರುತ್ತದೆಂದು ತಿಳಿಸಿದೆ. ಏಕಸದಸ್ಯ ಪೀಠದ ಈ ತೀರ್ಪು ಪ್ರಶ್ನಿಸಿದ್ದೇವೆ ಎಂದು ಪೀಠಕ್ಕೆ ಸಿಎಂ ಪರ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ವಿವರಿಸಿದರು.
ಸಿಬಿಐ ತನಿಖೆ ಬಗ್ಗೆ ಜನವರಿಯಲ್ಲಿ ವಿಚಾರಣೆ ನಡೆಯಲಿ. ವಿಭಾಗೀಯ ಪೀಠದ ವಿಚಾರಣೆ ನಂತರ ಅಲ್ಲಿ ವಿಚಾರಣೆ ನಡೆಯಲಿ. ಹೀಗೆ ಮಾಡಿದರೆ ಆಕಾಶವೇನೂ ಕಳಚಿ ಬೀಳುವುದಿಲ್ಲ ಎಂದು ಸಿಎಂ ಪರ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ಪೀಠಕ್ಕೆ ವಿವರಣೆ ನೀಡಿದರು.
ವಾದ ಆಲಿಸಿದ ಪೀಠ, ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಲು ಸಾಧ್ಯವಿಲ್ಲ. ಸಿಬಿಐ ತನಿಖೆ ಕೋರಿರುವ ಅರ್ಜಿಯಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ. ನೀವು ಏಕಸದಸ್ಯ ಪೀಠಕ್ಕೆ ಮನವಿ ಸಲ್ಲಿಸಬಹುದು. ಏಕಸದಸ್ಯ ಪೀಠದ ವಿಚಾರಣೆ ಬಗ್ಗೆ ಯಾವುದೇ ಅಭಿಪ್ರಾಯ ವ್ಯಕ್ತಪಡಿಸುವುದಿಲ್ಲ. ನಮ್ಮ ಅಭಿಪ್ರಾಯದಿಂದ ವಿಚಾರಣೆ ಮೇಲೆ ಪರಿಣಾಮವಾಗಬಹುದು ಎಂದು ತಿಳಿಸಿ ಅರ್ಜಿಯಲ್ಲಿನ ಪ್ರತಿವಾದಿಗಳಿಗೆ ನೋಟಿಸ್ ನೀಡದೇ ವಿವರ ವಾದ ಆಲಿಸಲು ಸಾಧ್ಯವಿಲ್ಲ ಎಂದು ತಿಳಿಸಿ ನೋಟಿಸ್ ಜಾರಿ ಮಾಡಿ ವಿಚಾರಣೆ ಜನವರಿ 20 ಕ್ಕೆ ನಿಗದಿಪಡಿಸಿತು.
ಪ್ರಕರಣವೇನು?ಮುಡಾ ಹಗರಣಕ್ಕೆ ಸಂಬಂಧಿಸಿದಂತೆ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ದೂರು ಆಧರಿಸಿ ತನಿಖೆ ನಡೆಸಲು ರಾಜ್ಯಪಾಲರು, ಭ್ರಷ್ಟಾಚಾರ ನಿವಾರಣಾ ಕಾಯ್ದೆ-1988ರ ಕಲಂ 17 ಎ ಅಡಿ ಅನುಮತಿ ನೀಡಿದ್ದರು. ಈ ಅನುಮತಿ ನೀಡಿಕೆ ಪ್ರಶ್ನಿಸಿ ಸಿದ್ದರಾಮಯ್ಯ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಜಾಗೊಳಿಸಿದ್ದ ಏಕ ಸದಸ್ಯ ಪೀಠ, ರಾಜ್ಯಪಾಲರ ಕ್ರಮ ಎತ್ತಿ ಹಿಡಿದಿತ್ತು. ಇದನ್ನು ಪ್ರಶ್ನಿಸಿ ಸಿದ್ದರಾಮಯ್ಯ ಮೇಲ್ಮನವಿ ಸಲ್ಲಿಸಿದ್ದರು.
ಇದನ್ನೂ ಓದಿ:ರಾಜಕೀಯದಲ್ಲಿ ನನಗೆ ಯಾರೂ ವೈರಿಗಳಲ್ಲ, ಎಲ್ಲರೂ ನನ್ನ ಸ್ನೇಹಿತರೇ: ಡಿಸಿಎಂ ಡಿ.ಕೆ. ಶಿವಕುಮಾರ್