ಹುಬ್ಬಳ್ಳಿ: ಜಿಲ್ಲೆಯಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ವಿದ್ಯುತ್ ಸಂಪರ್ಕ ಕಡಿತ, ವಿದ್ಯುತ್ ಕಂಬಗಳು ಧರೆಗೆ ಉರುಳುವುದು, ಇಲ್ಲ ತಂತಿ ತುಂಡಾಗಿ ಬೀಳುವುದು, ಟ್ರಾನ್ಸ್ಫಾರ್ಮರ್ ವೈಪಲ್ಯದಂತೆ ಸಮಸ್ಯೆಗಳು ಸಾಮಾನ್ಯವಾಗಿ ಕಂಡು ಬರುತ್ತದೆ. ಇದರಿಂದ ಜನ ಸಾಮಾನ್ಯರು ಪರದಾಡುವಂತೆ ಆಗುತ್ತದೆ. ಜೊತೆಗೆ, ಈ ಸಂಬಂಧ ಯಾರನ್ನು, ಯಾವ ಸಂಖ್ಯೆಗೆ ಸಂಪರ್ಕಿಸಿ ದೂರು ನೀಡಬೇಕು ಎಂಬ ಗೊಂದಲಕ್ಕೆ ಒಳಗಾಗುತ್ತಾರೆ. ಈ ನಿಟ್ಟಿನಲ್ಲಿ ಗ್ರಾಹಕರ ಸ್ನೇಹಿ ಆಗಲು ಮುಂದಾಗಿರುವ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ) ವಾಟ್ಸಾಪ್ ಸಹಾಯವಾಣಿಯನ್ನು ತೆರೆದಿದೆ.
ಈ ಸಹಾಯವಾಣಿಯಲ್ಲಿ ಮೇಲೆ ತಿಳಿಸಿದ ಸಂಬಂಧಿತ ವಿದ್ಯುತ್ ಸಮಸ್ಯೆಗಳ ಕುರಿತು ಜನರು ಫೋಟೋ ಮತ್ತು ವಿಡಿಯೋವನ್ನು ಜನರು ಹಂಚಿಕೊಳ್ಳಬಹುದಾಗಿದೆ. ಇದರಿಂದ ಎಲ್ಲಿ ಏನು ಸಮಸ್ಯೆ ಇದೆ. ತಕ್ಷಣಕ್ಕೆ ಹೇಗೆ ಕಾರ್ಯ ಪ್ರವೃತ್ತರಾಗಬಹುದು ಎಂಬ ಕುರಿತು ಸಿದ್ಧತೆ ನಡೆಸಲು ಹಾಗೂ ಸ್ಥಳದ ಗಂಭೀರತೆ ಅರಿಯಲು ಹೆಸ್ಕಾಂಗೆ ಸಹಾಯವಾಗಲಿದೆ.
ಗ್ರಾಹಕರು ತಾವು ಅನುಭವಿಸುತ್ತಿರುವ ವಿದ್ಯುತ್ ಸಮಸ್ಯೆ, ದೂರು ದುಮ್ಮಾನವನ್ನು ಫೋಟೋ, ವಿಡಿಯೋ ಸಮೇತ ಹೆಸ್ಕಾಂ ಸಹಾಯವಾಣಿ 1912 ಜತೆಗೆ ವಾಟ್ಸಾಪ್ ಗ್ರಾಹಕ ಸೇವಾ ಸಂಖ್ಯೆ 9480883899ಗೆ ಸಂಪರ್ಕಿಸಬಹುದು. ನೀಡಲಾಗಿರುವ ವಾಟ್ಸಾಪ್ ನಂಬರ್ಗೆ ಸಮಸ್ಯೆ ಕುರಿತು ಫೋಟೋ, ವಿಡಿಯೋ ಹಂಚಿಕೊಳ್ಳುವುದರಿಂದ ಕಾರ್ಯಾಚರಣೆಗೆ ನೆರವಾಗಲಿದೆ ಎಂದು ಹೆಸ್ಕಾಂ ತಿಳಿಸಿದೆ.