ಬೆಂಗಳೂರು:ಐಪಿಎಲ್ 2024ರ 68ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇ ಆಫ್ ಹಂತ ತಲುಪಿದೆ. ಮೇ 22ರಂದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ಆರ್ಸಿಬಿ ಎದುರಾಳಿಯಾಗಿ ರಾಜಸ್ಥಾನ್ ರಾಯಲ್ಸ್ ಅಥವಾ ಸನ್ರೈಸರ್ಸ್ ಹೈದರಾಬಾದ್ ತಂಡ ಮುಖಾಮುಖಿಯಾಗಲಿವೆ.
ಈ ಬಾರಿಯ ಐಪಿಎಲ್'ನಲ್ಲಿ ಸತತ ಆರು ಪಂದ್ಯಗಳಲ್ಲಿ ಸೋತು ಅಂಕಪಟ್ಟಿಯಲ್ಲಿ ಪಾತಾಳಕ್ಕಿಳಿದಿದ್ದ ಆರ್ಸಿಬಿ ನಂತರ ಫೀನಿಕ್ಸ್ನಂತೆ ಮೈಕೊಡವಿ ನಿಂತು, ಸತತ ಆರು ಗೆಲುವಿನೊಂದಿಗೆ ಪ್ಲೇ ಆಫ್ ತಲುಪಿರುವುದು ಈಗ ಇತಿಹಾಸ. ಆರ್ಸಿಬಿ ಎಂಬ ತಂಡವೇ ಹಾಗೆ, ಕಪ್ ಗೆಲ್ಲದಿದ್ದರೇನಂತೆ.. ಅದು ಊಹಿಸಲಾಗದ ದಾಖಲೆಗಳನ್ನು ನಿರ್ಮಿಸಿಯೇ ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಗಳಿಸಿದೆ.
ಆರ್ಸಿಬಿಯ ಈ ಯಶಸ್ಸಿನ ಹಿಂದೆ ಪ್ರತಿ ಆಟಗಾರರ ಶ್ರಮವಿದೆ. ಆದರೆ ನಿನ್ನೆಯ ಪಂದ್ಯದಲ್ಲಿ ಹೆಚ್ಚು ಗಮನ ಸೆಳೆದ ಆಟಗಾರ ಯಶ್ ದಯಾಳ್. ಪ್ಲೇ ಆಫ್ ಪ್ರವೇಶಿಸಲು ಕೊನೆಯ ಓವರ್ನಲ್ಲಿ ಸಿಎಸ್ಕೆ ತಂಡಕ್ಕೆ 17 ರನ್ಗಳ ಅವಶ್ಯಕತೆಯಿತ್ತು. ಆಗ ಕ್ರೀಸ್ನಲ್ಲಿದ್ದದ್ದು ಮಹೇಂದ್ರ ಸಿಂಗ್ ಧೋನಿ ಎಂಬ ದೈತ್ಯ ಫಿನಿಷರ್ ಹಾಗೂ 2023ರ ಐಪಿಎಲ್ ಫೈನಲ್ ಪಂದ್ಯದ ಹೀರೋ ರವೀಂದ್ರ ಜಡೇಜಾ. ಯಶ್ ಎಸೆದ ಮೊದಲ ಎಸೆತದಲ್ಲಿ ಮಹೇಂದ್ರ ಸಿಂಗ್ ಧೋನಿ ಭರ್ಜರಿ ಸಿಕ್ಸರ್ ಸಿಡಿಸಿದರು.
ನಂತರ ಸಿಎಸ್ಕೆ ತಂಡದ ಗುರಿ 5 ಎಸೆತಗಳಲ್ಲಿ 11 ರನ್ಗಳಿಗೆ ಇಳಿಯಿತು. ಆದರೆ 2ನೇ ಎಸೆತದಲ್ಲಿ ಧೋನಿಯ ವಿಕೆಟ್ ಪಡೆದ ಯಶ್ ದಯಾಳ್ ನಂತರದ ನಾಲ್ಕು ಎಸೆತಗಳಲ್ಲಿ ನೀಡಿದ್ದು ಕೇವಲ 1 ರನ್ ಮಾತ್ರ. ಅದರಲ್ಲಿಯೂ ಕೊನೆಯ ಎರಡು ಎಸೆತಗಳಲ್ಲಿ ರವೀಂದ್ರ ಜಡೇಜಾರನ್ನು ಕಟ್ಟಿ ಹಾಕುವಲ್ಲಿ ಯಶ್ ದಯಾಳ್ ಅಕ್ಷರಶಃ ಯಶಸ್ವಿಯಾದರು. ಆ ಮೂಲಕ ಆರ್ಸಿಬಿ ತಂಡ ಅಸಾಧಾರಣ ಸಾಧನೆಯೊಂದನ್ನು ಸಾಧಿಸಿ ತೋರಿಸಲು ಕಾರಣವಾದರು.
ಆದರೆ, 2023ರ ಐಪಿಎಲ್ನಲ್ಲಿ ಯಶ್ ದಯಾಳ್ ಪರಿಸ್ಥಿತಿ ಭಿನ್ನವಾಗಿತ್ತು. ಕಳೆದ ಬಾರಿ ಅವರು ಗುಜರಾತ್ ಟೈಟಾನ್ಸ್ ತಂಡದಲ್ಲಿದ್ದರು. ಟೂರ್ನಿಯ 13ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಿದ್ದ ಗುಜರಾತ್ ತಂಡಕ್ಕೆ ಒಂದರ್ಥದಲ್ಲಿ ಯಶ್ ನುಂಗಲಾರದ ತುತ್ತಾಗಿ ಪರಿಣಮಿಸಿದ್ದರು. ಅಂತಿಮ ಓವರ್ ಎಸೆದ ದಯಾಳ್ಗೆ ರಿಂಕು ಸಿಂಗ್ ಸತತ 5 ಸಿಕ್ಸರ್ ಬಾರಿಸಿ ಕೊಲ್ಕತ್ತಾಗೆ ಗೆಲುವು ತಂದಿತ್ತಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ವಿಪರೀತ ಟೀಕೆ ಎದುರಿಸಿದ್ದ ಯಶ್ ದಯಾಳ್, ನೋವಿನಲ್ಲೇ ಅನಾರೋಗ್ಯದಿಂದ ಚಿಂತಿತರಾಗಿ ತೂಕ ಕಳೆದುಕೊಂಡಿದ್ದರು. ಮತ್ತೊಂದೆಡೆ, ಆ ಪಂದ್ಯದ ಹೀರೋ ರಿಂಕು ಸಿಂಗ್ ರಾಷ್ಟ್ರೀಯ ತಂಡದ ಪರ ಪಾದಾರ್ಪಣೆಗೈದರು.
ಚೇತರಿಸಿಕೊಂಡು ದೇಶಿ ಕ್ರಿಕೆಟ್ ಋತುವಿನಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಸಹ ಗುಜರಾತ್ ಟೈಟಾನ್ಸ್ ಯಶ್ ದಯಾಳ್ರನ್ನು 2024ರ ಐಪಿಎಲ್ಗೆ ತಂಡದಲ್ಲಿ ಉಳಿಸಿಕೊಳ್ಳಲಿಲ್ಲ. ಇತ್ತ ಆರ್ಸಿಬಿ ತಂಡ ಅವರನ್ನ ಖರೀದಿಸಿದಾಗಲೂ ಸಹ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಓರ್ವ ಮಾಜಿ ಕ್ರಿಕೆಟಿಗರಂತೂ ಯಶ್ ಆರ್ಸಿಬಿ ಸೇರ್ಪಡೆ ಕುರಿತು ಕಾಮೆಂಟರಿ ಬಾಕ್ಸ್ನಲ್ಲಿ ಕುಳಿತೇ 'ಒಬ್ಬರ ಕಸ ಮತ್ತೊಬ್ಬರಿಗೆ ವಜ್ರ' ಎಂಬ ಮಾತನ್ನಾಡಿದ್ದರು. ಆದರೆ, ಅದೇ ಯಶ್ ಇಂದು ಆರ್ಸಿಬಿ ಪಾಲಿನ ಹೀರೋ ಆಗಿ ಮಿಂಚಿದ್ದಾರೆ. ಆರ್ಸಿಬಿ ತಂಡಕ್ಕೆ ಗೆಲುವು ತಂದುಕೊಟ್ಟ ಯಶ್ ದಯಾಳ್ ಅವರ ಪ್ರದರ್ಶನಕ್ಕೆ ಸ್ವತಃ ರಿಂಕು ಸಿಂಗ್ ಮೆಚ್ಚಿ ಕೊಂಡಾಡಿದ್ದಾರೆ. ಆರ್ಸಿಬಿ ಪರ ಈ ಬಾರಿ 13 ಪಂದ್ಯಗಳನ್ನಾಡಿರುವ ಯಶ್, 28.13ರ ಸರಾಸರಿಯಲ್ಲಿ 15 ವಿಕೆಟ್ ಪಡೆದು ಮಿಂಚಿದ್ದಾರೆ.
ಇದನ್ನೂ ಓದಿ:'ದೇವರ ಪ್ಲಾನ್ ಬೇಬಿ': ಯಶ್ ದಯಾಳ್ ಅದ್ಭುತ ಬೌಲಿಂಗ್ಗೆ ರಿಂಕು ಸಿಂಗ್ ಸೆಲ್ಯೂಟ್ - Rinku Singh Post on Yash Dayal