ಉತ್ತರ ಕನ್ನಡದಲ್ಲಿ ಧಾರಾಕಾರ ಮಳೆ (ETV Bharat) ಕಾರವಾರ:ನಿರಂತರವಾಗಿ ಭಾರೀ ಮಳೆ ಸುರಿದ ಪರಿಣಾಮ ಕಾರವಾರ, ಶಿರಸಿ ಸೇರಿದಂತೆ ಕೆಲವು ನಗರ ಪ್ರದೇಶಗಳು ಜಲಾವೃತಗೊಂಡಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಜನರನ್ನು ಈಗಾಗಲೇ ಸುರಕ್ಷಿತ ಸ್ಥಳಗಳಲ್ಲಿರುವ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಇಲ್ಲಿ ಎಲ್ಲಾ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. ಆದರೆ, ಜಿಲ್ಲೆಯಲ್ಲಿ ಇನ್ನೂ 3 ರಿಂದ 4 ದಿನಗಳು ಹೆಚ್ಚಿನ ಮಳೆಯಾಗುವ ಸಾಧ್ಯತೆಗಳಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಗೆ 2 ರಾಷ್ಟಿಯ ವಿಪತ್ತು ನಿರ್ವಹಣಾ ತಂಡಗಳು ಆಗಮಿಸುತ್ತಿವೆ.
ತುರ್ತು ಕಾರ್ಯಚರಣೆ ತಂಡ ನಿಯೋಜನೆ:ಎನ್ಡಿಆರ್ಎಫ್ನ ಪ್ರತಿ ತಂಡದಲ್ಲಿ ತಲಾ 25 ಮಂದಿ ರಕ್ಷಣಾ ಸಿಬ್ಬಂದಿಗಳಿರಲಿದ್ದು, ಯಾವುದೇ ರೀತಿಯ ತುರ್ತು ಕಾರ್ಯಚರಣೆಯನ್ನು ಕೈಗೊಳ್ಳಲು ಅಗತ್ಯವಿರುವ ಎಲ್ಲಾ ಅಗತ್ಯ ರಕ್ಷಣಾ ಸಾಧನಗಳೊಂದಿಗೆ ಬರುವ ಈ ತಂಡವನ್ನು ಕಾರವಾರ, ಕುಮಟಾ ಮತ್ತು ಅಂಕೋಲ ಭಾಗದಲ್ಲಿ ನಿಯೋಜಿಸಲಾಗುವುದು. ಈಗಾಗಲೇ ಈ ತಂಡಗಳು ಬೆಂಗಳೂರಿನಿಂದ ಹೊರಟ್ಟಿದ್ದು ಶುಕ್ರವಾರ ಈ ತಂಡಗಳು ಜಿಲ್ಲೆಗೆ ಆಗಮಿಸಲಿವೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದ್ದಾರೆ.
230ಕ್ಕೂ ಅಧಿಕ ಮಂದಿಗೆ ಆಶ್ರಯ:ಜಿಲ್ಲೆಯಲ್ಲಿ ತೀವ್ರ ಮಳೆಯಿಂದ ತೊಂದರೆಗೊಳಗಾದ ಹೊನ್ನಾವರ, ಕುಮಟಾ ಮತ್ತು ಅಂಕೋಲ ತಾಲೂಕು ವ್ಯಾಪ್ತಿಯಲ್ಲಿನ ವಿವಿಧ ಗ್ರಾಮಗಳ ಸಾರ್ವಜನಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ್ದು, ಅವರಿಗೆ ಸಮೀಪದ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ನೀಡಲಾಗಿದೆ. ಜಿಲ್ಲೆಯಲ್ಲಿ ಹೊನ್ನಾವರದಲ್ಲಿ 4, ಕುಮಟಾ ದಲ್ಲಿ 2 ಮತ್ತು ಅಂಕೋಲದಲ್ಲಿ 1 ಸೇರಿದಂತೆ ಒಟ್ಟು 7 ಕಾಳಜಿ ಕೆಂದ್ರಗಳನ್ನು ತೆರೆದಿದ್ದು, ಈ ಕೇಂದ್ರಗಳಲ್ಲಿ 230ಕ್ಕೂ ಅಧಿಕ ಮಂದಿಗೆ ಆಶ್ರಯ ನೀಡಲಾಗಿದೆ. ಅಗತ್ಯವಿದ್ದಲ್ಲಿ ಇನ್ನೂ ಹೆಚ್ಚಿನ ಕಾಳಜಿ ಕೇಂದ್ರಗಳನ್ನು ತೆರೆಯುವಂತೆ ಸಂಬಂಧಪಟ್ಟ ತಾಲೂಕುಗಳ ತಹಶೀಲ್ದಾರ್ಗಳಿಗೆ ಸೂಚನೆ ನೀಡಲಾಗಿದೆ.
24*7 ಸಿಬ್ಬಂದಿ ಅಲರ್ಟ್:ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವವರಿಗೆ ಎಲ್ಲಾ ಅಗತ್ಯ ಮೂಲಭೂತ ಸೌಕರ್ಯಗಳೊಂದಿಗೆ ಊಟದ ವ್ಯವಸ್ಥೆ ಮತ್ತು ರಾತ್ರಿ ತಂಗಲು ಅಗತ್ಯವಿರುವ ಎಲ್ಲಾ ಸೌಕರ್ಯಗಳನ್ನು ಒದಗಿಸಲಾಗಿದ್ದು, ವೈದ್ಯರ ತಂಡದಿಂದ ಆರೋಗ್ಯ ಪರಿಶೀಲನೆ ಮತ್ತು ಅಗತ್ಯವಿರುವ ಔಷಧ ಸೌಲಭ್ಯವನ್ನು ಒದಗಿಸಲಾಗಿದೆ. ವ್ಯಾಪಕ ಮಳೆಯಾಗುತ್ತಿರುವ ಪ್ರದೇಶಗಳು ಸೇರಿದಂತೆ ಜಿಲ್ಲೆಯಾದ್ಯಂತ ಕಂದಾಯ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಯ ಅಧಿಕಾರಿಗಳು ಕೇಂದ್ರಸ್ಥಾನದಲ್ಲಿದ್ದು, 24*7 ಸಿಬ್ಬಂದಿ ಅಲರ್ಟ್ ಆಗಿದ್ದು, ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ, ಅಗತ್ಯ ನೆರವು ಒದಗಿಸುವಂತೆ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ತುಂಬಿ ಹರಿಯುತ್ತಿರುವ ಅಘನಾಶಿನಿ, ಶರಾವತಿ ನದಿ:ಅಘನಾಶಿನಿ ಮತ್ತು ಶರಾವತಿ ನದಿ ತುಂಬಿ ಹರಿಯುತ್ತಿದ್ದು, ಈ ಭಾಗದಲ್ಲಿ ತಗ್ಗು ಪ್ರದೇಶದಲ್ಲಿ ವಾಸಿಸುತ್ತಿರುವವರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಿದ್ದು, ಈ ಪ್ರದೇಶಗಳ ಮೇಲೆ ನಿರಂತರ ನಿಗಾ ವಹಿಸಲಾಗಿದೆ. ಕಾಳಿ ನದಿಯಲ್ಲಿನ ಅಪ್ಪರ್ ಕಾನೇರಿ ಅಣೆಕಟ್ಟೆಯಲ್ಲಿ ನೀರಿನ ಪ್ರಮಾಣ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ತಗ್ಗು ಪ್ರದೇಶದಲ್ಲಿ ವಾಸಿಸುತ್ತಿರುವರಿಗೆ ಸರಕ್ಷತ ಸ್ಥಳಗಳಿಗೆ ತೆರಳಲು ಈಗಾಗಲೇ ಸೂಚಿಸಲಾಗಿದೆ.
ಸಹಾಯವಾಣಿ:ವ್ಯಾಪಕ ಮಳೆಯ ಹಿನ್ನೆಲೆ ಕುಮಟಾ, ಭಟ್ಕಳ ಮತ್ತು ಹೊನ್ನಾವರ ತಾಲೂಕಿನ ಎಲ್ಲಾ ಶಾಲಾ ಕಾಲೇಜುಗಳಿಗೆ ಜುಲೈ 5 ರಂದು ರಜೆ ಘೋಷಣೆ ಮಾಡಲಾಗಿದೆ. ಜಿಲ್ಲೆಯಲ್ಲಿ ಮಳೆಯಿಂದ ಯಾವುದೇ ಮಾನವ ಜೀವ ಹಾನಿಯಾಗದಂತೆ ಎಲ್ಲಾ ರೀತಿಯ ಗರಿಷ್ಠ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವಂತೆ ಎಲ್ಲಾ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಜಾನುವಾರು ಪ್ರಾಣ ಹಾನಿ ತಡೆಗೂ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದು, ಸಾರ್ವಜನಿಕರು ಯಾವುದೇ ಸಮಸ್ಯೆಗಳಲ್ಲಿ ಉಚಿತ ತುರ್ತ ಸಹಾಯವಾಣಿ ಸಂಖ್ಯೆ 1077ಗೆ ಹಾಗೂ ಮೊಬೈಲ್ ಸಂಖ್ಯೆ- 94835 11015 ಕರೆ, ಸಂದೇಶ, ವಾಟ್ಸ್ಆ್ಯಪ್ ಸಂದೇಶ ಮತ್ತು ವಾಟ್ಸ್ಆ್ಯಪ್ ಕರೆ ಮಾಡಿ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದ್ದಾರೆ.
ಇದನ್ನೂ ಓದಿ:ಮಳೆ: ಉಡುಪಿ ಜಿಲ್ಲೆಯ 3 ತಾಲೂಕಿನ ಶಾಲಾ-ಕಾಲೇಜುಗಳಿಗೆ ಇಂದು ರಜೆ - Udupi Rain