ಬೆಂಗಳೂರು :ವಾಯುಭಾರ ಕುಸಿತದ ಪರಿಣಾಮ ನಿನ್ನೆಯಿಂದ ಮಳೆ ಆರಂಭವಾಗಿದ್ದು, ಈಗ ಕೂಡ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಭಾರಿ ಮಳೆ ಮುಂದುವರೆದಿದೆ.
ಶನಿವಾರದಿಂದ ಬೆಂಗಳೂರಿಗೆ ಮತ್ತೆ ವರುಣನ ಆಗಮನವಾಗಿದ್ದು, ಮಳೆಯ ಅಬ್ಬರಕ್ಕೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ರಸ್ತೆಗಳು ಜಲಾವೃತಗೊಂಡಿವೆ. ಶಾಂತಿನಗರ, ಜಯನಗರ, ತ್ಯಾಗರಾಜನಗರ, ರಾಜರಾಜೇಶ್ವರಿ ನಗರ, ಶ್ರೀನಗರ, ಕೆ. ಆರ್ ಮಾರ್ಕೆಟ್, ಟೌನ್ ಹಾಲ್, ಕಾರ್ಪೊರೇಷನ್ ಸರ್ಕಲ್, ಮೈಸೂರು ರಸ್ತೆೆ, ವಿಜಯನಗರ, ಮಾಗಡಿ ರಸ್ತೆ, ರಾಜಾಜಿ ನಗರ, ಮಲ್ಲೇಶ್ವರ, ಯಶವಂತಪುರ, ಜಾಲಹಳ್ಳಿ, ಪೀಣ್ಯ, ಹೆಬ್ಬಾಳ, ಯಲಹಂಕ ಸೇರಿದಂತೆ ಬಹುತೇಕ ಕಡೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ.
ನಗರದಲ್ಲಿ ಭಾರಿ ಮಳೆಯಿಂದಾದ ಅವಾಂತರ (ETV Bharat) ಎಂದಿನಂತೆ ಸಾಯಿ ಲೇಔಟ್, ರಮಣಶ್ರೀ ಕ್ಯಾಲಿಫೋರ್ನಿಯ ಬಡಾವಣೆಗಳಲ್ಲಿ ಭಾರಿ ಸಮಸ್ಯೆಗಳು ಸೃಷ್ಟಿಯಾಗಿವೆ. ಈ ಬಡಾವಣೆಗಳು ಅಕ್ಷರಶಃ ದ್ವೀಪದಂತಾಗಿ ನಿವಾಸಿಗಳು ಮನೆಯಿಂದ ಹೊರಬರಲಾಗದೆ ಪರದಾಡುತ್ತಿದ್ದಾರೆ. ಕೆಂಗೇರಿ, ಆರ್. ಆರ್ ನಗರ ಸುತ್ತಮುತ್ತ ಜೋರು ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಉತ್ತರಹಳ್ಳಿ ಭಾಗದಲ್ಲೂ ಮಳೆ ಅಬ್ಬರಿಸಿದ್ದು, ಮನೆಗಳಿಗೆ ಮಳೆ ನೀರು ನುಗ್ಗಿ, ರಸ್ತೆಗಳು ಜಲಾವೃತಗೊಂಡಿವೆ. ಬಿಬಿಎಂಪಿ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಶನಿವಾರ ತಡರಾತ್ರಿಯಿಂದ ಸುರಿಯುತ್ತಿರುವ ಮಳೆಗೆ ನಗರದ ಹಲವು ಕಡೆಗಳಲ್ಲಿ ಅಪಾರ್ಟ್‌ಮೆಂಟ್‌ಗೆ ನೀರು ನುಗ್ಗಿದ್ದು, ನಿವಾಸಿಗಳು ಮತ್ತೆ ಆತಂಕಕ್ಕೆ ಒಳಗಾಗಿದ್ದಾರೆ. ಶನಿವಾರ ರಾತ್ರಿ ಮತ್ತು ಭಾನುವಾರ ಬೆಳಗ್ಗೆಯಿಂದ ಸುರಿದ ಮಳೆಯಿಂದ ನಗರದ ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡುತ್ತಿದ್ದಾರೆ.
ಅಪಾರ್ಟ್‌ಮೆಂಟ್‌ಗೆ ಮಳೆ ನೀರು ನುಗ್ಗಿರುವುದು (ETV Bharat) ಇನ್ನು ಮೈಸೂರು ರಸ್ತೆಯುದ್ದಕ್ಕೂ ಕಾರ್‌ಶೋ ರೂಂಗಳಿಗೆ, ರಾಜಕಾಲುವೆಗೆ ನೀರು ನುಗ್ಗಿ ಕೋಟಿಗಟ್ಟಲೆ ನಷ್ಟವಾಗಿದೆ. ಹೊಸ ಕಾರುಗಳ ಒಳಗೆ ನೀರು ತುಂಬಿಕೊಂಡಿದೆ. ರಾಜರಾಜೇಶ್ವರಿ ನಗರದ ಬೆಮೆಲ್ ಲೇಔಟ್, ಪಟ್ಟಣಗೆರೆ, ಗ್ಲೋಬಲ್ ಟೆಕ್ ಪಾರ್ಕ್ ಸುತ್ತಮುತ್ತ ನೀರು ನಿಂತಿದ್ದು, ವಾಹನಗಳು ಸಂಚರಿಸಲು ಸಾಧ್ಯವಾಗುತ್ತಿಲ್ಲ.
ಮೈಸೂರು ರಸ್ತೆಯ ಜಯರಾಮದಾಸ್ ಜಂಕ್ಷನ್ ಹತ್ತಿರ ನೀರು ನಿಂತಿರುವುದರಿಂದ ಬೆಂಗಳೂರು ನಗರ ಮತ್ತು ಕೆಂಗೇರಿ ಕಡೆಗೆ ಹೋಗುವ ರಸ್ತೆಯಲ್ಲಿ ನಿಧಾನಗತಿಯ ಸಂಚಾರ ಕಂಡು ಬರುತ್ತಿದೆ. ಮಡಿವಾಳ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ರೂಪೇನ ಅಗ್ರಹಾರದ ಬಳಿ ನೀರು ನಿಂತಿದ್ದರಿಂದ ಹೊಸೂರು ಮುಖ್ಯ ರಸ್ತೆ ಮೂಲಕ ನಗರದ ಒಳ ಭಾಗಕ್ಕೆ ಬರುವ ಭಾಗದಲ್ಲಿ ಸಂಚಾರ ವ್ಯತ್ಯಯವಾಗಿದೆ.
ಭಾರಿ ಮಳೆಯಿಂದಾಗಿ ಕಾರುಗಳು ಮುಳುಗಡೆ (ETV Bharat) ಹಬ್ಬದ ತಯಾರಿಗೆ ತಣ್ಣೀರು ಎರಚಿದ ಮಳೆ: ದೀಪಾವಳಿ ಹಬ್ಬದ ತಯಾರಿಯಲ್ಲಿರುವ ಜನರಿಗೆ ಹಾಗೂ ವ್ಯಾಪಾರಸ್ಥರಿಗೆ ಸಮಸ್ಯೆ ಎದುರಾಗಿದೆ. ಪೂಜಾ ಸಾಮಗ್ರಿಗಳು, ಅಲಂಕಾರಿಕ ವಸ್ತುಗಳು ಹಾಗೂ ಹೂವು ಹಣ್ಣಿನ ವ್ಯಾಪಾರಿಗಳು ಹಬ್ಬದ ಹಿನ್ನೆಲೆ ಭರ್ಜರಿ ಆದಾಯದ ನಿರೀಕ್ಷೆಯಲ್ಲಿದ್ದರು. ಆದರೆ ಮಳೆಯಿಂದಾಗಿ ವ್ಯಾಪಾರ ಮಂಕಾಗುವ ಸಾಧ್ಯತೆ ಇರುವುದರಿಂದ ಚಿಂತೆಗೀಡಾಗಿದ್ದಾರೆ.
ಹಲವು ಮರಗಳು ಧರೆಗೆ :ರಾಜಾಜಿನಗರದ ಶಿವನಹಳ್ಳಿ ಸಿಗ್ನಲ್ ಬಳಿ ರಸ್ತೆಗೆ ಅಡ್ಡಲಾಗಿ ಮರದ ರೆಂಬೆಕೊಂಬೆಗಳು ಬಿದ್ದ ಪರಿಣಾಮ ರಸ್ತೆ ಸಂಚಾರಕ್ಕೆ ಅಡಚಣೆಯಾಗಿತ್ತು. ಪಾಲಿಕೆ ಸಿಬ್ಬಂದಿ ಮರ ತೆರವು ಕಾರ್ಯ ನಡೆಸಿದರು.
ಸಾಯಿಬಾಬಾ ಲೇಔಟ್ ಜಲಾವೃತ: ಇನ್ನು ಕೆ. ಆರ್ ಪುರ ವಿಧಾನಸಭಾ ಕ್ಷೇತ್ರದ ಹೊರಮಾವು ವಾರ್ಡಿನ ಸಾಯಿಬಾಬಾ ಲೇಔಟ್ ಮತ್ತೆ ಜಲಾವೃತಗೊಂಡಿದ್ದು, ಮೊನ್ನೆಯಷ್ಟೇ ಫೈರ್ ಎಂಜಿನ್ ಮೂಲಕ ನೀರನ್ನು ಹೊರ ಹಾಕಲಾಗಿತ್ತು. ಈಗ ಲೇಔಟ್ ಮತ್ತೆ ಜಲಾವೃತಗೊಂಡಿದೆ.
ಇದೀಗ ಮತ್ತೆ ಮನೆಗೆ ನೀರು ನುಗ್ಗಿದೆ. ಮನೆಯಲ್ಲಿ ಮೂರು ಇಂಚುಗಳಷ್ಟು ನೀರಿದೆ. ಹಾಸಿಗೆ, ಸೋಫಾ ಎಲ್ಲವೂ ಹಾಳಾಗಿವೆ. ಬಡಾವಣೆಯಲ್ಲಿ ಕಳೆದ 10 ವರ್ಷಗಳಿಂದ ಇದೇ ರೀತಿಯ ಸಮಸ್ಯೆ ಕಾಡುತ್ತಿದೆ. ಶಾಸಕ ಬೈರತಿ ಬಸವರಾಜ್ ಆಗಲಿ, ಬಿಬಿಎಂಪಿ ಅಧಿಕಾರಿಗಳಾಗಲಿ ತಮ್ಮ ಕಷ್ಟದ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದು ನಿವಾಸಿಯೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ :ಬೆಂಗಳೂರಲ್ಲಿ ಅಬ್ಬರಿಸಿದ ಮಳೆರಾಯ: ಕೆಲವೆಡೆ ಟ್ರಾಫಿಕ್ ಜಾಮ್