ವಿಜಯಪುರ:ಜಿಲ್ಲೆಯಾದ್ಯಂತ ರಾತ್ರಿಯಿಡೀ ಧಾರಾಕಾರ ಮಳೆ ಸುರಿದಿದೆ. ಸುಮಾರು ಐದು ಗಂಟೆಗೂ ಹೆಚ್ಚು ಕಾಲ ವರುಣ ಅಬ್ಬರಿಸಿದ್ದಾನೆ. ಹಲವೆಡೆ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ಕೆಲವೆಡೆ ರಸ್ತೆಗಳು ಜಲಾವೃತಗೊಂಡು ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.
ನಗರದಲ್ಲಿ ಮಳೆ ಅವಾಂತರ: ವಿಜಯಪುರ ನಗರದಲ್ಲಿ ಭಾರಿ ಮಳೆಯಿಂದಾಗಿ ಹಲವು ಅವಾಂತರಗಳಾಗಿವೆ. ಇಲ್ಲಿನ ಶಾಲಿ ನಗರ, ಭಾಗವಾನ್ ಕಾಲೊನಿ, ರಹೀಂ ನಗರ, ಮುಜಾವರ್ ಪ್ಲಾಟ್, ಪ್ರೈಂ ನಗರ, ಕನ್ನಾನ್ ನಗರ, ನೆಹರೂ ನಗರದಲ್ಲಿನ ಮನೆ, ಅಂಗಡಿಗಳು ಜಲಾವೃತವಾದವು. ಕೆಲವು ಬೈಕ್ಗಳು ನೀರಲ್ಲಿ ಮುಳುಗಿದವು. ಮನೆಗಳಿಗೆ ನೀರು ನುಗ್ಗಿ ಹಾನಿ ಉಂಟಾಗಿದ್ದು, ಜನರು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರವಾಗಿದ್ದಾರೆ.
ವಿಜಯಪುರದಲ್ಲಿ ಧಾರಾಕಾರ ಮಳೆ (ETV Bharat) ತುಂಬಿ ಹರಿಯುತ್ತಿರುವ ಹಳ್ಳ-ಕೊಳ್ಳಗಳು: ತಿಕೋಟಾ ತಾಲೂಕಿನಲ್ಲಿ ಹಳ್ಳ-ಕೊಳ್ಳ, ಬಾಂದಾರಗಳು ತುಂಬಿ ಹರಿಯುತ್ತಿವೆ. ಕಳ್ಳಕವಟಗಿ ಗ್ರಾಮದ ಸಂಗಮನಾಥ ಹಳ್ಳ ಭರ್ತಿಯಾಗಿ ಸೇತುವೆ ಜಲಾವೃತವಾಗಿದೆ. ಪರಿಣಾಮ ವಿಜಯಪುರಕ್ಕೆ ಹೋಗುವ ಜಾಲಗೇರಿ, ಹುಬನೂರ ರಸ್ತೆ ಕೆಲಕಾಲ ಸ್ಥಗಿತಗೊಂಡು, ಸವಾರರು ಪರದಾಡಿದರು.
ಸಂಗಮನಾಥ ದೇಗುಲ ಜಲಾವೃತ: ಸಂಗಮನಾಥ ದೇವಾಲಯದ ಆವರಣ ಸಂಪೂರ್ಣ ನೀರಿನಿಂದ ತುಂಬಿದೆ. ಗರ್ಭಗುಡಿಗೂ ಮಳೆ ನೀರು ನುಗ್ಗಿದೆ. ಗುಡಿಯಲ್ಲಿ ನಾಲ್ಕೈದು ಅಡಿ ನೀರು ನಿಂತಿದ್ದರಿಂದ ಇಂದು ಪೂಜಾ ಕೈಂಕರ್ಯಗಳು ನಡೆದಿಲ್ಲ. ಮಧ್ಯಾಹ್ನ ಗರ್ಭಗುಡಿಯಲ್ಲಿ ನೀರು ಇಳಿಕೆಯಾದರೆ ಪೂಜೆ ನೆರವೇರಿಸುತ್ತೇವೆ ಎಂದು ಅರ್ಚಕ ಮಲ್ಲಯ್ಯ ಹಿರೇಮಠ ತಿಳಿಸಿದರು.
ಮೈದುಂಬಿದ ಡೋಣಿ ನದಿ: ಜಿಲ್ಲೆಯ ಸಾರವಾಡ ಗ್ರಾಮದ ಬಳಿ ಡೋಣಿ ನದಿ ಮೈದುಂಬಿ ಹರಿಯುತ್ತಿದೆ. ನದಿ ತೀರದ ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿದೆ. ಗ್ರಾಮಸ್ಥರಲ್ಲಿ ಪ್ರವಾಹ ಭೀತಿ ಉಂಟಾಗಿದೆ. ಇನ್ನೊಂದೆಡೆ, ಈ ಮಳೆ ಹಿಂಗಾರು ಬಿತ್ತನೆಗೆ ಅನುಕೂಲವಾಗಲಿದೆ ಎಂದು ರೈತರು ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ನಗರಕ್ಕೆ ಕೇಳದ ಗುಡ್ಡಳ್ಳಿ ಜನರ ಗೋಳು, ಜೋಲಿಯೇ ಆಂಬ್ಯುಲೆನ್ಸ್: ರಸ್ತೆ ನಿರ್ಮಾಣಕ್ಕೆ ಗ್ರಾಮಸ್ಥರ ಆಗ್ರಹ - No Road For Village
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಉತ್ತರ ಕನ್ನಡಕ್ಕೆ ರೆಡ್, ಇತರ 6 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ - Karnataka Rain Forecast